Home ದೇಶ ರಿಲಯನ್ಸ್‌ನ ಬಿಗ್ ಪ್ಲಾನ್: ಒಂದು ಕಡೆ ಮಾರಾಟ, ಮತ್ತೊಂದು ಕಡೆ $3 ಬಿಲಿಯನ್ ಒಪ್ಪಂದ

ರಿಲಯನ್ಸ್‌ನ ಬಿಗ್ ಪ್ಲಾನ್: ಒಂದು ಕಡೆ ಮಾರಾಟ, ಮತ್ತೊಂದು ಕಡೆ $3 ಬಿಲಿಯನ್ ಒಪ್ಪಂದ

0

ಜಾಗತಿಕ ರಾಜಕೀಯ ಅಸ್ಥಿರತೆ ಮತ್ತು ಯುದ್ಧ ಭೀತಿಯ ನಡುವೆಯೇ ಷೇರು ಮಾರುಕಟ್ಟೆ ಕುಸಿತದ ಹೊಡೆತ ಅನುಭವಿಸುತ್ತಿರುವ ಸಂದರ್ಭದಲ್ಲಿ, ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಅಂಗಸಂಸ್ಥೆಯೊಂದನ್ನು ಮಾರಾಟ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಅಂಗಸಂಸ್ಥೆ ಮಾರಾಟಕ್ಕೆ ಮುಂದಾದ ರಿಲಯನ್ಸ್
ಸೋಮವಾರ (ಏಪ್ರಿಲ್ 13) ಪ್ರಕಟಿಸಿದ ಮಾಹಿತಿಯಂತೆ, ರಿಲಯನ್ಸ್ ರೀಟೇಲ್‌ಗೆ ಸೇರಿದ ಪೂರ್ಣ ಸ್ವಾಮ್ಯದ ಕಂಪನಿಯಾದ ‘ರಿಲಯನ್ಸ್ ಪ್ರಾಜೆಕ್ಟ್ಸ್ ಅಂಡ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಸರ್ವಿಸಸ್ ಲಿಮಿಟೆಡ್’ (RPPMSL) ನ ಶೇ.100ರಷ್ಟು ಪಾಲನ್ನು ‘ಜೈಪುರ್ ಎನ್‌ಕ್ಲೇವ್ ಪ್ರೈವೇಟ್ ಲಿಮಿಟೆಡ್’ಗೆ 274 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಈ ವಹಿವಾಟಿನೊಂದಿಗೆ RPPMSL ಕಂಪನಿಯು ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಸಂಪೂರ್ಣವಾಗಿ ಹೊರಬಂದಿದೆ.

ವಿಶೇಷವೆಂದರೆ, ಈ ಖರೀದಿ ಮಾಡಿದ ಸಂಸ್ಥೆ ರಿಲಯನ್ಸ್ ಗುಂಪಿನ ಪ್ರವರ್ತಕರು ಅಥವಾ ಸಂಬಂಧಿತ ಕಂಪನಿಗಳೊಂದಿಗೆ ಯಾವುದೇ ನೇರ ಸಂಪರ್ಕ ಹೊಂದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಕಂಪನಿಯ ಆರ್ಥಿಕ ಸ್ಥಿತಿ
2025ರ ಹಣಕಾಸು ವರ್ಷದ ಅಂತ್ಯಕ್ಕೆ RPPMSL ಕಂಪನಿಯು 6,412.60 ಕೋಟಿ ರೂಪಾಯಿ ವಹಿವಾಟು ದಾಖಲಿಸಿದ್ದು, ಇದು ರಿಲಯನ್ಸ್ ಒಟ್ಟು ವಹಿವಾಟಿನ ಶೇ.0.06ರಷ್ಟಾಗಿದೆ. ಕಂಪನಿಯ ನಿವ್ವಳ ಮೌಲ್ಯ 342.45 ಕೋಟಿ ರೂಪಾಯಿಗಳಷ್ಟಿದೆ ಎಂದು ತಿಳಿದುಬಂದಿದೆ.

ಷೇರು ಮಾರುಕಟ್ಟೆಯಲ್ಲಿ ಕುಸಿತ
ಇದೇ ವೇಳೆ, ಜಾಗತಿಕ ಮಾರುಕಟ್ಟೆಯ ಏರಿಳಿತ ಹಾಗೂ ಯುದ್ಧ ಭೀತಿಯ ಪರಿಣಾಮವಾಗಿ ರಿಲಯನ್ಸ್ ಷೇರುಗಳ ಮೇಲೂ ಒತ್ತಡ ಕಂಡುಬಂದಿದೆ. ಬಿಎಸ್‌ಇಯಲ್ಲಿ ಸೋಮವಾರ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ.2.64ರಷ್ಟು (35.60 ರೂ.) ಇಳಿಕೆಯಾಗಿದ್ದು, 1,314.55 ರೂಪಾಯಿಗಳಲ್ಲಿ ವಹಿವಾಟು ಮುಗಿಸಿವೆ.

ಗ್ರೀನ್ ಎನರ್ಜಿ ಕ್ಷೇತ್ರದಲ್ಲಿ ದೊಡ್ಡ ಒಪ್ಪಂದ
ಒಂದೆಡೆ ಅಂಗಸಂಸ್ಥೆ ಮಾರಾಟ ಮಾಡುತ್ತಿದ್ದರೂ, ಮತ್ತೊಂದೆಡೆ ರಿಲಯನ್ಸ್ ಹೊಸ ಇಂಧನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ದಕ್ಷಿಣ ಕೊರಿಯಾದ Samsung C&T ಕಂಪನಿಯೊಂದಿಗೆ 15 ವರ್ಷಗಳ ಗ್ರೀನ್ ಅಮೋನಿಯಾ ಪೂರೈಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ಒಪ್ಪಂದದ ಮೌಲ್ಯವು 3 ಬಿಲಿಯನ್ ಡಾಲರ್‌ಗಿಂತ ಹೆಚ್ಚು (ಸುಮಾರು 25,000 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. 2029ರ ಹಣಕಾಸು ವರ್ಷದ ದ್ವಿತೀಯಾರ್ಧದಿಂದ ಪೂರೈಕೆ ಪ್ರಾರಂಭವಾಗಲಿದೆ.

ಕ್ಲೀನ್ ಎನರ್ಜಿ ದಿಶೆಯಲ್ಲಿ ದಿಟ್ಟ ಹೆಜ್ಜೆ
ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಅನೇಕ ದೇಶಗಳು ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಹೈಡ್ರೋಜನ್ ಮತ್ತು ಅಮೋನಿಯಾ ಆಧಾರಿತ ಇಂಧನಗಳತ್ತ ಮುಖ ಮಾಡುತ್ತಿರುವ ಹಿನ್ನೆಲೆಯಲ್ಲಿ, ರಿಲಯನ್ಸ್ ಸೌರ ಮಾಡ್ಯೂಲ್‌ಗಳು, ಬ್ಯಾಟರಿ ಎನರ್ಜಿ ಸಂಗ್ರಹಣೆ ಹಾಗೂ ಎಲೆಕ್ಟ್ರೋಲೈಸರ್ ತಯಾರಿಕಾ ಘಟಕಗಳನ್ನು ನಿರ್ಮಿಸುವ ಮೂಲಕ ಭವಿಷ್ಯದ ಕ್ಲೀನ್ ಎನರ್ಜಿ ವ್ಯವಸ್ಥೆಯನ್ನು ರೂಪಿಸುತ್ತಿದೆ.

You cannot copy content of this page

Exit mobile version