ಸಾರ್ವಜನಿಕ ಗಣೇಶೋತ್ಸವದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಈದ್ಗಾ ಮೈದಾನ ಮತ್ತು ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ವ್ಯತಿರಿಕ್ತವಾಗಿ ತೀರ್ಪು ನೀಡಿವೆ.
ಹಲವು ದಿನಗಳಿಂದ ಸಾರ್ವಜನಿಕ ಗಣೇಶೋತ್ಸವದ ಕಾರಣಕ್ಕೆ ವಿವಾದದ ಕೇಂದ್ರಬಿಂದು ಆಗಿದ್ದ ಚಾಮರಾಜಪೇಟೆ ಈದ್ಗಾ ಮೈದಾನ, ಸುಪ್ರೀಂಕೋರ್ಟ್ ಮಹತ್ವದ ತೀರ್ಪಿನಿಂದ ನಿರಾಳವಾಗಿದೆ. ಸಾಕಷ್ಟು ವಿರೋಧದ ನಡುವೆಯೂ ಸರ್ಕಾರ ಈ ಬಾರಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿತ್ತು. ಅದೇನೇ ಆದರೂ ಈ ಬಾರಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸಿಯೇ ತೀರುತ್ತೇವೆ ಎಂಬ ಸರ್ಕಾರದ ಹಠಮಾರಿ ನಿಲುವಿಗೆ ಸುಪ್ರೀಂಕೋರ್ಟ್ ಯಥಾಸ್ಥಿತಿ ಕಾಪಾಡಲು ತಿಳಿಸಿದೆ.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ 200 ವರ್ಷಗಳಿಂದಲೂ ಇಲ್ಲದ ಗಣೇಶೋತ್ಸವ ಈಗ ಯಾಕೆ ಎಂದು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಪ್ರಶ್ನಿಸಿದೆ. ಹಾಗಾಗಿ ಚಾಮರಾಜಪೇಟೆಯಲ್ಲಿ ಹಿಂದಿನ ಯಥಾಸ್ಥಿತಿಯನ್ನೇ ಕಾಯ್ದುಕೊಂಡು ಹೋಗಬೇಕು ಎಂದು ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಸುಪ್ರೀಂಕೋರ್ಟಿನ ಈ ತೀರ್ಪಿನಿಂದ ಸರ್ಕಾರ ಮತ್ತು ಹಿಂದೂಪರ ಸಂಘಟನೆಗಳ ಉದ್ದೇಶಗಳಿಗೆ ತಡೆಹಿಡಿದಂತಾಗಿದೆ.

ಚಾಮರಾಜಪೇಟೆ ಈದ್ಗಾ ಮೈದಾನದ ತೀರ್ಪನ್ನು ಎತ್ತಿ ಹಿಡಿದು ಹುಬ್ಬಳ್ಳಿ ಈದ್ಗಾ ಮೈದಾನದ ಗಣೇಶೋತ್ಸವಕ್ಕೆ ತಡೆ ಹಿಡಿಯುವಂತೆ ನಿನ್ನೆ ರಾತ್ರಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆಯನ್ನು ನಿನ್ನೆ ತಡರಾತ್ರಿ ತಗೆದುಕೊಂಡ ಹೈಕೋರ್ಟ್ ಸುಮಾರು ಒಂದೂವರೆ ಗಂಟೆಗಳ ವಿಚಾರಣೆ ನಂತರ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿದೆ. ಅಲ್ಲದೇ ಹುಬ್ಬಳ್ಳಿ ಈದ್ಗಾ ಮೈದಾನ ಸ್ಥಳೀಯ ಪಾಲಿಕೆ ವ್ಯಾಪ್ತಿಯಲ್ಲಿ ಬರುವಂತದ್ದು. ಹಾಗಾಗಿ ಅನುಮತಿ ಕೊಡುವುದು, ಬಿಡುವುದು ಪಾಲಿಕೆ ನಿರ್ಧಾರಕ್ಕೆ ಬಿಟ್ಟದ್ದು. ಈ ಹಿನ್ನೆಲೆಯಲ್ಲಿ ಕೋರ್ಟ್ ಮಧ್ಯ ಪ್ರವೇಶ ಸರಿಯಲ್ಲ ಎಂದು ತೀರ್ಪು ನೀಡಿದೆ. ಇದರ ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ಸಹ ಆಯೋಜಕರ ಜವಾಬ್ದಾರಿ ಎಂದು ತಿಳಿಸಿದೆ.