ದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಗೃಹ ಸಚಿವ ಅಮಿತ್ ಶಾ ಅವರು ಗೈರುಹಾಜರಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯಸಭಾ ಸಭಾಪತಿ ಸಿ. ಪಿ. ರಾಧಾಕೃಷ್ಣನ್ ಅವರು ಗುರುವಾರ ಕೇಂದ್ರ ಸರ್ಕಾರಕ್ಕೆ ಮನವಿಯೊಂದನ್ನು ಮಾಡಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ಉದ್ದೇಶಿಸಿ ಮಾತನಾಡಿದ ಸಭಾಪತಿ, ಅಮಿತ್ ಶಾ ಅವರು ಸದನಕ್ಕೆ ಆಗಮಿಸಬೇಕೆಂಬ ಮನವಿಯನ್ನು ಪರಿಶೀಲಿಸುವಂತೆ ಕೋರಿದರು.
“ಗೃಹ ಸಚಿವರು ಸದನಕ್ಕೆ ಹಾಜರಾಗಬೇಕೆಂಬ ನನ್ನ ಮನವಿಯನ್ನು ಪರಿಶೀಲಿಸಬೇಕಾಗಿ ವಿನಂತಿಸುತ್ತೇನೆ. ಸಂಸದೀಯ ವ್ಯವಹಾರಗಳ ಸಚಿವರಾಗಿ ವಿರೋಧ ಪಕ್ಷಗಳ ಈ ಬೇಡಿಕೆಯನ್ನು ನೀವೇ ಗೃಹ ಸಚಿವರ ಗಮನಕ್ಕೆ ತರಬೇಕು,” ಎಂದು ಸಭಾಪತಿ ಹೇಳಿದರು.
ಇನ್ನೊಂದೆಡೆ, ಗೃಹ ಸಚಿವ ಅಮಿತ್ ಶಾ ಅವರು ತಕ್ಷಣವೇ ಸದನಕ್ಕೆ ಹಾಜರಾಗಬೇಕೆಂದು ಗುರುವಾರವೂ ವಿರೋಧ ಪಕ್ಷಗಳು ಭಾರಿ ಗದ್ದಲ ನಡೆಸಿದವು. ವಿದ್ಯಾರ್ಥಿಗಳ ‘ಚಲೋ ಸಂಸತ್’ ಚಳವಳಿಯ ಸಂದರ್ಭದಲ್ಲಿ ಅವರ ಮೇಲೆ ನಡೆದ ಅಮಾನವೀಯ ಪೋಲಿಸ್ ದಾಳಿ ಹಾಗೂ ಬಲಪ್ರಯೋಗದ ಕುರಿತು ಗೃಹ ಸಚಿವರೇ ಸ್ವತಃ ಸದನದಲ್ಲಿ ಉತ್ತರಿಸಬೇಕೆಂದು ವಿಪಕ್ಷಗಳು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿವೆ.
