“ಅವಕಾಶಗಳು ನಮ್ಮನ್ನು ಎಷ್ಟು ಎತ್ತರಕ್ಕೂ ಕೊಂಡೊಯ್ಯಬಲ್ಲವು”
ಕುಂದಾಪುರ ಸಮುದಾಯದ ಅಮೃತ ಘಳಿಗೆ ಕಾರ್ಯಕ್ರಮದಲ್ಲಿ ಯಾಕೂಬ್ ಖಾದರ್ ಗುಲ್ವಾಡಿ.
ಕುಂದಾಪುರ: ಸಮುದಾಯ ಕುಂದಾಪುರವು ಸ್ವಾತಂತ್ರದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅಮೃತ ಘಳಿಗೆ ಹೆಸರಿನ ವಿಡಿಯೋ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಇದರ ಬಹುಮಾನ ವಿತರಣಾ ಸಮಾರಂಭ ಸ್ಪರ್ಧೆಯಲ್ಲಿ ಮಾತನಾಡಿದ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ ಯಾಕೂಬ್ ಗುಲ್ವಾಡಿ “ನನಗೆ ನನ್ನದೇ ಗುಜರಿ ಅಂಗಡಿಯಲ್ಲಿ ದೊರೆಯುತ್ತಿದ್ದ ತುಷಾರ, ತರಂಗ ವಾರಪತ್ರಿಕೆಗಳು ಓದುವ ಅವಕಾಶ ನೀಡಿದವು. ಆಗ ಬಹುಮಾನ ಪಡೆಯಲು ಸಾಧ್ಯವಾಗಿರದಿದ್ದರೂ ಈಗ ಇಲ್ಲಿ ಬಹುಮಾನ ವಿತರಿಸಲು ಸಾಧ್ಯವಾಗಿರುವುದು ಆ ಓದು ಬಿತ್ತಿದ ಕನಸುಗಳಿಂದಲೆ” ಎಂದರು.
ವಿಡಿಯೋ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮುನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಬಹುಮಾನವನ್ನು ಅಂಚೆಯ ಮೂಲಕ ಕಳುಹಿಸುತ್ತಿದ್ದು, ಅವರಲ್ಲಿ ಮೂವತ್ತು ವಿದ್ಯಾರ್ಥಿಗಳಿಗೆ ಕುಂದಾಪುರದ ಜೇಸಿ ಭವನದಲ್ಲಿ ಇಂದು ಬಹುಮಾನ ವಿತರಿಸಲಾಯಿತು. ಜೇಸಿಐ ಕುಂದಾಪುರದ ಸಹಯೋಗದಲ್ಲಿ ನಡೆದ ಈ ಸಮಾರಂಭದಲ್ಲಿ ಡಿ.ಎಸ್.ಎಸ್ ಕುಂದಾಪುರ ಘಟಕದ ಅಧ್ಯಕ್ಷರಾದ ಶ್ರೀ ರಾಜು ಬೆಟ್ಟಿನ ಮನೆ, ಕ್ಯಾಥೋಲಿಕ್ ಸಭಾದ ಕಾರ್ಯದರ್ಶಿ ಶಾಂತಿ ಕ್ವಾಡ್ರೆಸ್, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ರಾಘವೇಂದ್ರ ಉಡುಪಿ, ಜೇಸಿಐ ಅಧ್ಯಕ್ಷೆ ನಾಗರತ್ನಾ ಹೇರ್ಳೆ ಉಪಸ್ಥಿತರಿದ್ದರು. ಸಮುದಾಯ ಕುಂದಾಪುರದ ಅಧ್ಯಕ್ಷರಾದ ಉದಯ ಗಾಂವಕಾರ ಎಲ್ಲರನ್ನೂ ಸ್ವಾಗತಿಸಿದರು. ಸಚಿನ್ ಅಂಕೋಲಾ ವಂದಿಸಿದರು. ರವೀಂದ್ರ ಕೋಡಿ ಕಾರ್ಯಕ್ರಮ ನಿರೂಪಿಸಿದರು.