Home ದೇಶ ಸಂಘ ಪರಿವಾರಕ್ಕೆ ಮಹಾತ್ಮ ಗಾಂಧಿಯೆಂದರೆ ಈಗಲೂ ಭಯ: ಪಿಣರಾಯಿ ವಿಜಯನ್

ಸಂಘ ಪರಿವಾರಕ್ಕೆ ಮಹಾತ್ಮ ಗಾಂಧಿಯೆಂದರೆ ಈಗಲೂ ಭಯ: ಪಿಣರಾಯಿ ವಿಜಯನ್

0

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶುಕ್ರವಾರ ಮಹಾತ್ಮ ಗಾಂಧಿಯವರ 78ನೇ ಪುಣ್ಯತಿಥಿಯಂದು ಅವರಿಗೆ ನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಸಂಘ ಪರಿವಾರವು ಗಾಂಧೀಜಿ ಮತ್ತು ಅವರ ನೆನಪಿಗೆ ಇನ್ನೂ ಹೆದರುತ್ತಿದೆ, ಅದಕ್ಕಾಗಿಯೇ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಅವರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿದರು.

ಜಾತ್ಯತೀತತೆಯ ಬಗೆಗಿನ ರಾಜಿರಹಿತ ನಿಲುವು ಮತ್ತು ವೈವಿಧ್ಯತೆ ಹಾಗೂ ಭಿನ್ನಾಭಿಪ್ರಾಯಗಳನ್ನು ಒಳಗೊಳ್ಳುವಂತಹ ಬಹುತ್ವ ಭಾರತದ ಅವರ ದೃಷ್ಟಿಕೋನದಿಂದಾಗಿಯೇ ಗಾಂಧೀಜಿಯನ್ನು ಹತ್ಯೆ ಮಾಡಲಾಯಿತು ಎಂದು ವಿಜಯನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಂಘ ಪರಿವಾರವು ರಾಷ್ಟ್ರಪಿತನ ನೆನಪಿಗೆ ಹೆದರುತ್ತಿದೆ, ಆದ್ದರಿಂದಲೇ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಅವರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು.

“ಅವರಿಗೆ ಗಾಂಧೀಜಿಯೆಂದರೆ ಏಕೆ ಇನ್ನೂ ಭಯ? ಉತ್ತರ ಸರಳವಾಗಿದೆ. ಸಂಘ ಪರಿವಾರದ ಕಲ್ಪನೆಯ ದ್ವೇಷ ಮತ್ತು ಪ್ರತ್ಯೇಕತೆಯ ರಾಜಕೀಯಕ್ಕೆ ಗಾಂಧೀಜಿಯವರ ಜೀವನ ಮತ್ತು ದೃಷ್ಟಿಕೋನ ತದ್ವಿರುದ್ಧವಾಗಿದೆ,” ಎಂದು ಸಿಎಂ ಪ್ರತಿಪಾದಿಸಿದರು.

ಕೇಂದ್ರದ ವಿರುದ್ಧ ಹರಿಹಾಯ್ದ ಕೇರಳ ಸಿಎಂ, ಗಣರಾಜ್ಯೋತ್ಸವದಂದು ಒಗ್ಗಟ್ಟಿಗೆ ಕರೆ

ಸಾಮಾನ್ಯ ಜನರ ಬದುಕಿನಿಂದ ಗಾಂಧೀಜಿಯನ್ನು ಅಳಿಸಿಹಾಕಲು ಸಂಘ ಪರಿವಾರ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

ವೈವಿಧ್ಯತೆಯಲ್ಲಿ ಏಕತೆಯೇ “ಭಾರತೀಯ ಗಣರಾಜ್ಯದ ಅಡಿಪಾಯ”ವಾಗಿದೆ. “ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಸರ್ವಾಧಿಕಾರಿ ಪ್ರವೃತ್ತಿಗಳಿಂದ” ಇದನ್ನು ರಕ್ಷಿಸಲು ಪ್ರತಿಯೊಬ್ಬರೂ ಬದ್ಧರಾಗಿರಬೇಕು ಎಂದು ವಿಜಯನ್ ಹೇಳಿದರು.

ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ಯಲು ಕೆಲವು ಶಕ್ತಿಗಳು “ಇತಿಹಾಸವನ್ನು ಮರುಬರೆಯಲು ಮತ್ತು ಕೋಮು ಹಂತಕರನ್ನು ವೀರರಂತೆ (ಹೀರೋಗಳಂತೆ) ಬಿಂಬಿಸಲು” ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದರು.

ಗಾಂಧೀಜಿಯವರ ಹತ್ಯೆ ನಡೆದಿರುವುದು “ಗೋಡ್ಸೆ ಎಂಬ ವ್ಯಕ್ತಿಯಿಂದಲ್ಲ, ಬದಲಾಗಿ ಸಂಘ ಪರಿವಾರ ಪ್ರತಿಪಾದಿಸಿದ ದ್ವೇಷದ ರಾಜಕೀಯದ ಪ್ರತೀಕದಿಂದ” ಎಂದು ಹಿರಿಯ ಮಾರ್ಕ್ಸ್‌ವಾದಿ ನಾಯಕ ಹೇಳಿದರು. ಈ ರಾಜಕೀಯವು ಈಗಲೂ ದೇಶದ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ದಾಳಿ ನಡೆಸಿ ನಾಶಮಾಡಲು ಪ್ರಯತ್ನಿಸುತ್ತಿದೆ ಎಂದರು.

ಗಾಂಧೀಜಿಯವರ ಬಲಿದಾನವು ಕೋಮುವಾದ ವಿರೋಧಿ ಹೋರಾಟಕ್ಕೆ ನೀಡಿದ ನಿರಂತರ ಕರೆಯಾಗಿದೆ ಎಂದು ಅವರು ಹೇಳಿದರು.

ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಕೂಡ ಸಂಘ ಪರಿವಾರವು ಗಾಂಧೀಜಿಗೆ ಹೆದರುತ್ತಿದೆ ಎಂದು ಹೇಳಿದರು.

ರಾಷ್ಟ್ರಪಿತನಿಗೆ ಗೌರವ ಸಲ್ಲಿಸಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸತೀಶನ್, ಸಂಘ ಪರಿವಾರವು ಗಾಂಧಿಯವರ ನೆನಪುಗಳಿಗೂ ಹೆದರುತ್ತಿದೆ. ಅದಕ್ಕಾಗಿಯೇ ಜನರಿಂದ ವಿಷಯಗಳನ್ನು ಮುಚ್ಚಿಡಲು ಅವರು “ಪುಸ್ತಕಗಳು ಮತ್ತು ಬರಹಗಳನ್ನು ಅಳಿಸಿಹಾಕುತ್ತಿದ್ದಾರೆ” ಎಂದು ಹೇಳಿದರು.

ಗಾಂಧಿಯ ಹಂತಕ ಕೇವಲ ಒಬ್ಬ ವ್ಯಕ್ತಿಯಲ್ಲ, ಅದೊಂದು ಸಿದ್ಧಾಂತ ಎಂದು ಅವರೂ ಅಭಿಪ್ರಾಯಪಟ್ಟರು.

ಸಂಘ ಪರಿವಾರ ಅವರನ್ನು ಗುಂಡಿಕ್ಕಿ ಕೊಂದಿದ್ದರೂ, ಗಾಂಧೀಜಿ ಸಾವಿನ ನಂತರವೂ ಜೀವಂತವಾಗಿದ್ದಾರೆ ಎಂದು ಸತೀಶನ್ ಹೇಳಿದರು.

ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಮುಖವಾಗಿದ್ದ ಗಾಂಧೀಜಿ, 1948ರ ಈ ದಿನದಂದು ನಾಥೂರಾಮ್ ಗೋಡ್ಸೆಯಿಂದ ಹತ್ಯೆಗೀಡಾದರು.

You cannot copy content of this page

Exit mobile version