ಬೆಂಗಳೂರು: ಭಾರತದ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಕಾಲೇಜು ಮಕ್ಕಳನ್ನು ಕರೆತರುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು ಈಗ ಎಲ್ಲೆಡೆ ವಿವಾದಕ್ಕೆ ಕರಣವಾಗಿದೆ.
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಹಾಗೂ ಥೀಮ್ ಪಾರ್ಕ್‌ಗೆ ಶಂಕುಸ್ಥಾಪನೆ ಸೇರಿ ಹಲವು ಕಾರ್ಯಕ್ರಮಕ್ಕೆ ಭಾಗವಹಿಸಲು ಪ್ರಧಾನಿ ಮೋದಿ ನವೆಂಬರ್ 11ರಂದು ಬೆಂಗಳೂರಿಗೆ ಬರುತ್ತಿದ್ದು, ಈ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಕಾಲೇಜುಗಳಿಂದ ಮಕ್ಕಳನ್ನು ಕರೆತರಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ ಇದರ ಜೊತೆ ವಿದ್ಯಾರ್ಥಿಗಳನ್ನು ಕರೆತರದಿದಲ್ಲಿ ಮುಂದಿನ ಆಗು ಹೋಗುಗಳಿಗೆ ಪ್ರಾಂಶುಪಾಲರೇ ಹೊಣೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದೇಶ ಪತ್ರದಲ್ಲಿ, “ಪ್ರಧಾನ ಮಂತ್ರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಗಮಿಸುತ್ತಿರುವ ಪ್ರಯುಕ್ತ ದಿನಾಂಕ: 02-11- 2022 ರಂದು ನಡೆದ ಪ್ರಾಂಶುಪಾಲರ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ತಮ್ಮ ಕಾಲೇಜಿನಿಂದ ನಿಗದಿಪಡಿಸಿದಷ್ಟು ವಿದ್ಯಾರ್ಥಿಗಳನ್ನು (ಪ್ರತಿ ಲಗತ್ತಿಸಿದೆ) ನೇಮಕ ಮಾಡಿರುವ ಬಸ್‌ನ ನೋಡಲ್ ಅಧಿಕಾರಿಗಳು ಹಾಗೂ ಪ್ರಾಂಶುಪಾಲರು ನಿಗದಿತ ಸಮಯಕ್ಕೆ ಸರಿಯಾಗಿ ಕಾಲೇಜಿನಿಂದ ಹೊರಡುವ ಬಸ್‌ನಲ್ಲಿ ಕಾರ್ಯಕ್ರಮಕ್ಕೆ ಕ್ಷೇಮವಾಗಿ ಕರೆತರಲು ಹಾಗೂ ಕಾರ್ಯಕ್ರಮ ಮುಗಿದ ನಂತರ ವಾಪಸ್ ಕರೆದುಕೊಂಡು ಹೋಗಲು ಸೂಚಿಸಿದೆ. ತಪ್ಪಿದ್ದಲ್ಲಿ ಮುಂದಿನ ಆಗು-ಹೋಗುಗಳಿಗೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರೇ ಜವಾಬ್ದಾರರಾಗಿರುತ್ತಾರೆ” ಎಂದು ಉಲ್ಲೇಖಿಸಿ ಆದೇಶ ಪ್ರತಿಯನ್ನು ಬೆಂಗಳೂರು ಗ್ರಾಮಾಂತರ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಿಗೆ ಕಳುಹಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿರುವ ಈ ಆದೇಶಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದು, ಕಾಲೇಜು ವಿದ್ಯಾರ್ಥಿಗಳನ್ನು ರಾಜಕೀಯ ಉದ್ದೇಶಕ್ಕಾಗಿ ದುರುಪಯೋಗ ಪಡೆಸಿಕೊಳ್ಳಲಾಗುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೂ ಶಾಲಾ-ಕಾಲೇಜು ಮಕ್ಕಳಿಗೂ ಸಂಬಂಧವೇನು ಎಂಬ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೇಳುತ್ತಿದ್ದಾರೆ.
ಭಾರತ್ ಜೋಡೊ ಯಾತ್ರೆಯಲ್ಲಿ ಮಕ್ಕಳ ದುರುಪಯೋಗ ಎಂದಿದ್ದ ಮಕ್ಕಳ ಆಯೋಗ ಸಂಸ್ಥೆ ಈಗೆಲ್ಲಿ?
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಮಕ್ಕಳನ್ನು ದುರುಪಯೋಗ ಮಾಡಲಾಗುತ್ತಿದೆ ಎಂಬ ವಿವಾದ ಸೃಷ್ಟಿಯಾದ ತಕ್ಷಣ ಮಕ್ಕಳ ಆಯೋಗ ಸಂಸ್ಥೆ ಈ ಬಗ್ಗೆ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಅಕ್ಟೋಬರ್ ತಿಂಗಳಲ್ಲಿ ಪತ್ರ ಬರೆದಿತ್ತು. ಪಕ್ಷದ ಯಾತ್ರೆಯಲ್ಲಿ ಮಕ್ಕಳನ್ನು ರಾಜಕೀಯ ಸಾಧನಗಳನ್ನಾಗಿ ಬಳಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ವಿರುದ್ಧ ಆರೋಪವಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಳಿತ್ತು ಆದರೀಗ ಸರ್ಕಾರವೇ ಮಕ್ಕಳನ್ನು ಅವರಿಗೆ ಸಂಬಂಧವಿಲ್ಲದ ಕಾರ್ಯಕ್ರಮಕ್ಕೆ ಕರೆದೊಯ್ಯಲು ಆದೇಶ ಹೊರಡಿಸಿರುವುದನ್ನು ನೋಡಿಯೂ ಸುಮ್ಮನಿರುವುದು ಏಕೆ ಎಂಬ ಪ್ರಶ್ನೆ ಕೇಳಿ ಬಂದಿದೆ.