ಹಾಸನ : ಸಾಹಿತ್ಯವೆಂಬುದು ಮಾನವನ ಅಂತರಂಗವನ್ನು ಬೆಳಗುವ ಶಕ್ತಿಯಾಗಿದೆ. ಆದರೆ ಎಲ್ಲರೂ ಕವಿಗಳಾಗಲು ಸಾಧ್ಯವಿಲ್ಲ. ಹತ್ತಿರದಿಂದ ಜೀವನವನ್ನು ಅನುಭವಿಸಿ, ಪರಂಪರೆಯನ್ನು ಅಧ್ಯಯನ ಮಾಡಿ, ಅನುಭವಗಳನ್ನು ಹೃದಯದಲ್ಲಿ ಗಟ್ಟಿಯಾಗಿ ಅಳವಡಿಸಿಕೊಂಡು ಸರಳ ಭಾಷೆಯ ಮೂಲಕ ಲೋಕಕ್ಕೆ ಹಂಚುವವನೇ ಕವಿ ಆಗುತ್ತಾನೆ ಎಂದು ಎವಿಕೆ ಕಾಲೇಜಿನ ಪ್ರಾಂಶುಪಾಲ ಸೀಚಾ. ಯತೀಶ್ವರ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಾಜ್ಯ ಘಟಕ) ಹಾಗೂ ಹೂವಿನಹಡಗಲಿ ಜಿಲ್ಲಾ ಘಟಕದ ವತಿಯಿಂದ ಧೀಮಂತ ನಾಯಕ ಹೆಚ್.ಬಿ. ಜ್ವಾಲನಯ್ಯ ಅವರ ಸ್ಮರಣಾರ್ಥವಾಗಿ ಕೃತಿ ಬಿಡುಗಡೆ, ಕವಿಕಾವ್ಯ ಗಾಯನ, ಕಲಾಕುಂಚ, ಭರತನಾಟ್ಯ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, “ಸಾಹಿತ್ಯವು ಎಲ್ಲರಿಗೂ ಆಕರ್ಷಕವಾದ ಕ್ಷೇತ್ರ. ಆದರೆ ಅದರಲ್ಲಿ ತೊಡಗುವವರು ಮಾತ್ರ ನಿಜವಾದ ಪರಿವರ್ತನೆಯನ್ನು ಕಾಣುತ್ತಾರೆ. ಸಾಹಿತ್ಯದಿಂದ ದೂರ ಉಳಿದವರಿಗೆ ಜೀವನದಲ್ಲಿ ಆಳವಾದ ಅರ್ಥ ಸಿಗುವುದಿಲ್ಲ. ಕವಿ ಜಗತ್ತಿನ ಅನುಭವಗಳನ್ನು ತನ್ನೊಳಗೆ ತುಂಬಿಕೊಂಡು, ಸರಳ ಶಬ್ದಗಳ ಮೂಲಕ ಅದಕ್ಕೆ ಸ್ವರೂಪ ನೀಡುವವನು. ನಿಜವಾದ ಕವಿ ಆತ್ಮಸ್ಥೈರ್ಯದಿಂದ ಜನತೆಗೆ ಸಂದೇಶ ನೀಡುತ್ತಾನೆ. ಆದ್ದರಿಂದ ಕವಿತೆ ಬರೆಯುವುದು ಕೇವಲ ಪದಗಳ ಆಟವಲ್ಲ, ಅದು ಜೀವನದ ನೈಜ ಅನುಭವದ ಅಭಿವ್ಯಕ್ತಿ” ಎಂದು ಹೇಳಿದರು.
ಹಿರಿಯ ಪತ್ರಕರ್ತ ಹಾಗೂ ಚಿಂತಕರಾದ ವೆಂಕಟೇಶ್ ಅವರು ಕೃತಿ ಬಿಡುಗಡೆ ಮಾಡಿ ಮಾತನಾಡಿ, “ಇಂದಿನ ಸಾಹಿತ್ಯ ಕ್ಷೇತ್ರ ನೋವುಂಟುಮಾಡುವ ಸ್ಥಿತಿಯಲ್ಲಿದೆ. ಸಮಾಜದಲ್ಲಿ ಸಂಕಟಗಳ ಕೊರತೆ ಇಲ್ಲ. ಆದರೆ ಬರಹಗಾರರು ಅವನ್ನು ಕುರಿತು ಚಿಂತನೆ ಮಾಡುವುದಿಲ್ಲ. ಬದಲಿಗೆ ಇಂಟರ್‌ನೆಟ್‌ನಲ್ಲಿ ಹುಡುಕಿ ಕಾಪಿ-ಪೇಸ್ಟ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಸಾಹಿತ್ಯಕ್ಕೆ ಹಾನಿ ಮಾಡುತ್ತಿದೆ. ನಿಜವಾದ ಕವಿ ಅಥವಾ ಲೇಖಕನು ತನ್ನ ಆತ್ಮದಿಂದ ಬರೆಯುತ್ತಾನೆ. ಶಬ್ದದೊಂದಿಗೆ ಆಟವಾಡಿ, ಜನರ ಹೃದಯ ತಟ್ಟುವಂತೆ ಬರೆಯುವವನೇ ಕವಿ. ಕಲೆ ಮತ್ತು ಸಾಹಿತ್ಯವು ಮನುಷ್ಯನಿಗೆ ಚೇತನ ನೀಡುತ್ತದೆ, ಬದುಕಿಗೆ ಅರ್ಥ ನೀಡುತ್ತದೆ. ಸಾಹಿತ್ಯವಿಲ್ಲದೆ ಬದುಕು ನಿರಾಸವಾಗುತ್ತದೆ” ಎಂದು ವಿಷಾದ ವ್ಯಕ್ತಪಡಿಸಿದರು. ಸಾಹಿತ್ಯ ಕ್ಷೇತ್ರ ಪ್ರಸ್ತೂತದಲ್ಲಿ ನೋಡಿದರೇ ನೋವಾಗುತ್ತದೆ. ಎಲ್ಲಿ ಚಲನ ಶೀಲಗಳು ಇರುವುದಿಲ್ಲ ಆ ಕ್ಷೇತ್ರಗಳು ಜಡತ್ವದಿಂದ ಕೂಡಿರುತ್ತದೆ. ಈ ಸಮಾಜದಲ್ಲಿರುವ ಸಂಕಟಗಳ ಬಗ್ಗೆ ಸಾಹಿತ್ಯ ಬರೆಯಿರಿ. ಇತ್ತಿಚಿನ ದಿನಗಳಲ್ಲಿ ಈ ಸಂಕಟದ ಬಗ್ಗೆ ಯಾವ ಲೇಖಕರು ಯೋಚನೆ ಮತ್ತು ಚರ್ಚೆ ಮಾಡುತ್ತಿಲ್ಲ ಎಂದರು. ಗಾಯನ ಕೂಡ ಮೃದ ನೀಡುತ್ತದೆ. ಇದರಿಂದ ಮಾನಸಿಕ ಉಲ್ಲಾಸ ಸಿಗುತ್ತದೆ. ಕಲೆ ಎನ್ನುವುದು ಮನುಷ್ಯನಿಗೆ ಚೇತನ ನೀಡುತ್ತಿದೆ ಎಂದು ಕಿವಿಮಾತು ಹೇಳಿದರು. ಸಾಹಿತ್ಯ ಎನ್ನುವು ಇಲ್ಲದಿದ್ದರೇ ಬದುಕೆ ನಿರಾಸ ಆಗುತಿತ್ತು. ಭಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ. ಎಲ್ಲಾ ಮನಸ್ಸುಗಳು ನಿಸ್ವಾರ್ಥವಾಗಿ ಯೋಚಿಸುವ ಗುಣ ಬೆಳೆಸಿಕೊಳ್ಳಬೇಕು. ಸಾಹಿತ್ಯ, ಸಂಗೀತ, ಕಲೆ, ನಾಟಕ ಇವೆಲ್ಕಾ ಜೀವನಕ್ಕೆ ಆರೋಗ್ಯದ ವಾತಾವರಣ ನಿರ್ಮಿಸುತ್ತದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರೈತನ ಸಂಕಷ್ಡ, ಸಮಸ್ಯೆಗಳ ಬಗ್ಗೆ ಕವಿಗಳು ಗಮನಹರಿಸಬೇಕು. ಶಿಕ್ಷಣ ಇಂದು ಯಾವ ದಿಕ್ಕಿನತ್ತ ಸಾಗುತ್ತಿದೆ. ಶಿಕ್ಷಣಕ್ಕೆ ತನ್ನದೆಯಾದ ಮಹತ್ವವಿದೆ. ಒಂದು ಕಡೆ ತಂತ್ರಜ್ಞಾನ ಬಂದರೂ ಮನುಷ್ಯನ ಜೀವನ ಕಿತ್ತು ಕೊಳ್ಳುತ್ತಿದೆ. ಪ್ರಚಾರದ ಹಿಂದೆ ಹೋಗಬೇಡಿ, ಇವತ್ತು ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದೇವೆ. ಯುವಕರು ವ್ಯಾಸಂಗಕ್ಕೆ ಹೆಚ್ಚಿನ ಮಹತ್ವ ಕೊಡಬೇಕು.
ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ನೇತ್ರಾವತಿ, ಸಾಹಿತ್ಯದಲ್ಲಿ ದಿಬ್ಬೂರು ರಮೇಶ್, ರಂಗಭೂಮಿಯಲ್ಲಿ ಗ್ಯಾರಂಟಿ ರಾಮಣ್ಣ, ಸಾಮಾಜಿಕ ಸೇವೆಯಲ್ಲಿ ಕಲಾವತಿ ಮಧುಸೂಧನ್, ಕಲಾಕುಂಚದಲ್ಲಿ ಆರ್. ಶಿವಕುಮಾರ್, ಪರಿಸರ ಸಂರಕ್ಷಣೆಯಲ್ಲಿ ವೈ.ಬಿ. ಕಾಂತರಾಜು, ಶಿಕ್ಷಣ-ಸಾಹಿತ್ಯದಲ್ಲಿ ಎ.ಎನ್. ಮಧುಸೂದನ್ ಹಾಗೂ ಸಾಹಿತ್ಯ-ಪತ್ರಿಕೋದ್ಯಮದಲ್ಲಿ ವಿಶ್ವಾಸ್ ಡಿ. ಗೌಡ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಯುವರಾಜ್, ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡ, ಜ್ಞಾನಧಾರೆ ಶಿಕ್ಷಣ ಮತ್ತು ಸಂಶೋಧನ ಸಂಸ್ಥಾಪಕ ಎ.ಎನ್. ಮಧುಸೂದನ್, ಬರಹಗಾರರ ವೇದಿಕೆ ಜಿಲ್ಲಾಧ್ಯಕ್ಷ ಡಿ. ಸುಂದರೇಶ್, ಕೃತಿಕಾರ ವಿಶ್ವಾಸ್ ಡಿ. ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್, ಹಿರಿಯ ಉಪನಿರ್ದೇಶಕ ಡಾ. ಹೆಚ್.ಇ. ಅಶೋಕ್, ಮನೆ ಮನೆ ಕವಿಗೋಷ್ಠಿ ಸಂಚಾಲಕಿ ಸುಕನ್ಯ ಮುಕುಂದ, ಸಂಘದ ಜಿಲ್ಲಾ ಅಧ್ಯಕ್ಷೆ ಚೈತ್ರ ಮಂಜೇಗೌಡ, ಸಾಹಿತಿ ಐರಾಳು ಶಿವರಾಂ, ಜ್ವಾಲನಯ್ಯ ಅವರ ಮೊಮ್ಮಗ ಹೆಚ್.ಹೆಚ್. ಪೌದನ್ ರಾಜು, ಕೀಬೋರ್ಡ್ ವಾದಕ ಡಿ.ಎನ್. ಯೋಗೀಶ್, ತಬಲವಾದಕ ಬೇಲೂರು ನಾಗೇಶ್, ತಾಲ್ಲೂಕು ಅಧ್ಯಕ್ಷ ಸೋಮನಾಯಕ್, ಮರಿಗೌಡ ಸೇರಿದಂತೆ ಇತರರು ಹಾಜರಿದ್ದರು.