Home ಬ್ರೇಕಿಂಗ್ ಸುದ್ದಿ ಹಾಸನ ಎಸ್.ಸಿ. ಜಾತಿ ಸಮೀಕ್ಷೆಯ ಗೊಂದಲ ಸರಿಪಡಿಸಿ – ಕೃಷ್ಣದಾಸ್ ಮನವಿ

ಎಸ್.ಸಿ. ಜಾತಿ ಸಮೀಕ್ಷೆಯ ಗೊಂದಲ ಸರಿಪಡಿಸಿ – ಕೃಷ್ಣದಾಸ್ ಮನವಿ

ಹಾಸನ : ಹಾಲಿ ನಡೆಯುತ್ತಿರುವ ಎಸ್ಸಿ ಜಾತಿ ಸಮೀಕ್ಷೆಯಲ್ಲಿ ಉಂಟಾಗುತ್ತಿರುವ ಗೊಂದಲಗಳಿದ್ದು, ಸರಿಪಡಿಸಬೇಕೆಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡ ಕೃಷ್ಣದಾಸ್ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ನೇತೃತ್ವದಲ್ಲಿ ಆಯೋಗವನ್ನು ನೇಮಿಸಲಾಗಿದ್ದು ಈ ಆಯೋಗ ರಾಜ್ಯಾದ್ಯಂತ ಗಣತಿದಾರರನ್ನು ನೇಮಿಸಿಕೊಂಡು ಎಸ್ ಸಿ ಪಟ್ಟಿಯಲ್ಲಿರುವ 101 ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಮಾಡುತ್ತಿದೆ. ಈವರೆಗೆ 20 ದಿನಗಳ ಕಾಲ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದ್ದು, ಗಣತಿದಾರರು ಹಾಗೂ ಎಸ್ಪಿ ಕುಟುಂಬಗಳ ನಡುವೆ ಸರಿಯಾದ ಹೊಂದಾಣಿಕೆಯಾಗದೆ ಗೊಂದಲ ಉಂಟಾಗಿದೆ. ಈ ಸಮೀಕ್ಷೆ ಸಂದರ್ಭದಲ್ಲಿ ಎಸ್ಪಿ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ಗೊಂದಲಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಜಸ್ಟಿಸ್ ನಾಗಮೋಹನ ದಾಸ್ ಆಯೋಗಕ್ಕೆ ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ದೂರು ನೀಡಲಾಗಿದೆ ಎಂದರು. ಈ ಬಗ್ಗೆ ಸ್ಪಂದಿಸಿದ ಆಯೋಗ ಸಮೀಕ್ಷೆ ಕಾರ್ಯದ ದಿನಾಂಕವನ್ನು ವಿಸ್ತರಿಸಿ ಜೂನ್ ಒಂದನೇ ತಾರೀಕಿಗೆ ಸಮೀಕ್ಷೆ ಕಾರ್ಯಗಳು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದೆ. ಆದರೆ ಈ ಸಮೀಕ್ಷೆ ಕಾರ್ಯ ಗಣತಿದಾರರ ಬೇಜವಾಬ್ದಾರಿಯಿಂದಾಗಿ ವಿಫಲಗೊಳ್ಳುವ ಆತಂಕ ಎದುರಾಗಿದೆ. ಈ ಬಗ್ಗೆ ಹಾಸನದ ಜಿಲ್ಲಾಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ದಿ: 28.05.2025 ರಂದು ಸಂಜೆ 5 ಗಂಟೆಗೆ ದಲಿತ ಸಂಘಟನೆಗಳ ಮುಖಂಡರ ಸಭೆ ಕರೆದು ಸುದೀರ್ಘ ಚರ್ಚೆ ಮಾಡಿ ಸಮೀಕ್ಷೆ ಕಾರ್ಯದಲ್ಲಿ ಆಗುತ್ತಿರುವ ಗೊಂದಲಗಳನ್ನು ಗಂಭೀರವಾಗಿ ಆಲಿಸಿದರು. ಈ ಸಮಸ್ಯೆಗಳ ಬಗ್ಗೆ ಸನ್ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.

ಅವುಗಳೆಂದರೆ :
ಗಣತಿದಾರರು ನಗರ ಪ್ರದೇಶಗಳಲ್ಲಿ ಮನೆ ಮನೆ ಸಮೀಕ್ಷೆ ಮಾಡದೆ ಯಾವುದೋ ಅಂಗಡಿಯವರು ಅಥವಾ ಅಲ್ಲಿಯ ಪುರಸಭೆ, ನಗರಸಭೆ ಸದಸ್ಯರನ್ನು ವಿಚಾರಿಸಿಕೊಂಡು ಆಯೋಗದ ನಿರ್ದೇಶನಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಸಮೀಕ್ಷೆ ಮಾಡಲಾಗುತ್ತಿದೆ ಈ ಬಗ್ಗೆ ಆಯೋಗ ಮತ್ತು ಜಿಲ್ಲಾಡಳಿತ ಗಂಭೀರ ಚಿಂತನ ನಡೆಸಬೇಕು ಎಂದು ಹೇಳಿದರು. ಸಮೀಕ್ಷೆ ಕಾರ್ಯದಲ್ಲಿ ಆಯೋಗದ ನಿರ್ದೇಶನದಂತೆ ಸುಮಾರು 42 ಪ್ರಶ್ನಾವಳಿಗಳನ್ನು ಕೇಳಲಾಗುತ್ತಿದ್ದು, ಗಣತಿದಾರರು ಕೇವಲ ಮೂರು ನಾಲ್ಕು ಪ್ರಶ್ನೆಗಳನ್ನು ಕೇಳಿ, ಉಳಿದ ಪ್ರಶ್ನೆಗಳಿಗೆ ಸ್ವತಹ ತಮಗಿಷ್ಟ ಬಂದಂತೆ ಬರೆದುಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಆಯೋಗ ಮತ್ತು ಜಿಲ್ಲಾಡಳಿತ ನಿರ್ದೇಶನ ನೀಡಬೇಕು. ಸಮೀಕ್ಷೆ ಸಮಯದಲ್ಲಿ ಒಂದು ಕುಟುಂಬದಲ್ಲಿ ಐದು ಜನ ಸದಸ್ಯರಿದ್ದರೆ ಮೂರು ಜನರನ್ನು ನೋಂದಾಯಿಸಿಕೊಂಡು ಉಳಿದ ಸದಸ್ಯರನ್ನು ನಾಳೆ ಬಂದು ನೋಂದಾಯಿಸಿಕೊಳ್ಳುತ್ತೇವೆ ಎಂದು ಹೇಳಿ ಹೋದ ಗಣತಿದಾರರು ಈವರೆಗೆ ಮನೆಗಳ ಹತ್ತಿರ ಬಂದಿಲ್ಲ. ಈ ಬಗ್ಗೆ ಗಮನಹರಿಸಬೇಕು. ಎರಡನೇ ಬಾರಿಗೆ ಸಮೀಕ್ಷ ಕಾರ್ಯ ದಿನಾಂಕಗಳನ್ನು ವಿಸ್ತರಿಸಿ ಆಯೋಗ ಪ್ರಕಟಣೆ ನೀಡಿತ್ತು. ಆದರೆ ಹಾಸನ ಜಿಲ್ಲೆ ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶವಾಗಿದ್ದು ಎರಡನೇ ಅವಧಿಗೆ ಸಮೀಕ್ಷೆ ಕಾರ್ಯವನ್ನು ವಿಸ್ತರಿಸಿದ ನಂತರ ಹಾಸನ ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿದ್ದು ಸಮೀಕ್ಷೆ ಕಾರ್ಯದಲ್ಲಿ ಗಣತಿದಾರರು ತೊಡಗಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಈ ಬಗ್ಗೆ ಆಯೋಗ ಗಮನಹರಿಸಬೇಕು ಆದುದರಿಂದ ಈ ಬಗ್ಗೆ ಆಯೋಗ ಗಂಭೀರವಾಗಿ ಚಿಂತಿಸಿ ಇನ್ನೊಂದು ಬಾರಿ ಸಮೀಕ್ಷೆ ಕಾರ್ಯದ ದಿನಾಂಕವನ್ನು ವಿಸ್ತರಿಸಬೇಕೆಂದು ಕೋರುತ್ತೇವೆ. ಜಿಲ್ಲೆಯ ಸಕಲೇಶಪುರ ತಾಲೂಕು ಮತ್ತು ಬೇಲೂರು ತಾಲೂಕುಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಸಮೀಕ್ಷೆಗೆ ನೀಡಿರುವ ಆಪ್, ನೆಟ್ವರ್ಕ್ ಇಲ್ಲದೆ ತುಂಬಾ ತೊಡಕಾಗಿದೆ. ಆದುದರಿಂದ ಆಯೋಗ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದರು.
ಎರಡನೇ ಹಂತದ ಸಮೀಕ್ಷೆ ಕಾರ್ಯದಲ್ಲಿ ಮನೆ ಮನೆಯ ಸಮೀಕ್ಷೆಯಿಂದ ಹೊರಗುಳಿದಿರುವ ಎಸ್ಪಿ ಕುಟುಂಬಗಳು ವಿವರಗಳನ್ನು ನೀಡಲು ಚುನಾವಣಾ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಗಣತಿದಾರರಿಗೆ ಮಾಹಿತಿ ನೀಡಬೇಕು. ಮೂರನೇ ಹಂತದ ಸಮೀಕ್ಷೆಯಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳಲು ಎಸ್ಪಿ ಕುಟುಂಬಗಳಿಗೆ ಅವಕಾಶ ನೀಡಲಾಗಿದೆ. ಆದುದರಿಂದ ಮೊದಲನೇ ಮತ್ತು ಎರಡನೇ ಸಮೀಕ್ಷೆ ಕಾರ್ಯದಿಂದ ತಪ್ಪಿಸಿಕೊಂಡಿರುವ ಎಸ್ಸಿ ಕುಟುಂಬಗಳು online ನಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಜಾತಿ ಜನಗಣತಿಯ ಸಮೀಕ್ಷೆ ಕಾರ್ಯದ ಮೇಲುಸ್ತುವಾರಿ ವಹಿಸಿರುವ ಹಾಸನ ಜಿಲ್ಲಾಸಮಾಜ ಕಲ್ಯಾಣ ಇಲಾಖೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿ ನಿರ್ಲಕ್ಷ್ಯ ಮಾಡದೆ ಗಣತಿದಾರರ ಸಭೆ ಕರೆದು, ನಿರ್ಲಕ್ಷ ಮತ್ತು ಬೇಜವಾಬ್ದಾರಿಯಿಂದ ವರ್ತಿಸುವ ಗಣತಿದಾರರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಈ ಜಾತಿ ಸಮೀಕ್ಷೆಯು ಅತ್ಯಂತ ಗಂಭೀರ ಹಾಗೂ ಮಹಾತ್ವಪೂರ್ಣ ಕೆಲಸವಾಗಿದ್ದು ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳ ಮುಖಂಡರು ಕಾರ್ಯಕರ್ತರು ವಿದ್ಯಾರ್ಥಿಗಳು ನಿಮ್ಮ ನಿಮ್ಮ ಊರುಗಳಿಗೆ ತೆರಳಿ ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳಲು ಸಹಕರಿಸಬೇಕು ಹಾಗೂ ಜಿಲ್ಲೆಯಲ್ಲಿ ಬೇಡ ಜಂಗಮ ಜಾತಿಗೆ ಸೇರಿದ ಯಾವುದೇ ಕುಟುಂಬಗಳು ಇಲ್ಲ ಆದರೆ ವೀರಶೈವ ಲಿಂಗಾಯಿತರು ಬೇಡ ಜಂಗಮರ ಹೆಸರಿನಲ್ಲಿ ಸಮೀಕ್ಷೆಯಲ್ಲಿ ನೊಂದಾಯಿಸುವAತೆ ಅಧಿಕಾರಿಗಳಿಗೆ ಒತ್ತಡ ಹಾಕಿದ್ದಾರೆ ಈ ಬಗ್ಗೆ ಆಯೋಗ ಮತ್ತು ಜಿಲ್ಲಾಡಳಿತ ಪರಿಶೀಲಿಸಬೇಕು. ಈ ಎಲ್ಲಾ ಅಂಶಗಳನ್ನು ನ್ಯಾಯಮೂರ್ತಿ ಎಚ್‌ಎನ್ ನಾಗಮೋಹನ ದಾಸ್ ಆಯೋಗ ಮತ್ತು ಜಿಲ್ಲಾಡಳಿತ ತುರ್ತುಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ, ಹಾಸನ ಜಿಲ್ಲೆ ಒತ್ತಾಯಪೂರ್ವಕವಾಗಿ ಮನವಿ ಮಾಡುತ್ತೇವೆ. ಈ ಬಗ್ಗೆ ಎಸ್‌ಸಿ ಪಟ್ಟಿಯಲ್ಲಿರುವ 101 ಜಾತಿಗಳು ಜಾಗೃತರಾಗಬೇಕೆಂದು ಸಮಿತಿ ಮನವಿ ಮಾಡುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಆರ್.ಪಿ.ಐ. ಸತೀಶ್, ಅಂಬೂಗ ಮಲ್ಲೇಶ್, ಹರೀಶ್ ಉಳುವಾರೆ, ಶಿವಮ್ಮ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version