Home ದೇಶ ಎಎಪಿ ಆಡಳಿತವಿರುವ ಪಂಜಾಬಿನಲ್ಲೂ ಇದೇ ಧೈರ್ಯ ತೋರಿಸಿ: ಕಾಕ್‌ರೋಚ್ ಜನತಾ ಪಾರ್ಟಿಗೆ ಸಚಿನ್ ಪೈಲಟ್ ಸವಾಲು

ಎಎಪಿ ಆಡಳಿತವಿರುವ ಪಂಜಾಬಿನಲ್ಲೂ ಇದೇ ಧೈರ್ಯ ತೋರಿಸಿ: ಕಾಕ್‌ರೋಚ್ ಜನತಾ ಪಾರ್ಟಿಗೆ ಸಚಿನ್ ಪೈಲಟ್ ಸವಾಲು

0

ಇತರ ರಾಜ್ಯಗಳಂತೆ ಆಮ್ ಆದ್ಮಿ ಪಕ್ಷ (ಎಎಪಿ) ಆಡಳಿತವಿರುವ ಪಂಜಾಬ್‌ನಲ್ಲೂ ಅಷ್ಟೇ ಧೈರ್ಯ ಮತ್ತು ಕಠಿಣ ಪ್ರಶ್ನೆಗಳೊಂದಿಗೆ ಸರ್ಕಾರಿ ಶಾಲೆಗಳ ಆಡಿಟ್ ನಡೆಸಿ ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಹಾಗೂ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸಚಿನ್ ಪೈಲಟ್ ಕಾಕ್‌ರೋಚ್ ಜನತಾ ಪಾರ್ಟಿಗೆ (ಸಿಜೆಪಿ) ಸವಾಲು ಹಾಕಿದ್ದಾರೆ.

ಸಿಜೆಪಿಯ ಸಹ ಸಂಚಾಲಕ ಸೌರವ್ ದಾಸ್ ನೇತೃತ್ವದ ತಂಡವು ಪಂಜಾಬ್‌ನ ‘ಸ್ಕೂಲ್ ಆಫ್ ಎಮಿನೆನ್ಸ್’, ಸರ್ಕಾರಿ ಸೀನಿಯರ್ ಸೆಕೆಂಡರಿ ಶಾಲೆ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿತ್ತು. ಸ್ಕೂಲ್ ಆಫ್ ಎಮಿನೆನ್ಸ್‌ನಲ್ಲಿ ಈಜುಕೊಳ, ಬ್ಯಾಡ್ಮಿಂಟನ್ ಕೋರ್ಟ್, ಎಐ ಲ್ಯಾಬ್ ಮತ್ತು ದಿವ್ಯಾಂಗರಿಗೆ ರ‍್ಯಾಂಪ್ ಸೌಲಭ್ಯಗಳಿದ್ದು, ಉಳಿದೆರಡು ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಕಂಡುಬಂದಿತ್ತು. ಈ ಶಾಲೆಗಳ ಶೌಚಾಲಯ ವ್ಯವಸ್ಥೆ ಇನ್ನಷ್ಟು ಉತ್ತಮವಾಗಿರಬೇಕಿತ್ತು ಎಂದು ದಾಸ್ ವೀಡಿಯೊದಲ್ಲಿ ತಿಳಿಸಿದ್ದರು.

ನಂತರ ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಲೋಪಗಳನ್ನು ತೋರಿಸಿದ್ದಕ್ಕೆ ಧನ್ಯವಾದ ತಿಳಿಸಿ, ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಎಎಪಿ ಸರ್ಕಾರದ ವಿಷಯದಲ್ಲಿ ಸಿಜೆಪಿ ಮೃದು ಧೋರಣೆ ತಳೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿನ್ ಪೈಲಟ್, “ಯಾವುದೇ ರಾಜ್ಯದ ಶಾಲೆಗಳ ಆಡಿಟ್ ನಡೆಯುವುದನ್ನು ಎಲ್ಲರೂ ಸ್ವಾಗತಿಸುತ್ತಾರೆ. ಆದರೆ, ಇತರ ಸರ್ಕಾರಗಳ ವಿರುದ್ಧ ತೋರುವ ಧೈರ್ಯ, ಪ್ರಶ್ನೆಗಳು ಮತ್ತು ದೃಷ್ಟಿಕೋನವನ್ನೇ ಪಂಜಾಬ್‌ನಲ್ಲೂ ಮುಂದುವರಿಸಿ. ಪಂಜಾಬ್ ಸರ್ಕಾರ ಅಥವಾ ಎಎಪಿ ಪಕ್ಷ ಯಾವುದೇ ವಿಶೇಷ ರಿಯಾಯಿತಿಗೆ ಅರ್ಹವಲ್ಲ” ಎಂದು ಕುಟುಕಿದರು.

ರಾಜಸ್ಥಾನದ ಗೋಶಾಲೆಯಲ್ಲಿ ನಡೆಯುತ್ತಿದ್ದ ಶಾಲೆಯ ಪರಿಶೀಲನೆಗೆ ತೆರಳಿದ್ದಾಗ ಆಶುತೋಷ್ ರಾಂಕ್ ಅವರ ತಂಡದ ಮೇಲೆ ಹಲ್ಲೆ ನಡೆಸಿ ಎಫ್‌ಐಆರ್ ದಾಖಲಿಸಲಾದ ರೀತಿಯನ್ನು ಉಲ್ಲೇಖಿಸಿ, ಪಂಜಾಬ್‌ನಲ್ಲೂ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಒತ್ತಾಯಿಸಿದರು.

ಪೈಲಟ್ ಹೇಳಿಕೆಗೆ ತಿರುಗೇಟು ನೀಡಿದ ಎಎಪಿ ನಾಯಕ ಮನೀಶ್ ಸಿಸೋಡಿಯಾ, ಕಾಂಗ್ರೆಸ್ ಆಡಳಿತದ ಹಿಮಾಚಲ ಪ್ರದೇಶದ ಶಾಲೆಗಳೊಂದಿಗೆ ಪಂಜಾಬ್ ಶಾಲೆಗಳನ್ನು ಹೋಲಿಸುವಂತೆ ಪೈಲಟ್‌ಗೆ ಸವಾಲೆಸೆದರು. “ನಾವು ಪಂಜಾಬ್‌ನಲ್ಲಿ ಅತ್ಯುತ್ತಮವಾಗಿರುವ 1,000 ಶಾಲೆಗಳನ್ನು ತೋರಿಸಬಲ್ಲೆವು; ನೀವು ಹಿಮಾಚಲ ಪ್ರದೇಶದ ಅಂತಹ 1,000 ಶಾಲೆಗಳನ್ನು ತೋರಿಸಲು ಸಾಧ್ಯವೇ? ಬನ್ನಿ, ಎರಡೂ ರಾಜ್ಯಗಳ ಶಾಲೆಗಳನ್ನು ಜಂಟಿಯಾಗಿ ಆಡಿಟ್ ಮಾಡೋಣ, ಸವಾಲು ಸ್ವೀಕರಿಸುತ್ತೀರಾ?” ಎಂದು ಸಿಸೋಡಿಯಾ ಹಾಗೂ ಎಎಪಿ ಮುಖಂಡ ಅನುರಾಗ್ ಧಾಂಡಾ ಪ್ರಶ್ನಿಸಿದ್ದಾರೆ.

You cannot copy content of this page

Exit mobile version