ಮುಂಬೈ: ಪರೀಕ್ಷಾ ಅಕ್ರಮಗಳು ಮತ್ತು ನೀಟ್ ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ‘ದೇಶವಿರೋಧಿಗಳು’ ಎಂದು ಬಿಂಬಿಸಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಗುರುವಾರ ಪ್ರತಿಪಾದಿಸಿದ್ದಾರೆ.ಯುವಜನತೆಯ ಕುಂದುಕೊರತೆಗಳು ನೈಜವಾಗಿದ್ದು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಅಸಮಾಧಾನವನ್ನು ವ್ಯಕ್ತಪಡಿಸುವ ಹಾಗೂ ಸಂವಾದ ನಡೆಸುವ ಕಾನೂನುಬದ್ಧ ಮಾರ್ಗವಾಗಿದೆ ಎಂದು ಅವರು ಕರೆ ನೀಡಿದ್ದಾರೆ.
ಮುಂಬೈನಲ್ಲಿ ‘ಐಐಎಮ್‌ಯುಎನ್’ (IIMUN) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಹೊಸ ಪೀಳಿಗೆಯ ಧ್ವನಿಯನ್ನು ಸರ್ಕಾರ ಮತ್ತು ಸಮಾಜ ಆಲಿಸಬೇಕಾಗಿದೆ ಎಂದರು.
“ಜೆನ್ ಝೀ (Gen Z) ಪ್ರತಿಭಟನೆ ನಡೆಸುತ್ತಿದ್ದರೆ, ಅವರು ದೇಶವಿರೋಧಿಗಳಲ್ಲ. ಅವರು ನಮ್ಮದೇ ಜನರು, ನಮ್ಮ ಮುಂದಿನ ಪೀಳಿಗೆ. ಜೆನ್ ಜಿ ಪ್ರತಿಭಟನೆ ಮಾಡಬಾರದು ಎಂದು ನಾನು ಹೇಳುವುದಿಲ್ಲ, ಆದರೆ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಸೂಕ್ತ ಮಾರ್ಗಗಳಿವೆ. ಪ್ರತಿಭಟನೆ ಎನ್ನುವುದು ಸಂವಾದದ ಒಂದು ರೂಪ,” ಎಂದು ಭಾಗವತ್ ಅಭಿಪ್ರಾಯಪಟ್ಟರು.
‘ತಾರ್ಕಿಕ ಉತ್ತರಗಳನ್ನು ಬಯಸುವ ಜೆನ್ ಜಿ’
ಇಂದಿನ ಯುವಪೀಳಿಗೆ ಹಿಂದಿನ ಪೀಳಿಗೆಗಿಂತ ಭಿನ್ನವಾಗಿದೆ ಎಂದ ಭಾಗವತ್, ಅವರು ಅಧಿಕಾರ ಅಥವಾ ಆಜ್ಞೆಗಳನ್ನು ಕುರುಡಾಗಿ ಒಪ್ಪಿಕೊಳ್ಳುವ ಬದಲಿಗೆ ತಾರ್ಕಿಕ ವಿವರಣೆಗಳನ್ನು ಬಯಸುತ್ತಾರೆ ಎಂದರು.
“ಜೆನ್ ಜಿ ಮತ್ತು ಜೆನ್ ಆಲ್ಫಾ ಪೀಳಿಗೆಯು ಪ್ರತಿಯೊಂದಕ್ಕೂ ತಾರ್ಕಿಕ ಉತ್ತರಗಳನ್ನು ಅಪೇಕ್ಷಿಸುತ್ತದೆ. ಅವರು ನಮ್ಮ ಪೀಳಿಗೆಗಿಂತ ಹೆಚ್ಚು ಪ್ರಾಮಾಣಿಕರಾಗಿದ್ದಾರೆ,” ಎಂದ ಅವರು, ಪ್ರಸ್ತುತ ಎದ್ದಿರುವ ಪ್ರತಿಭಟನೆಗಳು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಎತ್ತಿಹಿಡಿಯುತ್ತಿವೆ ಎಂದರು.
ಅಲ್ಲದೆ, ಶಿಕ್ಷಣವನ್ನು ಕೇವಲ ವ್ಯಾಪಾರವಾಗಿ ನೋಡಬಾರದು ಎಂದು ಪ್ರತಿಪಾದಿಸಿದ ಅವರು, “ಶಿಕ್ಷಣವು ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತೆ ರೂಪುಗೊಳ್ಳಬೇಕು. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಇಡೀ ಸಮಾಜವೇ ಕೊಡುಗೆ ನೀಡಬೇಕು. ಶಿಕ್ಷಣಕ್ಕೆ ಜಿಡಿಪಿಯ ಶೇಕಡಾ 6 ರಷ್ಟು ಹಣವನ್ನು ವಿನಿಯೋಗಿಸಬೇಕು,” ಎಂದು ಪ್ರತಿಪಾದಿಸಿದರು.
ಜಂತರ್ ಮಂತರ್ ಪ್ರತಿಭಟನೆಯ ಕುರಿತು ಪ್ರತಿಕ್ರಿಯೆ
ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ನಡೆದ ಲಾಠಿಚಾರ್ಜ್ ಹಾಗೂ ಪೋಲಿಸ್ ಕ್ರಮದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಭಾಗವತ್, ತಮ್ಮ ಬಳಿ ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲ, ಆದರೆ ತಕ್ಷಣವೇ ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಮನವಿ ಮಾಡಿದರು.
“ಮೊದಲು ಅಲ್ಲಿ ಏನು ನಡೆಯಿತು ಮತ್ತು ಏಕೆ ನಡೆಯಿತು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಂಪೂರ್ಣ ಅಭಿಪ್ರಾಯ ವ್ಯಕ್ತಪಡಿಸಲು ಅಗತ್ಯವಿರುವ ಮಾಹಿತಿ ನನ್ನ ಬಳಿ ಇಲ್ಲ. ಆದರೆ, ಯಾರ ಮೇಲಾದರೂ ಕುರುಡು ನಂಬಿಕೆ ಇಡಲು ನನಗೆ ಹೇಳಿದರೆ, ನಾನು ಖಂಡಿತವಾಗಿಯೂ ಈ ಜೆನ್ ಜಿ ಪೀಳಿಗೆಯ ಮೇಲೆ ನಂಬಿಕೆ ಇಡುತ್ತೇನೆ,” ಎಂದರು.
ಆರಂಭಿಕ ಹಂತದಲ್ಲಿ ವಿದ್ಯಾರ್ಥಿಗಳು ಮತ್ತು ಸರ್ಕಾರದ ನಡುವೆ ಸಂವಾದ ವಿಫಲವಾಗಿದ್ದೇ ಯುವಜನರು ಬೀದಿಗಿಳಿಯಲು ಪ್ರಮುಖ ಕಾರಣವಾಯಿತು ಎಂಬುದನ್ನು ಅವರು ಒಪ್ಪಿಕೊಂಡರು.
ಪೋಷಕರು ಮತ್ತು ಸಮಾಜಕ್ಕೆ ಕಿವಿಮಾತು
ತಮ್ಮ ಸ್ವಂತ ನಡವಳಿಕೆಯ ಮೂಲಕ ಮಕ್ಕಳನ್ನು ಸರಿಯಾದ ಹಾದಿಯಲ್ಲಿ ನಡೆಸಬೇಕೇ ಹೊರತು, ಪ್ರತಿಯೊಂದಕ್ಕೂ ಹೊಸ ಪೀಳಿಗೆಯನ್ನು ದೂಷಿಸಬಾರದು ಎಂದು ಭಾಗವತ್ ಪೋಷಕರಿಗೆ ಸಲಹೆ ನೀಡಿದರು. ಇಂದಿನ ಯುವಜನರು ಪ್ರಾಮಾಣಿಕತೆಗೆ ಸ್ಪಂದಿಸುತ್ತಾರೆ ಮತ್ತು ಹಿರಿಯರನ್ನು ಅಧಿಕಾರಸ್ಥರಿಗಿಂತ ಹೆಚ್ಚಾಗಿ ಸ್ನೇಹಿತರಂತೆ ಕಾಣಲು ಬಯಸುತ್ತಾರೆ. ಆದ್ದರಿಂದ ಕುಟುಂಬಗಳಲ್ಲಿ ಸಂಘರ್ಷದ ಬದಲು ಮುಕ್ತ ಸಂವಾದದ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.
