Home ರಾಜ್ಯ ಹಾವೇರಿ ಪಹಣಿ ತಿದ್ದುಪಡಿಗೆ ರೈತನಿಂದ ಲಂಚ ಸ್ವೀಕಾರ: ಹಾವೇರಿ ಲೋಕಾಯುಕ್ತ ಬಲೆಗೆ ಬಿದ್ದ ಕಾಗಿನೆಲೆ ಕಂದಾಯ ನಿರೀಕ್ಷಕ...

ಪಹಣಿ ತಿದ್ದುಪಡಿಗೆ ರೈತನಿಂದ ಲಂಚ ಸ್ವೀಕಾರ: ಹಾವೇರಿ ಲೋಕಾಯುಕ್ತ ಬಲೆಗೆ ಬಿದ್ದ ಕಾಗಿನೆಲೆ ಕಂದಾಯ ನಿರೀಕ್ಷಕ ರಾಮನಗೌಡ!

0

ಹಾವೇರಿ: ಜಮೀನಿನ ಕಂದಾಯ ದಾಖಲೆಗಳನ್ನು ಸರಿಪಡಿಸಲು ಮತ್ತು ನವೀಕರಿಸಲು ರೈತರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆ ಹೋಬಳಿಯ ಕಂದಾಯ ನಿರೀಕ್ಷಕ ರಾಮನಗೌಡ ಚನ್ನಬಸವಗೌಡ ದ್ಯಾಮನಗೌಡರ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಸಿ. ಮಧುಸೂದನ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯ ವೇಳೆ ಆರೋಪಿ ಅಧಿಕಾರಿ 5,000 ರೂಪಾಯಿ ಲಂಚದ ಹಣದೊಂದಿಗೆ ಸಿಕ್ಕಿಬಿದ್ದಿದ್ದಾರೆ. ತಾಲ್ಲೂಕಿನ ಕಾಶಂಬಿ ಗ್ರಾಮದ ರೈತ ನಾಗರಾಜ್ ಓಲೇಕಾರ್ ಎಂಬುವವರು ತಮ್ಮ ಜಮೀನಿನ ಪಹಣಿ (RTC) ದಾಖಲೆಗಳ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದರು.

ಪಹಣಿಯ ಕಾಲಂ 11 ರಲ್ಲಿದ್ದ ನಿಯಮಾವಳಿಯೊಂದನ್ನು ತೆಗೆದುಹಾಕಿ, ಅದರ ಜಾಗದಲ್ಲಿ ಹಳೆಯ ನಿಯಮವನ್ನೇ ಮುಂದುವರಿಸಲು ಅವರು ಕಚೇರಿಗೆ ಅಲೆದಾಡುತ್ತಿದ್ದರು. ಆದರೆ ಈ ಕಾನೂನುಬದ್ಧ ಕೆಲಸವನ್ನು ಮಾಡಿಕೊಡಲು ಕಂದಾಯ ನಿರೀಕ್ಷಕ ರಮನಗೌಡ ಒಟ್ಟು 12,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.

ಲಂಚ ನೀಡಲು ಇಷ್ಟವಿಲ್ಲದ ರೈತ ನಾಗರಾಜ್ ಈ ಕುರಿತು ಹಾವೇರಿ ಲೋಕಾಯುಕ್ತ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದರು. ಯೋಜನೆಯನ್ವಯ ಗುರುವಾರ ಕುಮ್ಮೂರ ಕ್ರಾಸ್ ಬಳಿ ರೈತನಿಂದ ಮುಂಗಡವಾಗಿ (Advance) 5,000 ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಹೊಂಚು ಹಾಕಿದ್ದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತದನಂತರ ಆರೋಪಿಯನ್ನು ಹೆಚ್ಚಿನ ತನಿಖೆ ಮತ್ತು ಕಡತಗಳ ಪರಿಶೀಲನೆಗಾಗಿ ಬ್ಯಾಡಗಿ ತಹಶೀಲ್ದಾರ್ ಕಚೇರಿಗೆ ಕರೆದೊಯ್ದು, ಅಧಿಕೃತವಾಗಿ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.

You cannot copy content of this page

Exit mobile version