ಹಾಸನ: ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ, ಕಾಂಗ್ರೆಸ್ ಹಾಗೂ ಕೆಎಂಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬೇಲೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರೇವಣ್ಣ, “ನಾನು ಸಾಕಿದ ಗಿಣಿ ಹದ್ದಾಗಿ ಕುಕ್ಕಿತು” ಎಂದು ಕುಹಕವಾಡಿದರು. ಇಂದಿನ ರಾಜಕಾರಣದಲ್ಲಿ ನಂಬಿಕೆ ದ್ರೋಹಿಗಳು ಹೆಚ್ಚಾಗಿದ್ದಾರೆ ಎಂಬುದನ್ನು ಸಾಣೇನಹಳ್ಳಿ ಸ್ವಾಮೀಜಿಗಳು ಹೇಳಿದ್ದಾರೆ. ಅದು ನನಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
“ಸ್ವಾಮೀಜಿಗಳು ಹೇಳಿದ್ದು ಸತ್ಯ. ಈ ಜಿಲ್ಲೆಯಲ್ಲಿಯೂ ಕೆಲವರು ನಂಬಿಕೆ ದ್ರೋಹ ಮಾಡಿದ್ದಾರೆ. ಕೆಲ ಸಂದರ್ಭಗಳಲ್ಲಿ ಕುಮಾರಣ್ಣ ಒಳ್ಳೆಯವರನ್ನೇ ನಂಬುವುದಿಲ್ಲ. ಏನು ಮಾಡುತ್ತಾರೆ, ನಂಬಿಸಿ ಬಿಡುತ್ತಾರೆ” ಎಂದು ಅಸಮಾಧಾನ ಹೊರಹಾಕಿದರು.ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ಮುಗಿಸಬೇಕೆಂದು ಕಾಂಗ್ರೆಸ್ ಪಣ ತೊಟ್ಟಿದೆ ಎಂದು ಆರೋಪಿಸಿದ ರೇವಣ್ಣ,
“ನಿನ್ನೆ ಅರಸೀಕೆರೆಯಿಂದ ನಾನು ಹೋರಾಟ ಆರಂಭಿಸಿದ್ದೇನೆ” ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ರಾಜ್ಯದ 31 ಜಿಲ್ಲೆಗಳಲ್ಲಿ ಸಭೆ ಮಾಡಿಲ್ಲ, ಆದರೆ ದೇವೇಗೌಡರ ಶಕ್ತಿ ಕುಂದಿಸಲು ಹಾಸನದಲ್ಲಿ ಮಾತ್ರ ಎರಡು ಸಭೆ ನಡೆಸಿದೆ ಎಂದು ಟೀಕಿಸಿದರು.
