“ಒಂದು ವಿಷಯ ಮೊದಲಿಗೇ ಹೇಳಿಬಿಡುತ್ತೇನೆ. ಈಗಾಗಲೇ ನೀವು “ಏಳುಮಲೆ” ಸಿನಿಮಾದ ಟ್ರೈಲರ್ ನೋಡಿದ್ದರೆ, ಅಲ್ಲಿ ತೋರಿಸಿದಷ್ಟು ರೋಚಕತೆ ಸಿನಿಮಾದಲ್ಲಿಲ್ಲ!! Wait Wait..” ಸಂತೋಷ್ ಕುಮಾರ್ ಎಲ್ ಎಮ್ ಅವರ ಸಿನಿಮಾ ವಿಮರ್ಶೆ
ಒಂದು ವಿಷಯ ಮೊದಲಿಗೇ ಹೇಳಿಬಿಡುತ್ತೇನೆ. ಈಗಾಗಲೇ ನೀವು “ಏಳುಮಲೆ” ಸಿನಿಮಾದ ಟ್ರೈಲರ್ ನೋಡಿದ್ದರೆ, ಅಲ್ಲಿ ತೋರಿಸಿದಷ್ಟು ರೋಚಕತೆ ಸಿನಿಮಾದಲ್ಲಿಲ್ಲ!!
Wait Wait..
ಆದರೆ
“ಅದಕ್ಕಿಂತ ಜಾಸ್ತಿ ಇದೆ”🙂
ಈ ಮಾತನ್ನು ಬೇಕು ಅಂತ ಹೇಳುತ್ತಿಲ್ಲ. ಸಿನಿಮಾ ನೋಡಿ ಹೊರಬರುತ್ತಿರುವ ಪ್ರತಿಯೊಬ್ಬರನ್ನು ಕೇಳಿದರೂ ಹೇಳುವ ಮಾತು…. It is a Thrilling “Edge Of the Seat” Love story!
ನಮ್ಮ ಮಾಯ್ಕಾರ ಮಾದಪ್ಪ ಓಡಾಡಿರುವ ಸೀಮೆ ಎಂದರೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ನಂಜನಗೂಡು, ಗುಂಡ್ಲುಪೇಟೆ, ಯಳಂದೂರು ಇತ್ಯಾದಿ ಊರುಗಳಲ್ಲಿ ನಮಗೆ ಮಾದಪ್ಪ ಎಂದರೆ ಪಂಚಪ್ರಾಣ!
ಅಲ್ಲಿ ಯಾವುದೇ ಕೆಲಸ ನಡೆಯುವಾಗ ಏನಾದರೂ ಚಿಕ್ಕಪುಟ್ಟ ಕಷ್ಟ ಎದುರಾದರೆ “ಉಡೋ, ಮಾದಪ್ಪನ ಹೆಸರು ಹೇಳಿ ಒಂದು ಕಾಯಿ ಒಡ್ದು ಮುಂದಕ್ ನಡೆ… ಎಲ್ಲ ಸಲೀಸಾಗ್ ನಡೆತ್ತೆ ಕಣಾ” ಅಂತಾರೆ! ಅಂದರೆ ಮಾದಪ್ಪನ ಹೆಸರೇಳಿ ಮುಂದಡಿ ಇಟ್ಟರೆ ಅದೇ ಧೈರ್ಯ ಮತ್ತು ಅಲ್ಲೇ “ಅರ್ಧ ಗೆದ್ದ ಹಾಗೆ” ಅನ್ನೋ ರೀತಿ!
“ಏಳುಮಲೆ” ಸಿನಿಮಾ ಅರ್ಧ ನನಗೆ ಕನೆಕ್ಟ್ ಆಗಿದ್ದೇ ಅಲ್ಲಿ! ಆದರೆ ಈಗೀಗ ಮಾದಪ್ಪನ ಹೆಸರು ಹೇಳಿಕೊಂಡು ಸಿನಿಮಾಗಳಲ್ಲಿ ಅದರಿಂದ ಲಾಭ ಪಡೆದುಕೊಳ್ಳುವವರೇ ಜಾಸ್ತಿ. ಇಲ್ಲೂ ಅದೇನಾದರೂ ಆದರೆ ಅನ್ನುವ ಆತಂಕದ ಜೊತೆಗೆ, ಸಿನಿಮಾದ ನಿರ್ಮಾಪಕರ ಹೆಸರು ನೋಡಿ “ಬಹುಶಃ ಹಾಗಿರಲಾರದು” ಅನ್ನುವ ಧೈರ್ಯವೂ ಸ್ವಲ್ಪವಿತ್ತು! ಇಂದು ಮೊದಲನೇ ಪ್ರದರ್ಶನ ನೋಡಿಯೇ ಆ ಆತಂಕ ಕಡಿಮೆಯಾಗುವುದರ ಜೊತೆಗೆ, ಈ ಸಿನಿಮಾದ ನಿರ್ಮಾತೃಗಳ ಬಗ್ಗೆ ಗೌರವ ಮೂಡಿತು. ಈ ಸಿನಿಮಾದಲ್ಲಿ ಮಹದೇಶ್ವರ ಬೆಟ್ಟ ಅನ್ನುವ ಸ್ಥಳವನ್ನು ಕೇವಲ ಹೆಸರಿಗೆ ಅನ್ನುವಂತೆ ತೆಗೆದುಕೊಂಡಿಲ್ಲ. ಸಿನಿಮಾದ ಕಥೆಗೂ, ಮಾದಪ್ಪನ ಬೆಟ್ಟಕ್ಕೂ ಒಳ್ಳೆಯ ಲಿಂಕನ್ನು ಕಥೆಗಾರ ಅದ್ಬುತವಾಗಿ ಕೊಟ್ಟಿದ್ದಾರೆ. ಅಂದರೆ ಈ ಕಥೆ ಆ ಜಾಗದಲ್ಲಿ ಬಿಟ್ಟು ಬೇರೆ ಕಡೆ ನಡೆಯಲು ಸಾಧ್ಯವಿಲ್ಲ ಅನ್ನುವ ರೀತಿಯಲ್ಲಿ ಆ ಸ್ಥಳವನ್ನು ಮತ್ತು ಕಥೆಯನ್ನು ಒಟ್ಟುಗೂಡಿಸಿದ್ದಾರೆ
ತಮಿಳುನಾಡಿನಿಂದ ಕರ್ನಾಟಕ ರಾಜ್ಯದ ಪ್ರವೇಶಕ್ಕೆ ಇರುವ ಅತಿಮುಖ್ಯ ಗಡಿಭಾಗವೆಂದರೆ ಅದು ಮಹದೇಶ್ವರ ಬೆಟ್ಟ. ಪಕ್ಕದಲ್ಲಿಯೇ ಕಾವೇರಿನದಿ ಕರ್ನಾಟಕದಿಂದ ತಮಿಳುನಾಡಿಗೆ ಹರಿದು ಮೆಟ್ಟೂರು ಡ್ಯಾಮ್ ಸೇರುತ್ತದೆ. ಅತ್ತ ಕಡೆ ಹೋದರೆ ತಮಿಳುನಾಡು. ಬೆಟ್ಟದಿಂದ ಇತ್ತ ಕಡೆ ಬಂದರೆ ಹನೂರು, ಕೊಳ್ಳೇಗಾಲ, ಚಾಮರಾಜನಗರ, ಮೈಸೂರು, ಮಂಡ್ಯ ಹೀಗೆ…
ಮಹದೇಶ್ವರ ಬೆಟ್ಟವೆಂದರೆ ಅದೊಂದು ದಟ್ಟವಾದ ಬೆಟ್ಟಗಳ ಸಾಲು. ಅಲ್ಲೇ ಆನುಮಲೆ, ಜೇನುಮಲೆ, ಗುಂಜುಮಲೆ, ಗುಲಗಂಜಿಮಲೆ… ಸೇರಿದಂತೆ ಏಳು ಎಪ್ಪತ್ತೇಳು ಬೆಟ್ಟಗಳಿರುವುದು. ನೀವು ಒಂದು ಬೆಟ್ಟದಿಂದ ಮತ್ತೊಂದು ಬೆಟ್ಟಕ್ಕೆ ಕಾಡಿನೊಳಗೆ ಸಾಗುತ್ತಾ ಹೋದರೆ ತಮಿಳುನಾಡಿನಿಂದ ಕರ್ನಾಟಕಕ್ಕೂ ಬರಬಹುದು. ಅಥವಾ ಕರ್ನಾಟಕದಿಂದ ತಮಿಳುನಾಡಿಗೂ ನುಸುಳಬಹುದು. ಹೀಗಿದ್ದುದರಿಂದಲೇ ವೀರಪ್ಪನ್’ನಂತಹ ಕಾಡುಗಳ್ಳ ಅಲ್ಲೇ ಅದೆಷ್ಟೋ ವರ್ಷಗಳ ಕಾಲ ಪೊಲೀಸರಿಗೆ ಸಿಗದಂತೆ ಅಲ್ಲಿ ಅವಿದುಕೊಂಡಿದ್ದದ್ದು!
ಈ ಭೌಗೋಳಿಕ ಪ್ರದೇಶದ ವೈಶಿಷ್ಟತೆಯನ್ನೇ ಮುಖ್ಯವಾಗಿ ಬಳಸಿಕೊಂಡು ತಮಿಳುನಾಡಿನ ಹುಡುಗಿ ಮತ್ತು ಕನ್ನಡದ ಹುಡುಗನ ನಡುವಿನ ಪ್ರೇಮಕಥೆಯನ್ನು ಹೇಳಹೊರಟಿರುವುದು “ಏಳುಮಲೆ” ಸಿನಿಮಾದ ವಿಶೇಷ! ಈ ಕಥೆಯ ಎಳೆಯನ್ನೇ ತಲೆಯಲ್ಲಿಟ್ಟುಕೊಂಡು ಇದೊಂದು ಡ್ರಾಮ Genre ಅಂದುಕೊಂಡರೆ ಅದು ಖಂಡಿತ ತಪ್ಪಾದೀತು!
ಕಥೆ ಶುರುವಾದ ಹತ್ತು ಹದಿನೈದು ನಿಮಿಷಗಳಲ್ಲೇ ನಮಗೆ ಅರ್ಥವಾಗಿಬಿಡುತ್ತದೆ. ಈ ಕಥೆಗಾರ ನಮ್ಮನ್ನು ನಿರಾಳವಾಗಿ ಉಸಿರಾಡಲು ಬಿಡುವುದಿಲ್ಲ ಅಂತ! ರೋಚಕತೆಯೊಂದಿಗೆ ಒಂದು ದೃಶ್ಯಕ್ಕೂ ಮತ್ತೊಂದು ದೃಶ್ಯಕ್ಕೂ ಕೊಟ್ಟಿರುವ ಲಿಂಕ್ ಅಷ್ಟು ಅದ್ಭುತವಾಗಿದೆ. ಅದು ಬಹಳ ಸಹಜ ಅನಿಸುತ್ತದೆ ಕೂಡ. ಹಾಗಾಗಿ ಇಲ್ಲಿ ಕಥೆಗಾರನ ಬುದ್ಧಿವಂತಿಕೆಗಿಂತ ಸಹಜ ಅನ್ನಿಸುವ ಚಿತ್ರಕಥೆ ವೀಕ್ಷಕರ ಮನಸ್ಸು ಗೆಲ್ಲುತ್ತದೆ.
ಈ ಹಿಂದೆ ” ಧರಣಿ ಮಂಡಲ ಮಧ್ಯದೊಳಗೆ” ಅನ್ನುವ ಸಿನಿಮಾ ಬಂದಿತ್ತು. ಆ ಸಿನಿಮಾದಲ್ಲಿಯೂ ಇದೇ ರೀತಿ ಹೈಪರ್ ಲಿಂಕ್ ಚಿತ್ರಕಥೆಯನ್ನು ಹೆಣೆಯಲಾಗಿತ್ತು. ಇದೂ ಕೂಡ ಅದೇ ರೀತಿಯ ಹೈಪರ್ ಲಿಂಕ್ ಚಿತ್ರಕಥೆಯೇ! ಆದರೆ ಅಲ್ಲಿ ನಮಗೆ “ಎಲ್ಲಾ ಎಳೆಗಳು ಒಂದಕ್ಕೊಂದು ಎಲ್ಲಿ ಕನೆಕ್ಟ್ ಆಗಬಹುದು?” ಅನ್ನುವ ಸುಳಿವು ಸಿಗುತ್ತಿರಲಿಲ್ಲ. ಹಾಗಾಗಿ ಕೆಲವು ಕಡೆ ಯೋಚನೆ ಮಾಡುವಂತೆ ಮಾಡಲಾಗಿತ್ತು. ಆದರೆ ಇಲ್ಲಿ ಹಾಗಲ್ಲ. ಇಲ್ಲಿ ಪ್ರತಿ ಪಾತ್ರ ಆಡುವ ಡೈಲಾಗ್ ಗೆ, ಆತ ಮಾಡುವ ಒಂದು ಕರೆಗೆ, ಅಲ್ಲಿ ನಡೆಯುವ ಒಂದು ಪುಟ್ಟ ಘಟನೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಆ ವಿಷಯದ ಪ್ರಾಮುಖ್ಯತೆ ಮುಂದಿನ ದೃಶ್ಯದಲ್ಲಿ ನಮಗೆ ಅರ್ಥವಾಗುತ್ತದೆ. ಹಾಗಾಗಿ ಒಂದು ಕ್ಷಣ ನಮ್ಮ ಗಮನ ಅತ್ತಿತ್ತ ಹೋಗದಂತೆ ಸೀಟಿನ ಅಂಚಿನಲ್ಲಿ ಕುಳಿತು ಪ್ರತಿ ಕ್ಷಣವನ್ನು ಕುತೂಹಲದಿಂದಲೇ ಎಂಜಾಯ್ ಮಾಡುವಂತೆ ಮಾಡುತ್ತದೆ!
ಇಡೀ ಸಿನಿಮಾದಲ್ಲಿ….
“ನಿರಾಳತೆ” ಅಂತ ಸಿಕ್ಕಿದ್ದೇ ಎರಡು ಕಡೆ!
ಮೊದಲನೆಯದು, ಮಧ್ಯಂತರದಲ್ಲಿ🙂
ಎರಡನೆಯದು, ಸಿನಿಮಾ ಮುಗಿದ ಮೇಲೆ! 🙂
ಇದರಲ್ಲೇ ಗೊತ್ತಾಗುತ್ತೆ ಚಿತ್ರಕಥೆ ಹೇಗಿರಬಹುದು ಅಂತ! ಹಾಗಂತ ಸಿನಿಮಾದ ಕಥೆ ಕಾಂಪ್ಲಿಕೇಟೆಡ್ ಆಗಿಲ್ಲ. ಆದರೆ ಅದೇ ಕಾಲಮಾನದಲ್ಲಿ ಮಹದೇಶ್ವರ ಬೆಟ್ಟದ ಅಕ್ಕಪಕ್ಕಗಳಲ್ಲಿ ನಡೆಯುವ ಕೆಲ ಪ್ರಮುಖ ಘಟನೆಗಳನ್ನು ಸೇರಿಸಿಕೊಂಡು ಈ ಕಥೆ ಹೆಣೆದಿರುವುದರಿಂದ ಯಾವುದೇ ಘಟ್ಟದಲ್ಲಿ ನಮಗೆ ಇದೊಂದು ಕಾಲ್ಪನಿಕ ಕಥೆ ಅನಿಸುವುದಿಲ್ಲ. ಈ ವಿಷಯಕ್ಕೆ ಕಥೆಗಾರನಿಗೊಂದು ಶಹಬ್ಬಾಶ್ ಹೇಳಲೇಬೇಕು!
ಮುದ್ದಾಗಿ ಕಾಣುವ “ಪ್ರಿಯಾಂಕ” ತನ್ನ ಅಭಿನಯದಿಂದಲೇ ತಾನ್ಯಾಕೆ “ಮಹಾನಟಿ” ಮೊದಲನೇ ಆವೃತ್ತಿಯ ವಿನ್ನರ್ ಅಂತ ಮತ್ತೊಮ್ಮೆ ಸಾಬೀತುಪಡಿಸುತ್ತಾರೆ. ರಾಣಾ ಪ್ರೀತಿಗಾಗಿ ಏನು ಬೇಕಾದರೂ ಮಾಡಬಲ್ಲ ಹುಡುಗನಾಗಿ ಬಹಳ ಸಹಜವಾಗಿ ನಟಿಸಿದ್ದಾರೆ. ಅವರಿನ್ನು ಮುಂದೆ ಇಂಥದ್ದೇ ಪಾತ್ರಗಳನ್ನು ಆಯ್ದುಕೊಳ್ಳಲಿ. ಉಳಿದಂತೆ ಕಿಶೋರ್, ನಾಗಾಭರಣ, ಸರ್ದಾರ್ ಸತ್ಯ ಸೇರಿದಂತೆ ಅನೇಕ ಪೋಷಕ ನಟರದು ನೆನಪಿನಲ್ಲಿ ಉಳಿಯುವ ಅಭಿನಯ. ನಾಗಾಭರಣ ಅವರ ಭಾಷೆಯ ಸೊಗಡು ಇನ್ನು ಕೊಂಚ ಚಾಮರಾಜನಗರದ್ದೇ ಆಗಿದ್ದರೆ ಚಂದವಿರುತ್ತಿತ್ತು ಅನ್ನಿಸಿತು. “ಕಾಮಿಡಿ ಕಿಲಾಡಿಗಳು” ಖ್ಯಾತಿಯ ಜಗ್ಗಪ್ಪ ಈ ಸಿನಿಮಾದಲ್ಲೊಂದು ಪೊಲೀಸ್ ಪೇದೆಯ ಪಾತ್ರ ಮಾಡಿದ್ದಾರೆ. ನಗರದ ಭಾಷೆಯನ್ನು ಅವರ ಬಾಯಿಂದ ಕೇಳುವುದೇ ಚಂದ! ಅದನ್ನು ಕೇಳುವಾಗ ಎಷ್ಟು ಬೇಗ ಆ ಪ್ರಾಂತ್ಯಕ್ಕೆ ಕನೆಕ್ಟ್ ಆಗುತ್ತೇವೆ ಅನ್ನುವುದು ಆ ಒಂದು ಪಾತ್ರದಿಂದ ನಮಗೆ ಅರ್ಥವಾಗುತ್ತದೆ.
ಕ್ಲೈಮ್ಯಾಕ್ಸಿನಲ್ಲಿ ಇನ್ನೂ ಕೊಂಚ ಸವಾಲು ಇರಬಹುದಿತ್ತು ಅನ್ನಿಸಿದರೂ ಒಟ್ಟಾರೆ ಸಂಪೂರ್ಣ ತೃಪ್ತಿ ಕೊಟ್ಟ ಸಿನಿಮಾ. ಟಿಕೆಟ್ ಕೊಂಡು ಸಿನಿಮಾ ನೋಡುವ ಪ್ರೇಕ್ಷಕನಿಗೆ ಮೋಸವಿಲ್ಲ. ಡಿ ಇಮ್ಮಾನ್ ಹಿನ್ನೆಲೆ ಸಂಗೀತ ಮತ್ತು ಮೂರು ಹಾಡುಗಳು ತುಂಬಾ ಚೆನ್ನಾಗಿವೆ. ಅದರಲ್ಲೂ “ಆನುಮಲೆ ಜೇನುಮಲೆ….” ಹಾಡು ಮತ್ತು ಅದರ ಟ್ಯೂನ್ ಸಿನಿಮಾದ ಅನೇಕ ಕಡೆಗಳಲ್ಲಿ ಬಳಸಿರುವುದರಿಂದ ಅದ್ಭುತ ಫೀಲ್ ಕೊಡುತ್ತದೆ.
ಇಷ್ಟು ದಿನ ಸಿನಿಮಾ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದ ಪುನೀತ್ ರಂಗಸ್ವಾಮಿ ಈ ಸಿನಿಮಾದಲ್ಲಿ ಹಾಡಿನ ಜೊತೆಗೆ ತಾನು ನಿರ್ದೇಶನಕ್ಕೂ ಸೈ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಅವರಲ್ಲಿ ಅಂಥದ್ದೊಂದು ಪ್ರತಿಭೆಯನ್ನು ಕಂಡು ಅದಕ್ಕೆ ಸರಿಯಾದ ವೇದಿಕೆಯನ್ನು ಕಲ್ಪಿಸಿ ಕೊಡುತ್ತಿರುವುದಕ್ಕಾಗಿ ನಿರ್ಮಾಪಕರಾಗಿ ತರುಣ್ ಸುಧೀರ್ ಅವರಿಗೆ ಅಭಿನಂದನೆಗಳು. ಇದನ್ನೇ “ತಾನಷ್ಟೇ ಬೆಳೆಯುವುದಲ್ಲ, ತಾನು ಬೆಳೆಯುತ್ತಾ ಜೊತೆಯವರನ್ನೂ ಕೈಹಿಡಿದುಕೊಳ್ಳುವುದು” ಅನ್ನುವುದು!
“ಗುರುಶಿಷ್ಯರು” ಸಿನಿಮಾದಿಂದ ಜಡೇಶ್, “ಏಳುಮಲೆ” ಮೂಲಕ ಪುನೀತ್ ರಂಗಸ್ವಾಮಿ ಸಿಕ್ಕ ರೀತಿಯಲ್ಲಿಯೇ ಇನ್ನೊಂದಷ್ಟು ಪ್ರತಿಭಾವಂತ ನಿರ್ದೇಶಕರು ಹೊಸ ಹೊಸ ಚಂದದ ಸಿನಿಮಾಗಳ ಮೂಲಕ ಕನ್ನಡ ಸಿನಿರಂಗಕ್ಕೆ, ಪ್ರೇಕ್ಷಕರಿಗೆ ಸಿಗುತ್ತಿರಲಿ! ಇಂತಹ ಸಿನಿಮಾಗಳು ಗೆದ್ದು ಒಳ್ಳೆಯ ಕಲೆಕ್ಷನ್ ಮಾಡಿದರೆ ತರುಣ್’ರಂತಹ ನಿರ್ಮಾಪಕರು ಇನ್ನೊಂದಷ್ಟು ಒಳ್ಳೆಯ ಯುವನಿರ್ದೇಶಕರ ಕೈಯಲ್ಲಿ , ಒಳ್ಳೆಯ ಸಿನಿಮಾಗಳನ್ನು ಮಾಡಿಸಲು ಇಂಬು ಸಿಕ್ಕಂತಾಗುತ್ತದೆ
ಇದು ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ಸುಗ್ಗಿಯಕಾಲ. “ಎಲ್ಲಾ ಚಿತ್ರಮಂದಿರಗಳನ್ನು ಮುಚ್ಚಬೇಕು, ಒಂದಷ್ಟು ದಿನ ಸಿನಿಮಾರಂಗದ ಚಟುವಟಿಕೆಗಳನ್ನು ನಿಲ್ಲಿಸಬೇಕು” ಅನ್ನುವಂತೆ ಯೋಚಿಸುತ್ತಿದ್ದ ಚಂದನವನದಲ್ಲಿ ಈಗ ಮಾದೇವ, ಎಕ್ಕ, ಜೂನಿಯರ್, ಸು ಫ್ರಮ್ ಸೋ ತರಹದ ಚಂದದ ಸಿನಿಮಾಗಳ ಸಾಲಿಗೆ ” ಏಳುಮಲೆ” ಸಿನಿಮಾ ಕೂಡ ಸೇರಿಕೊಳ್ಳುತ್ತಿದೆ! ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಭರವಸೆಯುಳ್ಳ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಸರಣಿ ಮುಂದುವರಿಯುತ್ತಿರಲಿ. ಜೊತೆಗೆ ಯುವಚಿತ್ರಕರ್ಮಿಗಳಿಗೆ ನಂಬಿಕೆ, ಭರವಸೆಯನ್ನು ಇನ್ನಷ್ಟು ಚಿಗುರಿಸುತ್ತಿರಲಿ.
“ಏಳುಮಲೆ” ಸಿನಿಮಾ ಚಿತ್ರಮಂದಿರಗಳಲ್ಲಿದೆ! ಯಾವುದೇ expectations ಇಲ್ಲದೆ ಸುಮ್ಮನೆ ಥಿಯೇಟರಿಗೆ ಹೋಗಿ ಬನ್ನಿ. ವಾಪಸ್ ಬರುವಾಗ ಸಂಪೂರ್ಣ ತೃಪ್ತಿಯಿಂದ ನಗುಮುಖದೊಂದಿಗೆ ವಾಪಸ್ ಬರುತ್ತೀರಿ!
ಉಘೇ ಮಾದಪ್ಪ!