Home ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಪೊಲೀಸ್ ಲಾಠಿ ಪ್ರಹಾರ, ನಾಲ್ವರ ವಿರುದ್ಧ ಎಫ್‌ಐಆರ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಪೊಲೀಸ್ ಲಾಠಿ ಪ್ರಹಾರ, ನಾಲ್ವರ ವಿರುದ್ಧ ಎಫ್‌ಐಆರ್

0

ರಾಜ್ಯದ ಅತಿ ದೊಡ್ಡ ಕಾರಾಗೃಹವಾದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮತ್ತು ಜೈಲು ಸಿಬ್ಬಂದಿ ನಡುವೆ ನಡೆದ ಸಂಘರ್ಷದಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಬೆಳಕಿಗೆ ಬಂದಿದೆ. ಮಾರ್ಚ್ 29ರ ರಾತ್ರಿ ನಡೆದ ಈ ಘಟನೆ ಬಳಿಕ ಜೈಲು ಭದ್ರತೆ ಕಟ್ಟುನಿಟ್ಟುಗೊಂಡಿದೆ.

ಮಾಹಿತಿಯ ಪ್ರಕಾರ, ರಾತ್ರಿ ಸುಮಾರು 11:45ರ ಸುಮಾರಿಗೆ ಜೈಲಿನ ‘ಟವರ್-1’ ವಿಚಾರಣಾ ಬಂಧಿಗಳ ವಿಭಾಗದಲ್ಲಿ ಈ ಗಲಾಟೆ ಸಂಭವಿಸಿದೆ. ಜೈಲು ಅಧೀಕ್ಷಕ ಕರ್ಣ ಕ್ಷತ್ರಿ ಅವರ ನೇತೃತ್ವದಲ್ಲಿ ಸಿಬ್ಬಂದಿ ತಂಡ ಬ್ಯಾರಕ್‌ಗಳಲ್ಲಿ ನಿಷೇಧಿತ ವಸ್ತುಗಳಿಗಾಗಿ ತಪಾಸಣೆ ನಡೆಸಲು ತೆರಳಿದಾಗ, ಕೆಲ ಕೈದಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋದಲ್ಲಿ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ, ಅಧಿಕಾರಿಗಳು ಸೂಕ್ಷ್ಮ ಪರಿಶೀಲನೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಜೈಲಿನ ವಿವಿಧ ಬ್ಯಾರಕ್‌ಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, 10ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಪತ್ತೆಯಾದವು ಎಂದು ಮೂಲಗಳು ತಿಳಿಸಿವೆ.

ತಪಾಸಣೆ ವೇಳೆ ಕೆಲ ಕೈದಿಗಳು ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಕೈದಿಗಳನ್ನು ಚದುರಿಸಿದ್ದಾರೆ. ಘಟನೆಯಲ್ಲಿ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಇನಾಯ್ ಜಾಯ್, ವೋಕು ಆರೆಂಜಿ ಪ್ಯಾಟ್ರಿಕ್, ಕೋರಿಲ್ ಡೇನಿಯಲ್ ಹಾಗೂ ಥಾಮಸ್ ಎಂಬ ನಾಲ್ವರು ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಘಟನೆಯ ಬಳಿಕ ಜೈಲಿನ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಸಿಸಿ ಕ್ಯಾಮೆರಾ ನಿಗಾ ಹೆಚ್ಚಿಸುವುದು ಸೇರಿದಂತೆ ಅನಿರೀಕ್ಷಿತ ತಪಾಸಣೆಗಳನ್ನು ತೀವ್ರಗೊಳಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಸಂಘರ್ಷದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

You cannot copy content of this page

Exit mobile version