ಬೆಂಗಳೂರು: ಸಿಲಿಕಾನ್ ಸಿಟಿ ಜಗತ್ತಿನಾದ್ಯಂತ ಹೆಸರು ಗಳಿಸಿದೆ, ಐಟಿ ತವರು ಎಂಬ ಕೀರ್ತಿ ಕೂಡ ನಮ್ಮ ಬೆಂಗಳೂರು ನಗರಕ್ಕೆ ಇದೆ. ನಮ್ಮ ಹೆಮ್ಮೆಯ ಬೆಂಗಳೂರನ್ನು ಇಷ್ಟು ಕ್ಲೀನ್ & ನೀಟ್ ಆಗಿ ಇಡಲು ಕಾರಣ ಆಗಿರುವುದು ಪೌರಕಾರ್ಮಿಕರು. ಇದೇ ಪೌರಕಾರ್ಮಿಕರಿಗಾಗಿ ಇದೀಗ ಭರ್ಜರಿ ಸುದ್ದಿಯೊಂದು ಸರ್ಕಾರದ ಕಡೆಯಿಂದ ಸಿಕ್ಕಿದೆ.
ಬೇಸಿಗೆ ಆರಂಭಕ್ಕೂ ಮೊದಲೇ ಬಿಬಿಎಂಪಿ ಕೈಗೊಂಡಿರುವ ಕ್ರಮ ಸಾಕಷ್ಟು ಮೆಚ್ಚುಗೆಗೂ ಪಾತ್ರವಾಗಿದೆ. ಈ ಬಾರಿ ಅತಿಹೆಚ್ಚು ಬಿಸಿಲು ಬೆಂಗಳೂರಿಗೆ ಬಂದು ಎರಗುವ ಮುನ್ಸೂಚನೆ ಇದ್ದು, ಪೌರಕಾರ್ಮಿಕರು ತಮ್ಮ ಕೆಲಸದ ನಡುವೆ ಆಯಾಸವಾದರೆ ವಿಶ್ರಾಂತಿ ಪಡೆಯಲು ಅನುಕೂಲ ಆಗಲಿದೆ. ಅಲ್ಲದೆ ಈ ಕೊಠಡಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ಈಗ 42 ಸ್ಥಳಗಳಲ್ಲಿ ಶಾಶ್ವತ ಕೊಠಡಿ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಆದಷ್ಟು ಬೇಗನೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ಶಾಶ್ವತ ಕೊಠಡಿ ನಿರ್ಮಾಣ ಮಾಡಿ ಎಂದಿದ್ದಾರೆ.