‘ದೂರದ ಬೆಟ್ಟ ನುಣ್ಣಗೆ’ ಅನ್ನೋ ಗಾದೆ ಮಾತು ಘಟ್ಟ ಪ್ರದೇಶ ಸೇರಿದಂತೆ ಮಲೆನಾಡು ಭಾಗದಲ್ಲಿ ವಾಸಿಸುತ್ತಿರುವ ಜನರ ಬದುಕಿಗೆ ಸ್ಪಷ್ಟವಾಗಿ ಉದಾಹರಣೆ ಕೊಡಬಹುದು. ದೂರದ ಊರುಗಳಿಂದ ಮಲೆನಾಡು, ಮಳೆಕಾಡು, ಹಸಿರು, ಬೆಟ್ಟ ಗುಡ್ಡ, ಟ್ರೆಕ್ಕಿಂಗ್, ಚಾರಣ ಅಂತೆಲ್ಲಾ ಬರುವ ಮಲೆನಾಡ ಪ್ರಿಯರಿಗೆ ಅನಾದಿಕಾಲದಿಂದಲೂ ಇಲ್ಲಿ ಬದುಕು ಸವೆಸುತ್ತಿರುವ ಜನರ ನೋವು, ಕೂಗು ಕಾಣಿಸದು, ಕೇಳಿಸದು. ಇತ್ತೀಚಿನ ದಿನಗಳಲ್ಲಂತೂ ತಮ್ಮದೇ ಸ್ವಂತ ನೆಲದಲ್ಲಿ ಪರಕೀಯರಂತೆ ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿರುವ ಪಾಡು ಪ್ರತೀ ಮನೆ ಮನೆಯದಾಗಿದೆ.
ಹತ್ತಾರು ತಲೆಮಾರುಗಳಿಂದಲೂ ಇದೇ ಭೂಮಿಯಲ್ಲಿ ಉತ್ತಿ ಬಿತ್ತಿ ಜೀವನ ನಡೆಸುತ್ತಿರುವವರು ಎದುರಿಸುತ್ತಿರುವ ಸಂಕಷ್ಟಗಳು ನೂರಾರು. ಒಂದು ಕಡೆಗೆ ಪ್ರಾಕೃತಿಕ ವಿಕೋಪದಿಂದ ಆಗುತ್ತಿರುವ ಹಾನಿಯದಾದರೆ, ಇನ್ನೊಂದು ಕಡೆ ಸರ್ಕಾರದ ಅವೈಜ್ಞಾನಿಕ ಕಾನೂನುಗಳು ಇಲ್ಲಿನ ಜನರ ಬದುಕಿಗೆ ಗಾಯದ ಮೇಲೆ ಬರೆ ಎಳೆಯುತ್ತಿವೆ. ಇಲ್ಲಿನ ರೈತ ಸಮುದಾಯ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿರುವ ಮಲೆನಾಡಿನ ಸಾಂಪ್ರದಾಯಿಕ ಬೆಳೆಗಳಾದ ಅಡಿಕೆ, ಭತ್ತ, ಕಾಫಿ, ಕಾಳುಮೆಣಸು ಮುಂತಾದ ಬೆಳೆಗಳನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದರೆ, ಇನ್ನೊಂದು ಕಡೆ ಅತಿಯಾದ ಮಳೆಯಿಂದಾಗಿ ಅವುಗಳಿಗೆ ತಗುಲುವ ನಾನಾ ಬಗೆಯ ರೋಗಗಳಿಂದ ಬಚಾವಾಗಲು ದಾರಿ ಕಾಣದೆ ಕಂಗಾಲಾಗಿದ್ದಾರೆ.
ಇದರ ನಡುವೆ ಸರ್ಕಾರದ ಅಧಿಕಾರಿ ವರ್ಗಗಳು ಅಭಯಾರಣ್ಯ, ಹುಲಿ ಸಂರಕ್ಷಣಾ ಯೋಜನೆ, ಅರಣ್ಯ ಜಾಗದ ಹೆಸರಿನಲ್ಲಿ ಮೂಲದಿಂದ ಇದ್ದ ಇಲ್ಲಿನ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಅರವತ್ತು ಎಪ್ಪತ್ತು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ಪ್ರದೇಶವನ್ನು ರೈತರ ಅನುಮತಿ ಇಲ್ಲದೇ ಅರಣ್ಯ ಪ್ರದೇಶ ಎಂದು ಪರಿಗಣಿಸಿ ಇಲ್ಲಿನ ರೈತರನ್ನು ಒಕ್ಕಲೆಬ್ಬಿಸುವ ಅಥವಾ ಅವರ ಕೃಷಿ ಚಟುವಟಿಕೆಗೆ ಅಡ್ಡಿಪಡಿಸಿ ಸರ್ಕಾರ ಮತ್ತು ಅಧಿಕಾರಿ ವರ್ಗದವರೇ ಕಂಟಕಪ್ರಾಯರಾಗಿದ್ದಾರೆ. ಹಾಗಾಗಿ ಈ ಭಾಗದಲ್ಲಿ ನೆಲೆಯೂರಿ ಬದುಕು ಕಂಡುಕೊಳ್ಳಬೇಕಾದ ಜನ ಸರ್ಕಾರಗಳೇ ಹುಟ್ಟು ಹಾಕಿರುವ ಸಮಸ್ಯೆಗಳ ಸುಳಿಗೆ ಬಿದ್ದು ಒದ್ದಾಡುವಂತಾಗಿದೆ.

ಇಂತಹ ಹತ್ತು ಹಲವು ಸಮಸ್ಯೆಗಳ ಪಟ್ಟಿಯನ್ನು ಹೊತ್ತು ಮಲೆನಾಡು ಭಾಗದ ರೈತರ ನಿಯೋಗವೊಂದು ರಾಜಧಾನಿ ಬೆಂಗಳೂರಿನಲ್ಲಿ ಒಂದು ದಿನದ ಪ್ರತಿಭಟನೆ ನಡೆಸಿ ಸಾಂಕೇತಿಕವಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಡಲು ಹೊರಟಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರ ವರೆಗೂ ಪ್ರತಿಭಟನೆ ನಡೆಯಲಿದೆ.
ಈಗಾಗಲೇ ಮಲೆನಾಡಿಗರನ್ನು ಉಳಿಸಿ ಎಂಬ ಹೋರಾಟವನ್ನು ಹಲವು ವರ್ಷಗಳಿಂದ ನಡೆಸುತ್ತಿದ್ದು, ಕಳೆದ ಕೆಲವು ತಿಂಗಳುಗಳಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಹಿ ಸಂಗ್ರಹ ನಡೆಸಿ ಜನರ ಗಮನವನ್ನು ಸೆಳೆಯುತ್ತಿದ್ದಾರೆ. ಜೊತೆಗೆ ಸ್ಥಳೀಯವಾಗಿ ಇರುವ ಸಮಸ್ಯೆಗಳಿಗೆ ಹೆಚ್ಚಿನ ಮಹತ್ವ ಕೊಟ್ಟು ಅದನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಸಧ್ಯ ಈಗ ರಾಜ್ಯ ಮಟ್ಟದಲ್ಲಿ ಮಲೆನಾಡಿನ ಸಮಸ್ಯೆ ಮತ್ತು ’20 ಅತಿ ಮುಖ್ಯ ಬೇಡಿಕೆ’ಗಳನ್ನು ಹೊತ್ತು ಸರ್ಕಾರದ ಪ್ರತಿನಿಧಿಗಳ ಗಮನ ಸೆಳೆಯಲು ಮುಂದಾಗಿದ್ದಾರೆ.
ನಾಳೆ (20-09-2022) ನಡೆಯುತ್ತಿರುವ ಪ್ರತಿಭಟನೆ ಸಾಂಕೇತಿಕವಾಗಿದ್ದು ಈ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಾಗಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಅನಿರ್ಧಿಷ್ಟಾವದಿ ಮುಷ್ಕರ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವುದಾಗಿ ಮಲೆನಾಡು ಭಾಗದ ಹೋರಾಟಗಾರರು ನಿರ್ಧರಿಸಿದ್ದಾರೆ. ಸಧ್ಯ ಈ ಒಂದು ಪ್ರತಿಭಟನೆ ಮಲೆನಾಡು ಅಳಿವು ಉಳಿವಿಗೆ ಅತಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದಾಗಿ ಹೋರಾಟದ ನೇತೃತ್ವ ವಹಿಸಿರುವ ಪತ್ರಕರ್ತರೂ ಆದ ಶ್ರೀ ಅನಿಲ್ ಹೊಸಕೊಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಪ್ರಕೃತಿ, ಇನ್ನೊಂದು ಕಡೆ ಬೆಳೆ ನಾಶ ಮತ್ತೊಂದು ಕಡೆ ಸರ್ಕಾರದ ಅವೈಜ್ಞಾನಿಕ ನೀತಿಗಳು ಮಲೆನಾಡು ಭಾಗದ ರೈತರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಇವೆಲ್ಲವುಗಳಿಂದ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳಲಾದರೂ ಈ ಪ್ರತಿಭಟನೆ ಅನಿವಾರ್ಯ. ಕೇವಲ ಪ್ರತಿಭಟನೆ ಮಾತ್ರವಲ್ಲದೆ, ಸರ್ಕಾರ ಕೂಡಾ ಇವರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸಬೇಕಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಾಳೆಯ ಪ್ರತಿಭಟನೆ ಎಷ್ಟರಮಟ್ಟಿಗೆ ಪರಿಣಾಮ ಬೀರಬಲ್ಲದು, ಸರ್ಕಾರ ಎಷ್ಟರ ಮಟ್ಟಿಗೆ ಮಲೆನಾಡಿಗರ ಕೂಗಿಗೆ ಸ್ಪಂದಿಸಬಲ್ಲದು ಎಂಬುದನ್ನು ಕಾದು ನೋಡೋಣ.