Home ಇನ್ನಷ್ಟು ಕೋರ್ಟು - ಕಾನೂನು ಸಾಮಾಜಿಕ ಮಾಧ್ಯಮದ ಪೋಸ್ಟುಗಳು ದೇಶದ ಜಾತ್ಯಾತೀತ ಮನೋಭಾವನೆ ಮತ್ತು ಒಗ್ಗಟ್ಟಿಗೆ ಧಕ್ಕೆ ತರುತ್ತಿವೆ: ಸುಪ್ರೀಂ ಕೋರ್ಟ್

ಸಾಮಾಜಿಕ ಮಾಧ್ಯಮದ ಪೋಸ್ಟುಗಳು ದೇಶದ ಜಾತ್ಯಾತೀತ ಮನೋಭಾವನೆ ಮತ್ತು ಒಗ್ಗಟ್ಟಿಗೆ ಧಕ್ಕೆ ತರುತ್ತಿವೆ: ಸುಪ್ರೀಂ ಕೋರ್ಟ್

0

ದೆಹಲಿ: ದೇಶದ ನಾಗರಿಕರು ವಾಕ್ ಸ್ವಾತಂತ್ರ್ಯದ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯ ಮತ್ತು ಅವುಗಳ ಮಹತ್ವದ ಬಗ್ಗೆ ಅರಿವು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಅದೇ ರೀತಿ, ಸ್ವಯಂ ನಿಯಂತ್ರಣ ಮತ್ತು ಸಂಯಮದ ಅಗತ್ಯತೆಯ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ಅಪಾಯಕಾರಿ ಪೋಸ್ಟ್‌ಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸುವುದನ್ನು ಪರಿಗಣಿಸುತ್ತಿರುವುದಾಗಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ ಸೋಮವಾರ ಘೋಷಿಸಿತು.

ದ್ವೇಷಪೂರಿತ ಪೋಸ್ಟ್‌ಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅದು ಹೇಳಿದೆ. ಆಪರೇಷನ್ ಸಿಂಧೂರ್ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಧರ್ಮವನ್ನು ಅವಹೇಳನಕಾರಿಯಾಗಿ ಟೀಕಿಸಿದ್ದಕ್ಕಾಗಿ ವಜಾಹತ್ ಖಾನ್ ಎಂಬ ವ್ಯಕ್ತಿ ಇನ್ಫ್ಲುಯೆನ್ಸರ್ ಶರ್ಮಿಷ್ಠ ಪನೋಲಿ ವಿರುದ್ಧ ಪ್ರಕರಣ ದಾಖಲಿಸಿದರು.

ಅದರ ನಂತರ, ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ರಾಜ್ಯಗಳಲ್ಲಿ‌ ಖಾನ್ ಅವರ ಹಳೆಯ ‌ಟ್ವಿಟರ್ ಪೋಸ್ಟ್‌ಗಳ ವಿರುದ್ಧ ದೂರುಗಳು ದಾಖಲಾಗಿದ್ದವು. ಪರಿಣಾಮವಾಗಿ, ಜೂನ್ 9ರಂದು ಅವರನ್ನು ಪೊಲೀಸರು ವಶಕ್ಕೆ ಪಡೆದರು. ಅದೇ ತಿಂಗಳ 23ರಂದು, ಸುಪ್ರೀಂ ಕೋರ್ಟ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ವಿರುದ್ಧ ಮಧ್ಯಂತರ ರಕ್ಷಣೆ ನೀಡಿ ಆದೇಶಗಳನ್ನು ಹೊರಡಿಸಿತು.

ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ಪೀಠವು ಸೋಮವಾರ ಈ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿತು. ಈ ಸಂದರ್ಭದಲ್ಲಿ ಅದು ಒಂದಷ್ಟು ಮುಖ್ಯ ಹೇಳಿಕೆಗಳನ್ನು ನೀಡಿತು.

‘ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಉತ್ತೇಜಿಸುವುದು ಮೂಲಭೂತ ಕರ್ತವ್ಯಗಳ ಮುಖ್ಯ ಉದ್ದೇಶವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ಗಳು ಇವುಗಳನ್ನು ಗಂಭೀರವಾಗಿ ಉಲ್ಲಂಘಿಸಲಾಗುತ್ತಿದೆ.

ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯ ಏನೆಂದು ಜನರು ತಿಳಿದುಕೊಳ್ಳಬೇಕು’ ಎಂದು ಪೀಠ ಹೇಳಿದೆ. ‘ನಾವು ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ಗಳ ಮೇಲೆ ನಿರ್ಬಂಧಗಳು ಅಥವಾ ನಿಷೇಧಗಳನ್ನು ವಿಧಿಸುವ ಬಗ್ಗೆ ಮಾತನಾಡುತ್ತಿಲ್ಲ.

ವ್ಯಕ್ತಿಗಳ ಘನತೆ, ದೇಶದ ಜನರಲ್ಲಿ ಸಹೋದರತ್ವ ಮತ್ತು ಜಾತ್ಯತೀತತೆಯನ್ನು ರಕ್ಷಿಸುವ ಬಗ್ಗೆ ನಾವು ಯೋಚಿಸಬೇಕು’ ಎಂದು ಅದು ಹೇಳಿದೆ. ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಲಾಯಿತು.

You cannot copy content of this page

Exit mobile version