ದೇಶದಲ್ಲಿನ ಕೋಮುವಾದದಂತಹ ವಿವಿಧ ವಿಷಯಗಳ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ “ಬಲವಾದ ದನಿ”ಯನ್ನು ಶ್ಲಾಘಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್, ರಾಹುಲ್ ಒಬ್ಬ “ಪ್ರಾಮಾಣಿಕ ನಾಯಕ” ಎಂದು ಶುಕ್ರವಾರ ಬಣ್ಣಿಸಿದ್ದಾರೆ.
ದೇಶದಲ್ಲಿನ ಕೋಮುವಾದ, ದ್ವೇಷ ಮತ್ತು ವಿಭಜನೆಯ ರಾಜಕೀಯದ ವಿರುದ್ಧ ಮಾತನಾಡುವುದರಿಂದ ರಾಹುಲ್ ಗಾಂಧಿಯವರನ್ನು ಎಲ್ಲರೂ ಇಷ್ಟಪಡುತ್ತಾರೆ ಎಂದು ತಿರುವನಂತಪುರಂ ಸಂಸದರು ಹೇಳಿದರು.
“ಈ ವಿಷಯದಲ್ಲಿ ನನಗೆ ಬೇರೆ ಅಭಿಪ್ರಾಯವಿಲ್ಲ,” ಎಂದು ತರೂರ್ ತಮ್ಮ ಕ್ಷೇತ್ರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನಾವೆಲ್ಲರೂ ಒಂದೇ ನಿಲುವಿನಲ್ಲಿದ್ದೇವೆ: ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭೇಟಿಯ ನಂತರ ಶಶಿ ತರೂರ್
ತಮ್ಮ ಅಸಮಾಧಾನಗಳ ಪರಿಹಾರಕ್ಕಾಗಿ ತರೂರ್ ಅವರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಮರುದಿನವೇ ಈ ಹೇಳಿಕೆಗಳು ಬಂದಿವೆ. ಭೇಟಿಯ ನಂತರ ಅವರು “ಎಲ್ಲವೂ ಚೆನ್ನಾಗಿದೆ” ಮತ್ತು “ನಾವೆಲ್ಲರೂ ಒಂದೇ ನಿಲುವಿನಲ್ಲಿದ್ದೇವೆ (ಒಮ್ಮತ ಹೊಂದಿದ್ದೇವೆ)” ಎಂದು ಹೇಳಿದ್ದರು.
ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮನ್ನು ನಡೆಸಿಕೊಂಡ ರೀತಿ ಮತ್ತು ಕೇರಳದಲ್ಲಿ ಕೆಲವು ನಾಯಕರು ತಮ್ಮನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿರುವುದರ ಬಗ್ಗೆ ತರೂರ್ ಅಸಮಾಧಾನಗೊಂಡಿದ್ದರು.
