ಹಾಸನ : ಒಳಗಿನವರಾಗಲಿ, ಹೊರಗಿನವರಾಗಲಿ – ರೇವಣ್ಣನ ರಾಜಕೀಯ ಮುಗಿದುಹೋಯಿತು ಎಂದುಕೊಂಡವರು ತಪ್ಪು. ಅದು ಸುಳ್ಳು. ಮುಂದಿನ ದಿನಗಳಲ್ಲಿ ನಾನು, ಕುಮಾರಸ್ವಾಮಿ ಮತ್ತು ದೇವೇಗೌಡರು ಏನೆಂದು ತೋರಿಸುತ್ತೇವೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ತೀವ್ರ ಎಚ್ಚರಿಕೆ ನೀಡಿದರು.
ಹಾಸನ ಹಾಲು ಒಕ್ಕೂಟದ ವಾರ್ಷಿಕ ಸಭೆ ಹಾಗೂ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ಕುಟುಂಬ ಏನೂ ಅಂತ ತೋರಿಸುವ ಸಮಯ ಬರುತ್ತದೆ. ದೇವೇಗೌಡರಿಗೆ ಹಿಂದೆ ಅನೇಕರು ನೋವು ಕೊಟ್ಟಿದ್ದಾರೆ, ನಾನೂ ಅನುಭವಿಸಿದ್ದೇನೆ. ಹಾಲು ಒಕ್ಕೂಟದಲ್ಲೂ ಸಾಕಷ್ಟು ಅನುಭವಗಳಿವೆ. ಕಾಲ ಬಂದಾಗ ಎಲ್ಲವನ್ನೂ ಬಿಚ್ಚಿಡುತ್ತೇನೆ. ಈ ಜಿಲ್ಲೆಯಷ್ಟೇ ಅಲ್ಲದೆ ಹೊರಜಿಲ್ಲೆಯ ರಾಜಕಾರಣಿಗಳೂ ‘ರೇವಣ್ಣನದು ಮುಗಿದುಹೋಯ್ತು’ ಎಂದುಕೊಂಡಿದ್ದರೆ ಅದು ಸುಳ್ಳು. ಮುಂದಿನ ದಿನಗಳಲ್ಲಿ ನಾನು, ನನ್ನ ಕುಟುಂಬವೇನು ಅಂತ ತೋರಿಸುತ್ತೇವೆ” ಎಂದು ಕಿಡಿಕಾರಿದರು.
ಧರ್ಮಸ್ಥಳದ ಮಂಜುನಾಥನ ಹೆಸರನ್ನು ಉಲ್ಲೇಖಿಸಿದ ರೇವಣ್ಣ, “ನಾವು ಮಂಜುನಾಥನ ಮೇಲೆ ನಂಬಿಕೆ ಇಟ್ಟಿದ್ದೇವೆ. ಹಿಂದೆ ರಾಜಕಾರಣಿಗಳು ತಪ್ಪು ಮಾಡಿದರೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡುತ್ತಿದ್ದರು. ಆದರೆ ಇವತ್ತು ಕೆಲ ಕಿಡಿಗೇಡಿಗಳು ಆ ಪವಿತ್ರ ಹೆಸರನ್ನೇ ಹಾಳುಮಾಡಲು ಹೊರಟಿದ್ದಾರೆ. ಇದು ದುಃಖಕರ” ಎಂದರು.