Home ಜನ-ಗಣ-ಮನ ಧರ್ಮ- ಸಂಸ್ಕೃತಿ ಸಮಾನತೆ ವಿರೋಧಿ ಸನಾತನ ಧರ್ಮ ಹಾಗೂ ಸಂವಿಧಾನ

ಸಮಾನತೆ ವಿರೋಧಿ ಸನಾತನ ಧರ್ಮ ಹಾಗೂ ಸಂವಿಧಾನ

0

ಸನಾತನ ಧರ್ಮದ ವಿರುದ್ಧ ಮಾತಾಡುವವರು ಕೂಡಲೇ ಕ್ಷಮೆ ಕೇಳಬೇಕು ಇಲ್ಲವೇ ಪರಿಣಾಮ ಎದುರಿಸಬೇಕೆಂದು ಹೆದರಿಸಲಾಗುತ್ತಿದೆ. ಆಯ್ತು ಕ್ಷಮೆ  ಕೇಳಿಸೋಣ. ಅದಕ್ಕೂ ಮೊದಲು ಸನಾತನ ಧರ್ಮದ ಪ್ರತಿಪಾದಕರು ಹಾಗೂ ಪ್ರಚಾರಕರು ಈ ದೇಶದ ಸಮಸ್ತ ಅಸ್ಪೃಶ್ಯರು ತಲೆಮಾರುಗಳಿಂದ ಅನುಭವಿಸುತ್ತಿರುವ  ಅಪಮಾನಕ್ಕೆ ಕ್ಷಮೆ ಕೇಳಬೇಕಿದೆ. ದೇವಸ್ಥಾನಗಳಲ್ಲಿ ಎಲ್ಲರಿಗೂ ಸಮಾನ ಪ್ರವೇಶ ನೀಡದೆ ತಾರತಮ್ಯ ತೋರುತ್ತಿರುವುದಕ್ಕೆ ಕ್ಷಮೆ ಕೋರಬೇಕಿದೆ. ಬ್ರಾಹ್ಮಣ್ಯವಾದಿಗಳು ಶ್ರೇಷ್ಟ, ಉಳಿದವರೆಲ್ಲಾ ಕನಿಷ್ಟ ಎಂದು ಮೇಲುಕೀಳುಗಳನ್ನು ಆಚರಿಸುತ್ತಾ ಬಂದಿರುವುದಕ್ಕಾಗಿ ಕ್ಷಮೆ ಕೇಳಬೇಕಿದೆ – ಶಶಿಕಾಂತ ಯಡಹಳ್ಳಿ.

ಸನಾತನ ಧರ್ಮ ನಿರ್ನಾಮವಾಗಬೇಕು ಎಂದು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಕೊಟ್ಟಿದ್ದೇ ತಡ ದೇಶಾದ್ಯಂತ ಸನಾತನಿಗಳು ಬೆಚ್ಚಿ ಬಿದ್ದರು. ಸನಾತನ ಎನ್ನುವುದು ಡೆಂಗಿ ಕೋವಿಡ್ ರೀತಿಯ ರೋಗವೆಂದು ಹೇಳಿದ ಕೂಡಲೇ ಸನಾತನ ಧರ್ಮಾನುಯಾಯಿಗಳ ಬುಡಕ್ಕೆ ಬೆಂಕಿ ಬಿದ್ದಿತು. ಈ ಧರ್ಮದ ಗುತ್ತಿಗೆದಾರರಾಗಿರುವ ಸಂಘ ಪರಿವಾರದವರು ಬೀದಿಯಲಿ ನಿಂತು ಬಾಯಿಗೆ ಬಂದಂತೆ ನಿಂದಿಸಿ ಹೇಳಿಕೆ ಕೊಡತೊಡಗಿದರು. ಅದ್ಯಾರೋ ಪರಮಹಂಸ ಎನ್ನುವ ಅಯೋಧ್ಯೆಯ ಅರ್ಚಕ  ಉದಯನಿಧಿ ತಲೆ ತೆಗೆದವರಿಗೆ 10 ಕೋಟಿ ಕೊಡುವುದಾಗಿಯೂ, ಯಾರೂ ತಲೆತಗೆಯದೇ ಇದ್ದರೆ ತಾನೇ ಆ ಕೆಲಸ ಮಾಡುವುದಾಗಿಯೂ ಫತ್ವಾ ಹೊರಡಿಸಿದ. ಇದೇ ಆತಂಕವಾದಿ ಸ್ವಾಮಿಯು ಉದಯನಿಧಿಯವರ ಹೇಳಿಕೆ ಸಮರ್ಥಿಸಿದ ಪ್ರಿಯಾಂಕಾ ಖರ್ಗೆಯವರನ್ನು 20 ರಿಂದ 40 ಗುಂಡು ಹಾರಿಸಿ ಕೊಲ್ಲಬೇಕೆಂದು ಬೆದರಿಸಿದ. ಇಂತಹ ಭಯೋತ್ಪಾದನಾ ಹೇಳಿಕೆ ಕೊಟ್ಟ ಆತಂಕವಾದಿ ಅರ್ಚಕನನ್ನು ಯಾವೊಬ್ಬ ಸಂಘ ಪರಿವಾರಿಗರೂ ವಿರೋಧಿಸಿಲ್ಲವಾದ್ದರಿಂದ ಅವರ ಮೌನವೇ ಧಾರ್ಮಿಕ ಭಯೋತ್ಪಾದನೆಯ ಸಮ್ಮತಿಗೆ ಸಾಕ್ಷಿಯಾಗಿದೆ.

ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದರೆ ಈ ಸನಾತನ ಧರ್ಮ ಎನ್ನುವುದು ಒಂದೇ ಒಂದು ಟೀಕೆಯನ್ನೂ ತಡೆದುಕೊಳ್ಳಲಾಗದೇ ಬಿದ್ದು ಹೋಗುವಷ್ಟು ದುರ್ಬಲವಾಗಿದೆಯಾ? ಸನಾತನ ಅಂದರೆ ಶಾಶ್ವತವಾದದ್ದು, ಸಾವೇ ಇಲ್ಲದ್ದು ಎಂದು ತಮ್ಮ ಗ್ರಂಥಗಳನ್ನು ಆಧರಿಸಿ ನಂಬಿರುವ ಸನಾತನವಾದಿಗಳಿಗೆ ಆ ಮಾತಲ್ಲಿ ಅಪನಂಬಿಕೆ ಇದೆಯಾ? ಯಾವುದು ಶಾಶ್ವತವಾಗಿದೆಯೋ ಅಂತದ್ದನ್ನು ನಿರ್ಮೂಲನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲವೋ ಅಂತಹ ಪ್ರಾಚೀನ ಧರ್ಮದ ಬಗ್ಗೆ ಒಂದು ಪ್ರತಿರೋಧದ ಧ್ವನಿ ಮೂಡಿಬಂದರೆ ಯಾಕೆ ಈ ಸನಾತನದ ಸಮರ್ಥಕರು ಈಪಾಟಿ ಬೆಚ್ಚಿಬಿದ್ದು ಸಮರ್ಥನೆಗೆ ಒದ್ದಾಡಿದರು?. ಪರನಿಂದನೆಗೆ ಮುಂದಾದರು?. ನರಹತ್ಯೆಗೆ ಕರೆಕೊಟ್ಟರು?.

ಯಾಕೆಂದರೆ ಶತಶತಮಾನಗಳಿಂದ ಸಮಾಜದಲ್ಲಿ ಆಚರಿಸಿಕೊಂಡು ಬಂದಿರುವ ಪುರೋಹಿತಶಾಹಿ ಮೌಲ್ಯಗಳು, ದೇವರುಗಳ ಹೆಸರಲ್ಲಿ ಅಸಮಾನತೆ ಸಾರುವ ವೈದಿಕಶಾಹಿ ಧರ್ಮದ ನಂಬಿಕೆಗಳು, ವರ್ಣಬೇಧದ ಮೂಲಕ ಹುಟ್ಟುಹಾಕಿದ ಅಸ್ಪೃಶ್ಯತೆಯ ಆಚರಣೆಗಳು, ಮಹಿಳೆಯರನ್ನು ಶೂದ್ರರನ್ನು ಕಟ್ಟಿ ಹಾಕಲು ಹುಟ್ಟು ಹಾಕಲಾದ ಮೌಢ್ಯಾಚರಣೆಗಳೆಲ್ಲವುಗಳ ಮೂಲ ಇರುವುದೇ ಈ ಸನಾತನ ಧರ್ಮದಲ್ಲಿ. ಈ ಅವಿನಾಶಿ ಎಂದುಕೊಂಡ ಧರ್ಮದ ಪರ್ಯಾಯ ಪದಗಳೇ ವೈದಿಕಧರ್ಮ,  ಮನುಧರ್ಮ, ಬ್ರಾಹ್ಮಣ್ಯ ಧರ್ಮ, ಹಿಂದುತ್ವ ಇತ್ಯಾದಿಗಳು. ಹೀಗಾಗಿ ಈ ರೀತಿಯ ಪುರೋಹಿತಶಾಹಿ ಪ್ರಣೀತ ಸೃಷ್ಟಿಗಳ ಅಡಿಪಾಯದ ಅಡಿಗಲ್ಲು ಸನಾತನವಾಗಿದ್ದರಿಂದ ಯಾರಾದರೂ ಆ ಅಡಿಗಲ್ಲನ್ನು ಸ್ವಲ್ಪ ಸಡಿಲಿಸುವ ಮಾತಾಡಿದರೂ ಇಡೀ ಮೌಢ್ಯಸೃಷ್ಟಿಯ ಮಹಲುಗಳೇ ಕಂಪಿಸುತ್ತವೆ. ಯಾಕೆಂದರೆ ಸತ್ಯದ ಅಡಿಪಾಯದ ಮೇಲೆ ಕಟ್ಟಿದ ವಾಸ್ತವವಾದಿ ಇಮಾರತ್ತು ಗಟ್ಟಿಯಾಗಿ ನಿಲ್ಲುತ್ತದೆ. ಆದರೆ ಸುಳ್ಳುಗಳ ಇಟ್ಟಿಗೆ ಹಾಗೂ ಭ್ರಮೆಗಳ  ಕಲ್ಲು ಕಟ್ಟಿಗೆ ಬಳಸಿ ಕಟ್ಟಿದ ಸನಾತನ ಧರ್ಮದ ದೇಗುಲ ಅದೆಷ್ಟೇ ಭವ್ಯವಾಗಿದ್ದರೂ ಸತ್ಯದ ಏಟಿಗೆ ಅದುರದೇ ಇರದು, ಕಾಲದ ಓಟದಲಿ ಶಿಥಿಲಗೊಳ್ಳುವುದೇ ಹೊರತು ನೆಲೆ ನಿಲ್ಲದು. 

ಇದೇ ಈ ಸನಾತನವಾದಿ ಸಂಕುಲಕೆ ಇರುವ ಭಯ. ಅದಕ್ಕೆ ಒಂದೇ ಒಂದು ಹೇಳಿಕೆಗೆ ಅವರೆಲ್ಲಾ ದಿಗಿಲು ಬೀಳುತ್ತಾರೆ. ಅವರಿಗೆ ತಾರತಮ್ಯ ಇರಬೇಕು, ಮೇಲು ಕೀಳುಗಳು ಖಾಯಂ ಆಗಬೇಕು. ಲಿಂಗಬೇಧ ಮುಂದುವರೆಯಬೇಕು. ಅಸ್ಪೃಶ್ಯತೆ ನಿರಂತರವಾಗಿರಬೇಕು. ಭ್ರಮೆ ಹುಟ್ಟಿಸುವ ನಂಬಿಕೆಗಳು ಜನರ ವ್ಯಸನವಾಗಬೇಕು. ಶಾಲೆಗಳಿಗಿಂತಾ ದೇವಸ್ಥಾನಗಳು ಹುಟ್ಟಿಕೊಳ್ಳಬೇಕು. ಆಸ್ಪತ್ರೆಗಳಿಗಿಂತಾ ಧರ್ಮಾಧಾರಿತ ಮಠ ಪೀಠಗಳು ಸ್ಥಾಪನೆಯಾಗಬೇಕು. ಜನರನ್ನು ಶಾಶ್ವತವಾಗಿ ಭ್ರಾಮಕ ಭ್ರಮೆಯಲ್ಲಿಟ್ಟು ವೈದಿಕಶಾಹಿ ಯಜಮಾನಿಕೆ ಖಾಯಂಗೊಳಿಸಬೇಕು. ಇದಕ್ಕೆಲ್ಲಾ ಇವರಿಗೆ ಅಡ್ಡಿಯಾಗಿದ್ದು ಭಾರತದ ಸಂವಿಧಾನ.

ಹೌದು, ಧರ್ಮಾಧಾರಿತವಾಗಿ ಈ ದೇಶವನ್ನು ಹಿಂದುತ್ವವಾದಿ ಆಡಳಿತದ ಹಿಂದೂರಾಷ್ಟ್ರವನ್ನಾಗಿ ಮಾಡುವ ಮನುವಾದಿಗಳ ಹುನ್ನಾರವನ್ನು ಮೆಟ್ಟಿನಿಂತು ಸಮಾನತೆಯನ್ನು ಸಾರುವ ಸಂವಿಧಾನವನ್ನೇ ಈ ದೇಶದ ಧರ್ಮವನ್ನಾಗಿ ಅಂಬೇಡ್ಕರ್ ರವರು ರೂಪಿಸಿದರು. ಅಸ್ಪೃಶ್ಯತೆ ಲಿಂಗಬೇಧ ವರ್ಣಬೇಧಗಳನ್ನು ಶಿಕ್ಷಾರ್ಹ ಅಪರಾಧವಾಗಿ ಘೋಷಿಸಿದರು.   ಸರ್ವರಿಗೂ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಪರಿಗಣಿಸಿದರು. ಮೀಸಲಾತಿಯ ಮೂಲಕ ವರ್ಗ ಅಸಮಾನತೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾನೂನು ಜಾರಿಮಾಡಿದರು. ಹೀಗಾಗಿ ಸಂವಿಧಾನ ಧರ್ಮವನ್ನು ಸನಾತನ ಧರ್ಮದ ಪ್ರತಿಪಾದಕರು ಎಂದೂ ಮಾನಸಿಕವಾಗಿ ಒಪ್ಪಿಕೊಳ್ಳಲೇ ಇಲ್ಲ. ಸಂವಿಧಾನ ಕೊಟ್ಟ ಧರ್ಮಾಚರಣೆಯ ಹಕ್ಕಿನ ನೆಪದಲ್ಲಿ ತಾರತಮ್ಯವನ್ನು ಕಾಪಾಡಿಕೊಳ್ಳುತ್ತಲೇ ಬಂದರು. ಧರ್ಮ ಹಾಗೂ ದೇಶದ ಹೆಸರಲ್ಲಿ ಜನರ ಭಾವನೆಗಳನ್ನು ಕೆರಳಿಸುತ್ತಾ ದೇಶದ ಆಡಳಿತದ ಚುಕ್ಕಾಣಿಯನ್ನೂ ಹಿಡಿದು ಸಂವಿಧಾನವನ್ನು ನಿಧಾನವಾಗಿ ದುರ್ಬಲಗೊಳಿಸುವ ಕೆಲಸವನ್ನು ನಾಗಾಪುರದ ಹಿಂದುತ್ವವಾದಿ ನಾಯಕತ್ವ ಮಾಡುತ್ತಲೇ ಬಂದಿತು. ಈಗ ಸಚಿವ ಉದಯನಿಧಿ ಹಾಗೂ ಸಂಸದ ರಾಜಾ ರವರ ಹೇಳಿಕೆಯ ವಿರುದ್ದ ತಿರುಗಿ ಬಿದ್ದು ವಿರೋಧಿಸುತ್ತಿರುವವರೂ ಸಹ ಇದೇ ಹಿಂದುತ್ವವಾದಿಗಳು ಹಾಗೂ ಅದರ ಸಮರ್ಥಕರು. ಸ್ವತಃ ಈ ದೇಶದ ಪ್ರಧಾನಿಗಳೇ ‘ಸನಾತನ ವಿರೋಧಿ ಹೇಳಿಕೆಗಳಿಗೆ ತಕ್ಕ ಉತ್ತರ ಕೊಡಿ’ ಎಂದು ಪ್ರಚೋದಿಸುತ್ತಿರುವುದೇ ಈ ಸನಾತನಿಗಳು ಅದೆಷ್ಟು ಕಂಗಾಲಾಗಿದ್ದಾರೆ ಎಂಬುದಕ್ಕೆ ಪುರಾವೆಯಾಗಿದೆ. 

ಇಷ್ಟಕ್ಕೂ ಸನಾತನ ಧರ್ಮ ಎನ್ನುವುದೇ ಅಧಿಕೃತವಾಗಿ ಅಸ್ತಿತ್ವದಲ್ಲಿಲ್ಲ. ಸಂವಿಧಾನದಲ್ಲಿ ಇಂತಹುದೊಂದು ಧರ್ಮ ಇದೆಯೆಂದು ಎಲ್ಲೂ ನಮೂದಾಗಿಲ್ಲ. ಈ ದೇಶದ ಧರ್ಮಗಳ ಅಧಿಕೃತ ಪಟ್ಟಿಯಲ್ಲೂ ಇಲ್ಲ. ಆದರೂ ಅಧಿಕೃತವಾಗಿ ಅಸ್ತಿತ್ವದಲ್ಲಿ ಇಲ್ಲದ ಧರ್ಮವೊಂದು ನಿರ್ನಾಮವಾಗಬೇಕು ಅಂತಾ ಹೇಳಿದರೆ ಯಾಕೆ ಇವರಿಗೆ ಉರಿಯಾಗಬೇಕು. ಯಾಕೆಂದರೆ ಸನಾತನ ಧರ್ಮ ಬೇರೆಯಲ್ಲ  ವೈದಿಕ ಧರ್ಮ ಬೇರೆಯಲ್ಲ. ಈ ವೈದಿಕ ಧರ್ಮವೆಂಬುದು  ಹಿಂದೂ ಧರ್ಮ ಖಂಡಿತಾ ಅಲ್ಲ. ಆಗಲೂ ಸಾಧ್ಯವಿಲ್ಲ. ಎಲ್ಲಿಯವರೆಗೂ ಹಿಂದೂಗಳ ಅವಿಭಾಜ್ಯ ಅಂಗವಾದ ಶೂದ್ರ ದಲಿತರನ್ನು ಸಮಾನತೆಯಿಂದ ಈ ಹಿಂದುತ್ವವಾದಿಗಳು ಕಾಣುವುದಿಲ್ಲವೋ ಅಲ್ಲಿಯವರೆಗೂ ಹಿಂದುತ್ವವು ಹಿಂದೂ ಧರ್ಮವಾಗಲು ಸಾಧ್ಯವೇ ಇಲ್ಲ. ಅದಕ್ಕೆ ಸನಾತನ ಧರ್ಮ ನಾಶವಾಗಬೇಕು ಅಂದರೆ ಅಸಮಾನತೆ ಅಸ್ಪೃಶ್ಯತೆ ಲಿಂಗಬೇಧ ತೊಲಗಬೇಕು ಎನ್ನುವುದಾಗಿದೆ. ಈ ಅನಿಷ್ಟಗಳನ್ನು ಕಾಪಾಡಿಕೊಂಡು ಬಂದಿರುವ ಹಿಂದುತ್ವವಾದಿ ವೈದಿಕಧರ್ಮ ಅದು ಹೇಗೆ ಹಿಂದೂ ಧರ್ಮ ಆಗಲು ಸಾಧ್ಯ?  ಇದನ್ನೇ ವೈದಿಕ ಧರ್ಮದ ವಿರೋಧಿಗಳು ಪ್ರಶ್ನಿಸುತ್ತಿರುವುದು. ವಿಚಾರವಾದಿಗಳು ಕೇಳುತ್ತಿರುವುದು, ತಳ ಕೆಳ ವರ್ಗದವರು ದ್ವನಿ ಎತ್ತುತ್ತಿರುವುದು. ಇದಕ್ಕೆ ಸಮರ್ಥವಾಗಿ ಉತ್ತರಿಸುವ ಬದಲು ಪ್ರಶ್ನಿಸಿದವರನ್ನೇ ನಿಂದಿಸುವ, ಭಯಪಡಿಸುವ, ಕೇಸುಗಳನ್ನು ದಾಖಲಿಸಿ ಹಿಂಸಿಸುವ ಮೂಲಕ ಸನಾತನಿಗಳು ಅಂದರೆ ಆತಂಕವಾದಿಗಳು ಎನ್ನುವುದನ್ನು ಸಾಬೀತುಪಡಿಸುವ ಪ್ರಯತ್ನಗಳು ಅವ್ಯಾಹತವಾಗಿವೆ.

ಅಯ್ತು. ಸನಾತನ ಧರ್ಮದ ಮೇಲೆ ಪ್ರೀತಿ ಅಭಿಮಾನ ಭಯ ಭಕ್ತಿ ಆರಾಧನೆ ಇದ್ದವರು ಯಾಕೆ ಈ ಧರ್ಮ ಇಂದಿಗೂ ಅಗತ್ಯ ಎಂದು ಪ್ರತಿಪಾದನೆ ಮಾಡಲಿ. ಈ ಧರ್ಮದ ಆಚರಣೆಯಿಂದ ಯಾರಿಗೆ ಲಾಭ ಹಾಗೂ ಇನ್ಯಾರಿಗೆ ನಷ್ಟ ಎಂಬುದನ್ನು ವಿವರಿಸಲಿ. ಭಾವನೆಗಳಿಗೆ ಧಕ್ಕೆಯಾಯ್ತು ಎನ್ನುವುದೇ ಇವರ ಆರೋಪವಾಗಿದ್ದಲ್ಲಿ,  ಭಾವನೆಗಳು ಈ ಸನಾತನಿಗಳ ಸ್ವತ್ತು ಮಾತ್ರ ಅಲ್ಲಾ, ಈ ಸನಾತನ ಧರ್ಮೀಯರ ತಾರತಮ್ಯ ಮತ್ತು ಶೋಷಣೆಯಿಂದಾಗಿ ತಲೆಮಾರುಗಳಿಂದ ನಲುಗಿದ ಬಹುಸಂಖ್ಯಾತ ದಮನಿತ ಜನರಿಗೂ ಭಾವನೆಗಳಿವೆ. ರಾಷ್ಟ್ರಪತಿಯವರನ್ನೇ ದೇವಸ್ಥಾನದೊಳಗೆ ಬಿಡದ ಈ ಸನಾತನ ಸಂತತಿಗಳನ್ನು, ಹೊಸ ಸಂಸತ್ ಭವನದ ಉದ್ಘಾಟನೆಗೂ ಬುಡಕಟ್ಟಿನ ವಿಧವೆ ಮಹಿಳೆ ಎಂದು ಆಹ್ವಾನಿಸದೇ ದ್ರೌಪತಿ ಮರ್ಮುರವರನ್ನು ಅಪಮಾನಿಸಿದ ಸನಾತನವಾದಿ ನಾಯಕತ್ವವನ್ನು ಖಂಡಿಸದೇ ಇರಲು ಹೇಗೆ ಸಾಧ್ಯ? ಈ ರಾಷ್ಟ್ರದ ಪ್ರಥಮ ಪ್ರಜೆಗೇ ಈ ರೀತಿಯಾದರೆ ಈ ದೇಶದ ಅಸಂಖ್ಯಾತ ತಳ ಕೆಳ ವರ್ಗದವರು ಅದೆಂತಹ ಅವಮಾನವನ್ನು ದಿನನಿತ್ಯ ಎದುರಿಸುತ್ತಿದ್ದಾರೆ. ಇದಕ್ಕೆಲ್ಲಾ ಈ ವೈದಿಕಶಾಹಿಗಳ ಸನಾತನ ಧರ್ಮದ ಮನುವಾದಿ ಕರ್ಮಠ ಜೀವವಿರೋಧಿ ಮೌಢ್ಯಾಚರಣೆಗಳೇ ಕಾರಣವಲ್ಲವೇ?.  ಸ್ವರ್ಗ ನರಕ ಪುನರ್ಜನ್ಮಗಳೆಂಬ ಭ್ರಮೆ ಹುಟ್ಟಿಸಿ, ಕರ್ಮಸಿದ್ಧಾಂತವನ್ನು ಕಣ್ಕಟ್ ವಿದ್ಯೆಯಂತೆ ಬಳಸಿ ಪುರಾತನ ಕಾಲದಿಂದಲೂ ಈ ಸನಾತನ ಧರ್ಮ ವರ್ಣಬೇಧವನ್ನು ಸಾಮ ಬೇಧ ದಂಡಾದಿ ಕ್ರಮಗಳಿಂದ ಕಾಪಾಡಿಕೊಂಡು ಬಂದಿರುವುದರಿಂದ ಬಹುಸಂಖ್ಯಾತರು ಶೋಷಣೆಗೆ ಒಳಗಾಗುತ್ತಾ ಬಂದಿದ್ದು ಇದರ ಹೊಣೆಗಾರಿಕೆ ಕೂಡಾ ಈ ಸನಾತನವಾದಿಗಳದ್ದೇ ಅಲ್ಲವೇ? 

ಸನಾತನ ಧರ್ಮದ ವಿರುದ್ಧ ಮಾತಾಡುವವರು ಕೂಡಲೇ ಕ್ಷಮೆ ಕೇಳಬೇಕು ಇಲ್ಲವೇ ಪರಿಣಾಮ ಎದುರಿಸಬೇಕೆಂದು ಹೆದರಿಸಲಾಗುತ್ತಿದೆ. ಆಯ್ತು ಕ್ಷಮೆ  ಕೇಳಿಸೋಣ. ಅದಕ್ಕೂ ಮೊದಲು ಸನಾತನ ಧರ್ಮದ ಪ್ರತಿಪಾದಕರು ಹಾಗೂ ಪ್ರಚಾರಕರು ಈ ದೇಶದ ಸಮಸ್ತ ಅಸ್ಪೃಶ್ಯರು ತಲೆಮಾರುಗಳಿಂದ ಅನುಭವಿಸುತ್ತಿರುವ  ಅಪಮಾನಕ್ಕೆ ಕ್ಷಮೆ ಕೇಳಬೇಕಿದೆ. ದೇವಸ್ಥಾನಗಳಲ್ಲಿ ಎಲ್ಲರಿಗೂ ಸಮಾನ ಪ್ರವೇಶ ನೀಡದೇ ತಾರತಮ್ಯ ತೋರುತ್ತಿರುವುದಕ್ಕೆ ಕ್ಷಮೆ ಕೋರಬೇಕಿದೆ. ಬ್ರಾಹ್ಮಣ್ಯವಾದಿಗಳು ಶ್ರೇಷ್ಟ, ಉಳಿದವರೆಲ್ಲಾ ಕನಿಷ್ಟ ಎಂದು ಮೇಲುಕೀಳುಗಳನ್ನು ಆಚರಿಸುತ್ತಾ ಬಂದಿರುವುದಕ್ಕಾಗಿ ಕ್ಷಮೆ ಕೇಳಬೇಕಿದೆ. ಮುಟ್ಟು ಮೌಢ್ಯಗಳ ನೆಪದಲ್ಲಿ ಅಸಂಖ್ಯಾತ ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಪರಿಗಣಿಸುತ್ತಾ ಬಂದಿರುವುದಕ್ಕಾಗಿ ಸನಾತನಿಗಳು ಕ್ಷಮೆ ಕೇಳಬೇಕಿದೆ. ಪಂಕ್ತಿಬೇಧ, ಅಜಲು ಪದ್ಧತಿಗಳನ್ನು ಆಚರಣೆಗೆ ತಂದಿರುವ ಪುರೋಹಿತಶಾಹಿಗಳು ಮೊದಲು ಕ್ಷಮೆ ಕೇಳಬೇಕಿದೆ. ದೇವರ ಹೆಸರಲ್ಲಿ ಮೌಢ್ಯಗಳ ಸೃಷ್ಟಿಸಿ ದುಡಿಯುವ ವರ್ಗಗಳನ್ನು ಶೋಷಣೆ ಮಾಡಿ ಯಜಮಾನಿಕೆ ಮಾಡುತ್ತಿರುವವರು ಅನ್ನ ಬೆಳೆದು, ಗುಡಿ ಮನೆಗಳ ಕಟ್ಟಿಕೊಟ್ಟವರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕಿದೆ. ಇನ್ನು ಮುಂದೆ ಧರ್ಮದ ಹೆಸರಲ್ಲಿ ಅಸಮಾನತೆ ಆಚರಣೆ ಮಾಡುವುದಿಲ್ಲ ಎಂದು ಶಪಥ ಮಾಡಬೇಕಿದೆ. ಇದು ಆಗುವವರೆಗೂ ಸನಾತನ ಧರ್ಮದ ಅನಿಷ್ಟಗಳ ವಿರುದ್ಧ ದ್ವನಿ ಎತ್ತುತ್ತಲೇ ಇರಬೇಕಾಗುತ್ತದೆ.. ದೇಶಾದ್ಯಂತ ಸಂಘಟಿತ ಹೋರಾಟಗಳೂ ಶುರುವಾಗುತ್ತವೆ. ಸಂವಿಧಾನದ ಉಳಿವಿಗಾಗಿ ಸನಾತನ ಧರ್ಮವನ್ನು ನಿರ್ಬಂಧಿಸ ಬೇಕಾಗುತ್ತದೆ. ದಮನ ಹೆಚ್ಚಿದಷ್ಟೂ ಪ್ರತಿರೋಧ ತೀವ್ರವಾಗುತ್ತದೆ. 

ಇಷ್ಟಕ್ಕೂ ಸನಾತನವಾದಿಗಳು ಯಾಕೆ ಇಷ್ಟು ಆತಂಕಗೊಂಡಿದ್ದಾರೆ?. ಅವರ ವೈದಿಕ ಧರ್ಮ ಗ್ಲಾನಿರ್ಭವತಿ ಆಗುತ್ತಿದೆಯಾ? ಧರ್ಮ ನಾಶವಾದರೆ ಧರ್ಮರಕ್ಷಣೆಗೆ ಅವತಾರವೆತ್ತಿ ಬರುತ್ತೇನೆಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿಲ್ಲವೇ? ಕೃಷ್ಣ ದೇವರ ಭರವಸೆಯ ಮೇಲೆ ಭರವಸೆ ಇದ್ದರೆ ನಾಶವಾಗುತ್ತಿರುವ ಸನಾತನ ಧರ್ಮದ ರಕ್ಷಣೆಗೆ ಅವತಾರ ಹುಟ್ಟಿಬರಲಿ ಬಿಡಿ. ಅಲ್ಲಿವರೆಗೂ ಸನಾತನಿಗಳು ಕಾಯಬೇಕು ಇಲ್ಲವೇ ಸಂವಿಧಾನವೇ ಈ ದೇಶದ ಧರ್ಮ ಮತ್ತು ದರ್ಶನ ಎಂದು ಒಪ್ಪಿಕೊಂಡು ಸಮಾನತೆ ಸಾಮರಸ್ಯ ಸಹೋದರತೆ ಸಹಮತ ಸಹಬಾಳ್ವೆಯನ್ನು ಕಾಪಾಡಲು ಬದ್ಧತೆ ತೋರಿಸಬೇಕು. ಇಲ್ಲದೇ ಹೋದರೆ ಉದಯನಿಧಿ ಸ್ಟಾಲಿನ್ ನಂತಹ ಅಸಂಖ್ಯಾತ ಧ್ವನಿಗಳು ತಾರಕಕ್ಕೇರುತ್ತವೆ. ಸನಾತನತೆಯ ವಿರುದ್ಧ ಸಮಾನತೆಯ ಕೂಗು ಈ ದೇಶದ ಉದ್ದಗಲಕ್ಕೂ ಮಾರ್ಧನಿಸುತ್ತದೆ. ಅಸಮಾನತೆಯ ಅಂತ್ಯದಲ್ಲೇ ಸಂವಿಧಾನದ ಉಳಿವಿದೆ, ಸನಾತನತೆಯ ಸೋಲಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ ಹಾಗೂ ಹಿರಿಯ ಪತ್ರಕರ್ತರು.

ಇದನ್ನೂ ಓದಿ-ಮುಖವಾಡಗಳನ್ನೆಲ್ಲ ಕಳಚಿ ಹಾಕುತ್ತಿರುವ ಸಾಮಾಜಿಕ ಮಾಧ್ಯಮ

You cannot copy content of this page

Exit mobile version