ಗೌರಿ ಲಂಕೇಶ್ ಅವರ ಹತ್ಯೆ ನಡೆದು ಇಂದಿಗೆ ಎಂಟು ವರ್ಷಗಳು. ‘ಗೌರಿಹೂವು’ ಕೃತಿಯಲ್ಲಿರುವ ರಹಮತ್ ತರೀಕೆರೆ ಅವರ ‘ಗೌರೀದುಃಖ’ ಬರಹದ ಆಯ್ದ ಭಾಗ ನಿಮ್ಮ ಓದಿಗೆ.
ಲಂಕೇಶರ ಸಾಹಿತ್ಯ ಮತ್ತು ಪತ್ರಿಕೆಯ ಓದುಗರಾಗಿದ್ದ ನಮಗೆ, ಅವರ ಮಕ್ಕಳ ಬಗ್ಗೆ ಏನೂ ಗೊತ್ತಿರಲಿಲ್ಲ. ಲಂಕೇಶ್ ತೀರಿಕೊಂಡು ಪತ್ರಿಕೆಯ ಸಂಪಾದಕರಾದ ಬಳಿಕವೇ ಗೌರಿಯ ಹೆಸರನ್ನು ಕೇಳಿದ್ದು. ಹೀಗಿರುತ್ತ ಒಂದು ದಿನ ಲಂಕೇಶ್ ಪತ್ರಿಕೆಗೆ ಪುಸ್ತಕ ವಿಮರ್ಶೆ ಬರೆಯಲು ನನಗೊಂದು ಪತ್ರ ಬಂತು. ಅದು ಇಂಗ್ಲೀಶಿನಲ್ಲಿತ್ತು. ಅದರಲ್ಲಿ `ವಿ ಹ್ಯಾವ್ ಚೂಸನ್ ಯು’ ಎಂಬ ವಿಚಿತ್ರ ಸಾಲಿತ್ತು. ನಾನು ಒಪ್ಪಿಕೊಂಡೆ. ಆದರೆ ಪತ್ರಿಕೆಯ ಜತೆ ನನ್ನ ಬರೆಹದ ಸಂಬಂಧ ಶುರುವಾಗುವ ಮುನ್ನವೇ ಭಗ್ನಗೊಂಡಿತು. ಇದಕ್ಕೆ ಕಾರಣ ಬಾನು ಮುಶ್ತಾಕ್ ಪ್ರಕರಣ. ಮಹಿಳೆಯರಿಗೆ ಮಸೀದಿಯಲ್ಲಿ ನಮಾಜು ಮಾಡುವ ಹಕ್ಕನ್ನು ಮಂಡಿಸಿದ್ದಕ್ಕಾಗಿ ಬಾನುಗೆ ಮೂಲಭೂತವಾದಿಗಳು ಬಹಿಷ್ಕಾರದ ಬೆದರಿಕೆ ಹಾಕಿದ್ದರು. ಆಗ ಲಂಕೇಶ್ ಪತ್ರಿಕೆಯ ವರದಿಗಾರರೊಬ್ಬ ಕರೆಮಾಡಿ ನನ್ನ ಪ್ರತಿಕ್ರಿಯೆ ಕೇಳಿದರು. ನಾನು ಕೂಡಲೇ ಪ್ರತಿಕ್ರಿಯಿಸಲು ಹಿಂಜರಿದೆ. ಶಾಬಾನು ಪ್ರಕರಣ ನಡೆದಾಗ ನಾನು ರಂಜಾನ್ ದರ್ಗಾ, ಸಾರಾ ಅಬೂಬಕರ್, ಫಕೀರ್ ಮುಹಮದ್ ಕಟ್ಪಾಡಿ ಮುಂತಾದವರು ಬಾನು ಮನೆಯಲ್ಲಿ ಒಗ್ಗೂಡಿ, ಮುಸ್ಲಿಂ ಪ್ರಗತಿಪರ ಲೇಖಕರ ಸಂಘ ರಚಿಸಿಕೊಂಡು, ಮೂಲಭೂತವಾದಿಗಳ ವಿರುದ್ಧ ಪ್ರತಿಭಟಿಸಿದ್ದೆವು. ಬಾನು ಜತೆ ಪ್ರಕರಣವನ್ನು ಚರ್ಚಿಸದೆ ಪ್ರತಿಕ್ರಿಯಿಸಲಾರೆ ಎಂದೆ. ನನ್ನಿಂದ ಖಂಡನಾ ಹೇಳಿಕೆ ನಿರೀಕ್ಷಿಸುತ್ತಿದ್ದ ಪತ್ರಿಕೆಗೆ ನನ್ನ ಅತಿ ಎಚ್ಚರಿಕೆ ಇಷ್ಟವಾಗಲಿಲ್ಲ. ನನ್ನನ್ನು ಮೂಲಭೂತವಾದಿ ಎಂದು ಖಂಡಿಸುವ ಲೇಖನವು ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಗೆ ನನ್ನ ಪತ್ರಿಕೆಯ ನಂಟು ಚಿಗುರಿನಲ್ಲೇ ಕಡಿದುಹೋಯಿತು.
ಮುಂದೆ ಗೌರಿ ತಮ್ಮನಿಂದ ಬೇರ್ಪಟ್ಟು ತಮ್ಮದೇ ಪತ್ರಿಕೆ ಆರಂಭಿಸಿದರು. ಆ ಹೊತ್ತಿಗೆ ಬಾಬಾಬುಡನಗಿರಿ ಹೋರಾಟ ಶುರುವಾಗಿತ್ತು. ಗೌರಿಯ ಜತೆ ಜಾಥಾಗಳಲ್ಲಿ, ಸತ್ಯಶೋಧಕ ಸಮಿತಿಗಳಲ್ಲಿ, ಭಾಷಣ ಕಾರ್ಯಕ್ರಮಗಳಲ್ಲಿ ಭಾಗವಹಿಸುವ, ಜೈಲಿಗೆ ಹೋಗುವ ಅವಕಾಶ ಒದಗಿದವು. ಅವರ ನೇರಗುಣ, ದುಡುಕು, ಹಠಮಾರಿತನಗಳ ಜತೆಗಿದ್ದ ಸರಳತೆ, ಮಾನವೀಯತೆ, ಸಾಮಾಜಿಕ ಬದ್ಧತೆಗಳ ವ್ಯಕ್ತಿತ್ವದ ಪರಿಚಯವಾಗುತ್ತ ಹೋಯಿತು. ದೇಶದ ರಾಜಕೀಯ ಧಾರ್ಮಿಕ ವಿದ್ಯಮಾನಗಳು ಗೌರಿಯವರ ಆಲೋಚನೆ, ಬರೆಹ, ಆಕ್ಟಿವಿಸಂಗಳನ್ನು ರೂಪಿಸುತ್ತ ಹೋದದ್ದನ್ನು ಗಮನಿಸಿದೆ. ಅವರು ಕರ್ನಾಟಕದ ವಿದ್ಯಮಾನಗಳ ಭಾಗವಾಗಿ ರೂಪಾಂತರಗೊಳ್ಳುತ್ತ ಹೋದರು. ಈ ರೂಪಾಂತರ ಪ್ರಕ್ರಿಯೆ ಚಾರಿತ್ರಿಕವಾಗಿ ವಿಶಿಷ್ಟವಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಆಂಗ್ಲಮಾಧ್ಯಮ ಶಾಲೆಗಳಲ್ಲಿ ಕಲಿತು, ಆಂಗ್ಲ ಪತ್ರಕರ್ತರಾಗಿ ಬಹುಕಾಲ ದೆಹಲಿಯಲ್ಲಿದ್ದ ಅವರಿಗೆ, ಕನ್ನಡ-ಕರ್ನಾಟಕಗಳ ಜತೆ ಆಪ್ತ ಸಂಬಂಧಗಳಿರಲಿಲ್ಲ. ಕನ್ನಡದಲ್ಲಿ ಬರೆಯಲು ಸಹಿತ ಬರುತ್ತಿರಲಿಲ್ಲ. ಅವರು ಸಂಪಾದಕರಾದ ಬಳಿಕ ಲಂಕೇಶರ ಹಳೆಯ ಬರೆಹಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಅಪ್ಪನ ಬರೆಹಗಳನ್ನು ಓದಿರದ ಮಕ್ಕಳು ತಮಗಾಗಿ ಅವನ್ನು ಹಾಕಿಕೊಳ್ಳುತ್ತಿದ್ದಾರೆ ಎಂದು ಲಂಕೇಶರ ಗಂಭೀರ ಓದುಗರು ತಮಾಶೆ ಮಾಡುತ್ತಿದ್ದರು. ಪತ್ರಿಕೆ ಗೌರಿಗೆ ಸ್ಥಳೀಯ ವಿದ್ಯಮಾನಗಳಿಗೆ ಸ್ಪಂದಿಸುವುದನ್ನು, ಕನ್ನಡದಲ್ಲಿ ಆಲೋಚಿಸಿ ಬರೆಯುವುದನ್ನು ಕಲಿಸತೊಡಗಿತು. ಓದುಗರಿಗೆ ಆಲೋಚನೆ ಭಾವನೆಗಳನ್ನು ನೇರವಾಗಿ ಮುಟ್ಟಿಸುವ ಪಾರದರ್ಶಕ ಭಾಷೆಯನ್ನು ಅವರು ರೂಢಿಸಿಕೊಂಡರು. ಅವರ ಬರೆಹಗಳು ಅವರೊಬ್ಬ ರಾಜಕೀಯ ಚಿಂತಕಿಯಾಗಿ ಬೆಳದಿದ್ದರ ಸಂಕೇತವಾಗಿವೆ.
ಗೌರಿ ತಮ್ಮ ಅಪ್ಪನಂತೆ ಒಳ್ಳೆಯ ಭಾಷಣಕಾರ್ತಿ ಆಗಿರಲಿಲ್ಲ. ತುಂಡುತುಂಡಾಗಿ ಪದಗಳನ್ನು ಉಚ್ಚರಿಸುತ್ತ ಐದಾರು ನಿಮಿಷವಷ್ಟೇ ಮಾತಾಡುತ್ತಿದ್ದರು. ಮಲೆಬೆನ್ನೂರಿನ ಕೋಮುಸಂಘರ್ಷದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮವೊಂದು ನೆನಪಾಗುತ್ತಿದೆ. ಅವರು ನೆರೆದ ಸಭಿಕರನ್ನು ತರಾಟೆಗೆ ತೆಗೆದುಕೊಳ್ಳುವಂತೆ ಮಾತು ಶುರುಮಾಡಿದರು. ಸಭೆಯಲ್ಲಿದ್ದ ಕೆಲವರು ಕೆರಳಿ ಗಲಭೆ ಎಬ್ಬಿಸಿದರು. ಭಾಷಣ ಮೊಟಕು ಮಾಡಬೇಕಾಯಿತು. ಲಂಕೇಶ್ ಕೂಡ ಜನರನ್ನು ಟೀಕಿಸುತ್ತಿದ್ದರು. ಆದರೆ ಅವರ ಟೀಕೆಯಲ್ಲಿ ಹಿರಿತನದ ವಿವೇಕ ಹಾಯಿಸಿ ತಿದ್ದುವ ಗುಣವಿತ್ತು. ಭಾರತದಲ್ಲಿ ಕೋಮು ಸಂಘರ್ಷವು ಉತ್ತುಂಗಾವಸ್ಥೆಯಲ್ಲಿದ್ದಾಗ ಲಂಕೇಶ್ ಬರೆದ `ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ ಲೇಖನವನ್ನು ಗಮನಿಸಬೇಕು. ಅಲ್ಲಿ, ಗುಡಿ ಮುಖ್ಯ ಎಂದು ಕೂಗುವವರ ಖಂಡನೆ ಮಾತ್ರಯಿಲ್ಲ; ಸುತ್ತಮುತ್ತ ಇದ್ದು ದೈನಿಕ ಬದುಕಿನಲ್ಲಿ ಹೋರಾಡುತ್ತಿರುವ ಸಂಸಾರಸ್ಥರ ಜೀವ, ಬದುಕು ಹಾಗೂ ಸಂಬಂಧಗಳು ಗುಡಿಗಿಂತ ಮುಖ್ಯ ಎಂದು ತಿಳಿಹೇಳುವ ವಿವೇಕವೂ ಇದೆ. ಈ ವಿವೇಕವು, ಮತೀಯವಾದಿ ರಾಜಕಾರಣದ ಹುನ್ನಾರ ಅರಿಯದೆ ಅದರ ಜತೆ ಕೈಜೋಡಿಸಿದ ಮುಗ್ಧರನ್ನು ಮಾತ್ರವಲ್ಲ, ಆ ರಾಜಕಾರಣವನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದವರನ್ನೂ ಅರೆಕ್ಷಣ ಕಲಕುವಷ್ಟು ಗಾಢವಾಗಿದೆ. ಒಂದೊಮ್ಮೆ ಗೌರಿ ಆಗ ಬರೆದಿದ್ದರೆ `ಇಟ್ಟಿಗೆ ಪವಿತ್ರವೆನ್ನುವ ನೀಚರಿಗೆ ಧಿಕ್ಕಾರ’ ಎಂಬ ಶೀರ್ಷಿಕೆಯಿಟ್ಟು ಬರೆಯುತ್ತಿದ್ದರೊ ಏನೊ? ಜನರನ್ನು ವಿಶ್ವಾಸಕ್ಕೆ ಸೆಳೆದುಕೊಂಡು, ಸಮಜಾಯಿಶಿ ಕೊಟ್ಟು ಮನಪರಿವರ್ತಿಸುವ ಸುಧಾರಕ ಗುಣ ಅವರಲ್ಲಿ ತುಸು ಕಮ್ಮಿಯಿತ್ತು. ಎದುರಾಳಿಗಳನ್ನು ಕದನಕ್ಕೆ ಕರೆಯುವ ಗುಣ ಪ್ರಧಾನವಾಗಿತ್ತು. ಆಧುನಿಕ ಮನೋಭಾವ ಹಾಗೂ ಪಾಶ್ಚಿಮಾತ್ಯ ನಾಗರಿಕ ಪ್ರಜ್ಞೆಯುಳ್ಳ ಅವರಲ್ಲಿ, ಕೆಡುಕೆನಿಸಿದ್ದನ್ನು ನೇರವಾಗಿ ಖಂಡಿಸುವ ನಿಷ್ಠುರತೆಯಿತ್ತು. ಪ್ರತಿರೋಧವು ಯಾವಾಗಲೂ ದಮನಿತ ಪರವಾಗಿರುವ ನಾಗರಿಕ ಹಕ್ಕಿನ ಪರಿಭಾಷೆಯಲ್ಲಿ ಇರುತ್ತಿತ್ತು.
ಸಮಸ್ಯೆಯೆಂದರೆ, ಅವರು ಹಿಂದುತ್ವದ ಟೀಕೆ ಮಾಡುವಾಗ ಹಿಂದು ಧರ್ಮವನ್ನೂ ಬೆರೆಸಿಬಿಡುತ್ತಿದ್ದರು. ಭೈರಪ್ಪನವರ ‘ಆವರಣ’ದಂತಹ ಕೆಟ್ಟ ಕಾದಂಬರಿಯನ್ನು ವಿರೋಧಿಸಿ, ಅದಕ್ಕೆ ಸಲ್ಲದ ಜನಪ್ರಿಯತೆಯನ್ನು ಕೊಡಬಾರದು ಎಂಬುದು ನನ್ನ ಅಭಿಮತವಾಗಿತ್ತು. ಅವರು ಒಪ್ಪದೆ ನಮ್ಮಿಂದೆಲ್ಲ ಲೇಖನ ಬರೆಯಿಸಿ ಪುಸ್ತಕ ಪ್ರಕಟಿಸಿದರು. ಸೈದ್ಧಾಂತಿಕ ಎದುರಾಳಿಯನ್ನು ಮುಖಾಮುಖಿ ಮಾಡುವಾಗ, ಮಾತು-ಕ್ರಿಯೆಗಳನ್ನು ಎದುರಾಳಿಗಳು ಹತ್ಯಾರವಾಗಿಸಿಕೊಳ್ಳದಂತೆ ಎಚ್ಚರದಿಂದ ಬಳಸುವ ತಂತ್ರಗಾರಿಕೆ ಅವರಲ್ಲಿ ಕಡಿಮೆಯಿತ್ತು. ಆದರೆ ಅವರ ದಿಟ್ಟತನ ಹಾಗೂ ತೀಕ್ಷ್ಣತೆಗಳಲ್ಲಿ ಸಮಸಮಾಜದ ಕನಸಿತ್ತು. ಇದಕ್ಕಾಗಿ ಜನಪ್ರಿಯತೆ ಕಳೆದುಕೊಂಡು ಏಕಾಂಗಿಯಾಗಬಲ್ಲ ಹಠವಿತ್ತು. ಇದನ್ನು ಅವರ ಎದುರಾಳಿಗಳಿಗಿರಲಿ, ಕೆಲವು ಸಂಗಾತಿಗಳಿಗೂ ಅರಿಯಲು ಸಾಧ್ಯವಾಗಲಿಲ್ಲ.
ನಾನೊಮ್ಮೆ ಲಂಕೇಶರ ಜನ್ಮದಿನದ ಸಭೆಯಲ್ಲಿ ಭಾಷಣ ಮಾಡುತ್ತ, `ಭಟ್ಟಂಗಿಗಳನ್ನು ಟೀಕಿಸುತ್ತಿದ್ದ ಲಂಕೇಶ್ ಸ್ವತಃ ಹೊಗಳುಗಾರರನ್ನು ಕಟ್ಟಿಕೊಂಡಿದ್ದರು’ ಎಂದು ಟೀಕಿಸಿದೆ; ಮಹಿಳೆಯರ ಬಗ್ಗೆ ಅವರ ನಿಲುವಿನಲ್ಲಿದ್ದ ಸಮಸ್ಯೆಗಳನ್ನು ಚರ್ಚಿಸಿದೆ. ಇದು ಗೌರಿಗೆ ಅಷ್ಟು ಇಷ್ಟವಾಗಲಿಲ್ಲ ಎಂದು ಕಾಣುತ್ತದೆ. ಅವರು ಕೂತಲ್ಲೇ ಚಡಪಡಿಸುತ್ತಿದ್ದರು. ಅವರಿಗೆ ಅಪ್ಪನ ಬಗ್ಗೆ ಅವಿಮರ್ಶಾತ್ಮಕವಾದ ಪ್ರೀತಿಯಿತ್ತು. ಲಂಕೇಶ್ ಕೂರುತ್ತಿದ್ದ ಕುರ್ಚಿಯನ್ನು ಅವರು ತಮ್ಮ ಪಕ್ಕದಲ್ಲಿ ಖಾಲಿಯಾಗಿಯೇ ಇಟ್ಟಿದ್ದರು. ನಾನು `ಇದು ಭರತ ರಾಮನ ಪಾದುಕೆ ಇಟ್ಟುಕೊಂಡು ರಾಜ್ಯಭಾರ ಮಾಡಿದಂತೆ’ ಎಂದು ಕಿಚಾಯಿಸುತ್ತಿದ್ದೆ. ಲಂಕೇಶರ ಬೌದ್ಧಿಕ ಉತ್ತರಾಧಿಕಾರಿಯಾಗಲು ಯತ್ನಿಸುತ್ತಿದ್ದ ಗೌರಿಗೆ, ತನ್ನ ಹಾದಿಯೇ ಬೇರೆಯೆಂದು ಗೊತ್ತಿತ್ತು. ಸಾಹಿತ್ಯ ಸೃಷ್ಟಿಯಲ್ಲಿ ಲಂಕೇಶರಿಗೆ ಗೌರಿಯನ್ನು ಹೋಲಿಸಲು ಸಾಧ್ಯವೇ ಇಲ್ಲ. ಆದರೆ ಚಳುವಳಿ ಹಾಗೂ ಸಾಮಾಜಿಕ ಬದ್ಧತೆಯ ವಿಷಯದಲ್ಲಿ, ಲಂಕೇಶರಿಗಿಂತ ಹೆಚ್ಚು ರಾಜಕೀಯ ಮತ್ತು ಸೈದ್ಧಾಂತಿಕ ಸ್ಪಷ್ಟತೆ ಅವರಿಗಿತ್ತು. ಲಂಕೇಶ್ ಬಿಜೆಪಿಯಲ್ಲಿರುವ `ಸಜ್ಜನ’ರು ಗೆಲ್ಲಬೇಕೆಂದು ಶರಾ ಬರೆಯುತ್ತಿದ್ದರು; ಅಡಿಗರು ಜನಸಂಘದ ಹುರಿಯಾಳಾದಾಗ, ಅನಂತಮೂರ್ತಿ ವಿರೋಧಿಸಿದರೆ ಲಂಕೇಶ್ ಪ್ರಚಾರಕ್ಕೆ ಹೋದರು. ಈ ವಿಷಯದಲ್ಲಿ ಗೌರಿಗೆ ಗೊಂದಲವಿರಲಿಲ್ಲ. ಇದಕ್ಕೆ ಒಂದು ಕಾರಣ- ಅವರನ್ನು ಪ್ರಭಾವಿಸಿದ ಎಡಪಂಥೀಯ ಚಿಂತನೆ ಹಾಗೂ ಭಾರತದ ಬಲಪಂಥೀಯ ರಾಜಕಾರಣವು ಫ್ಯಾಸಿಸಂಗೆ ಕಾಲಿಟ್ಟ ಸಂಕೀರ್ಣ ಕಾಲಘಟ್ಟದಲ್ಲಿ ಅವರು ಆಕ್ಟಿವಿಸ್ಟ್ ಪತ್ರಕರ್ತೆ ಆಗಿದ್ದುದು.
ಜನರ ಧಾರ್ಮಿಕ ಶ್ರದ್ಧೆಗಳು ಅವರ ಸಂಸ್ಕೃತಿ ಹಾಗೂ ಮತೀಯ ರಾಜಕಾರಣದ ಜತೆ ಬೆರೆತುಹೋಗಿರುವ ಜಟಿಲ ಸನ್ನಿವೇಶವುಳ್ಳ ದೇಶದಲ್ಲಿ, ಮತಧರ್ಮವನ್ನು ರಾಜಕಾರಣದಲ್ಲಿ ಹತ್ಯಾರದಂತೆ ಬಳಸುವವರು ಧರ್ಮರಕ್ಷಕರಂತೆ ಬಿಂಬಿಸಿಕೊಳ್ಳುವುದು; ಭಾವನಾತ್ಮಕ ಸಂಗತಿಗಳನ್ನು ಮುಂದಿಟ್ಟು ಸಮುದಾಯಗಳನ್ನು ವಶಪಡಿಸಿಕೊಳ್ಳುವುದು; ಸೈದ್ಧಾಂತಿಕ-ರಾಜಕೀಯ ಎದುರಾಳಿಗಳನ್ನು `ಧರ್ಮವಿರೋಧಿಗಳೆಂದು ದುಷ್ಟೀಕರಿಸುವುದು ಸುಲಭ. ಇದುವೇ ಅವರನ್ನು ಸೈದ್ಧಾಂತಿಕವಾಗಿ ರಾಜಕೀಯವಾಗಿ ಮುಖಾಮುಖಿ ಮಾಡುವ ವೈಚಾರಿಕ ಚಳುವಳಿಗಳ ಎದುರಿನ ಖಡ್ಗದಂಚಿನ ದಾರಿ; ಇದು ಏಕಕಾಲಕ್ಕೆ ಧಾರ್ಮಿಕ ಜನರ ವಿಶ್ವಾಸವನ್ನು ಗಳಿಸುವ ಮತ್ತು ಎದುರಾಳಿಗಳನ್ನು ನಿಶ್ಶಸ್ತ್ರಗೊಳಿಸುವಂತಹ ನುಡಿಗಟ್ಟನ್ನು ಹುಟ್ಟಿಸಿಕೊಳ್ಳಬೇಕಾದ ಸವಾಲು; ಧಾರ್ಮಿಕರಾದ ಜನರನ್ನೂ ಧಾರ್ಮಿಕ ವಿಕಾರಗಳನ್ನೂ ಬೇರೆಮಾಡಿ ನೋಡಬೇಕಾದ ಹುಶಾರುತನ ಕೂಡ. ನಾಸ್ತಿಕ ವೈಚಾರಿಕರಾಗಿದ್ದ ಗೌರಿ, ಧರ್ಮಗಳನ್ನು ನಾಗರಿಕ ಸಮಾಜದ ಅನಿಷ್ಟವೆಂದು ಪರಿಭಾವಿಸಿದಂತಿತ್ತು. ಧರ್ಮಗಳು ಸಾಂಸ್ಥಿಕ ರೂಪಪಡೆದು ಜನರನ್ನು ವಿಭಜಿಸುವ ಉಪಕರಣವಾಗುವುದರ ಬಗ್ಗೆ ಅವರಿಗೆ ವಿರೋಧವಿತ್ತು. ಆದರೆ ಧಾರ್ಮಿಕರಾದ ಜನ ಸೃಷ್ಟಿಮಾಡಿಕೊಂಡಿರುವ ಜೀವಪರ ಸಾಂಸ್ಕೃತಿಕ ಲೋಕಗಳ ಬಗ್ಗೆ ಅಷ್ಟಾಗಿ ತಿಳುವಳಿಕೆ ಇರಲಿಲ್ಲ. `ಬಾಬಾಬುಡನಗಿರಿಯನ್ನು ದಕ್ಷಿಣದ ಅಯೋಧ್ಯೆ ಮಾಡುತ್ತೇವೆ’ ಎನ್ನುತ್ತಿದ್ದ ಸಂಘಪರಿವಾರದ ವಿರುದ್ಧದ ಚಳುವಳಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು; ಸೂಫಿಸಂನ ಭಾಗವಾಗಿದ್ದ ದರವೇಶಿ ಕಥೆಗಳನ್ನು ಅನುವಾದ ಮಾಡಿದರು. ಇವು ಅವರು ಸಾಂಸ್ಥಿಕ ಧರ್ಮದಾಚೆಯಿರುವ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಲೋಕಗಳನ್ನು ಅರಿಯಲು ಮಾಡಿದ ಯತ್ನದಂತೆ ಕಾಣುತ್ತವೆ. ಆದರೆ ಅವರಿಗೆ ಕೋಮುವಾದವನ್ನು ವಿರೋಧಿಸುವ ಆಶಯವೇ ಮುಖ್ಯವಾಗಿತ್ತು. ಲಿಂಗಾಯತ ಸ್ವತಂತ್ರ ಧರ್ಮ ಚಳುವಳಿಗೆ ನೈತಿಕ ಬೆಂಬಲ ಘೋಷಿಸುವಾಗಲೂ, ಅದೊಂದು ಪರ್ಯಾಯವಾಗಬೇಕು ಎಂಬ ಇರಾದೆಗಿಂತ, ಬ್ರಾಹ್ಮಣವಾದ ಯಜಮಾನಿಕೆಯನ್ನು ವಿರೋಧಿಸುವುದು ಅವರ ಉದ್ದೇಶವಾಗಿತ್ತು.
ಮುಂದೆ ಕೋಮುವಾದ ಪ್ರತಿರೋಧಿಸುವ ಅವರ ಬಿರುಸಿಗೆ, ದಮನಿತ ದಲಿತರ ಮಹಿಳೆಯರ ಮುಸ್ಲಿಮರ ಬಡವರ ಹಾಗೂ ಬುಡಕಟ್ಟುಗಳ ಬಗೆಗಿನ ಕಳಕಳಿಗಳು ಜೋಡಣೆಯಾದವು. ಮೋದಿ ಪ್ರಧಾನಮಂತ್ರಿಯಾದ ಬಳಿಕ, ಭಾರತದ ಫ್ಯಾಸಿಸಂ ಎದುರಿಸಲು ಎಡಪಂಥೀಯ ಮತ್ತು ಅಂಬೇಡ್ಕರ್ ಸಿದ್ಧಾಂತಗಳನ್ನು ಒಗ್ಗೂಡಿಸುವ ಪರ್ಯಾಯ ಹುಡುಕಾಟ ಮುಖ್ಯವಾಯಿತು. ವಿರೋಧ ಮತ್ತು ಪ್ರೀತಿಯನ್ನು ಒಟ್ಟಿಗೆ ಸಂಭಾಳಿಸುವ ಹದಕ್ಕೆ ಅವರು ಬರುತ್ತಿದ್ದರು. ಜೀವನಸಂಗಾತಿಯಿಲ್ಲದೆ ಒಂಟಿಯಾಗಿ ಬದುಕುತ್ತಿದ್ದ ಅವರಲ್ಲಿ ಹೋರಾಟದ ಸಂಗಾತಿಗಳನ್ನು ಹುಡುಕಿಕೊಳ್ಳುವ, ಮಕ್ಕಳಿಲ್ಲದ ಅವರಲ್ಲಿ ಸೈದ್ಧಾಂತಿಕ ತಾಯ್ತನ ಅನುಭವಿಸುವ ಪ್ರವೃತ್ತಿ ತೀವ್ರಗೊಳ್ಳುತ್ತಿತ್ತು. ಚಳವಳಿಗಳಲ್ಲಿ ತೊಡಗಿಕೊಂಡಿದ್ದ ತರುಣ-ತರುಣಿಯರಲ್ಲಿ ಅವರು ತಮ್ಮ ಮಕ್ಕಳನ್ನು ಕಾಣತೊಡಗಿದರು; ಅವರಿಗೆ ಬಟ್ಟೆಬರೆ ತೊಡಿಸಿ ಉಣಿಸಿ ಸಂತೋಷ ಪಡುತ್ತಿದ್ದರು. ಅವರಿಂದ ತಮಗೆ ಚೈತನ್ಯ ಆವಾಹಿಸಿಕೊಳ್ಳುತ್ತಿದ್ದರು. ಹೊಸ ಸಮಾಜ ಕಟ್ಟುವ ಕನಸುಳ್ಳ ಸಾವಿರಾರು ತರುಣ ತರುಣಿಯರ ಜತೆ ನಂಟಿನ ವಿಶಾಲಜಾಲ ಕಟ್ಟುತ್ತಿದ್ದರು. ತಾವು ಕೊಡಿಸಿದ ನೀಲಿ ಶರ್ಟನ್ನು ತೊಟ್ಟಿರುವ ಜಿಗ್ನೇಶನ ಹೆಗಲಮೇಲೆ ತಲೆಯಾನಿಸಿ ಅವರು ನಿಂತಿರುವ ಅವರ ಚಿತ್ರಪಟವಿದೆ. ಅದು ಚಳುವಳಿಗಳಿಗೆ ಹೆಣ್ಣಾಗಿ ಕೊಟ್ಟ ಜೈವಿಕ ಮತ್ತು ಮಾನವೀಯ ಸ್ಪರ್ಶದ ಸಂಕೇತದಂತಿದೆ.
ಹಠಸ್ವಭಾವವುಳ್ಳ ಗೌರಿ, ಕೊನೆಯ ವರ್ಷಗಳಲ್ಲಿ ಜನಾಭಿಪ್ರಾಯ ರೂಪಿಸುವ ಕೆಲಸವನ್ನು ತಾಳ್ಮೆಯಿಂದ ಮಾಡುವಷ್ಟು ಮಾಗುತ್ತಿದ್ದರು. ಮತೀಯವಾದದ ನಂಜಿನ ಚುಚ್ಚುಮದ್ದಿಗೆ ಒಳಗಾದವರು ಅವರನ್ನು ನೀಚ ಭಾಷೆಯಲ್ಲಿ ಟ್ರಾಲ್ ಮಾಡುತ್ತಿದ್ದರು. ಅವರನ್ನು ದಾರಿತಪ್ಪಿದ ಮಕ್ಕಳು ಎಂದು ಭಾವಿಸಿ ಅವರ ಜತೆ ಸಾಮಾಜಿಕ ಜಾಲತಾಣಗಳಲ್ಲಿ ನಡುರಾತ್ರಿ ತನಕ ಚರ್ಚೆ ಮಾಡುತ್ತಿದ್ದರು. ಅವರು ಸೈದ್ಧಾಂತಿಕ ರಾಜಕೀಯ ಎದುರಾಳಿಗಳನ್ನು ಕುರುಡಾಗಿ ವಿರೋಧಿಸುತ್ತಿರಲಿಲ್ಲ. ಯಾರೊ ಮೋದಿಯ ಇಂಗ್ಲೀಶನ್ನು ಗೇಲಿ ಮಾಡಿದಾಗ, ಬ್ರಿಟಿಶರಿಂದ ಆಳಿಸಿಕೊಂಡ ದೇಶದಲ್ಲಿ ಇಂಗ್ಲೀಶು ಅಧಿಕಾರದ ಮತ್ತು ತಾರತಮ್ಯದ ಉಪಕರಣವಾಗಿದ್ದು, ಈ ಕಾರಣಕ್ಕೆ ಸೈದ್ಧಾಂತಿಕ ಎದುರಾಳಿಯನ್ನು ನಿಂದಿಸುವುದು ತಪ್ಪೆಂದು ಹೇಳಿದರು; ಭೈರಪ್ಪನವರ `ಆವರಣ’ `ಕವಲು’ಗಳಲ್ಲಿದ್ದ ರೋಗಗ್ರಸ್ತ ದೃಷ್ಟಿಕೋನವನ್ನು ಕಟುವಾಗಿ ವಿರೋಧಿಸಿದ್ದ ಅವರೇ, `ಉತ್ತರಕಾಂಡ’ವನ್ನು ಓದಿ, ಅದು ಯಾಕೆ ಒಳ್ಳೆಯ ಕಾದಂಬರಿ ಎಂದು ಬರೆದರು.
ತನ್ನನ್ನು ದ್ವೇಷಿಸುವ ಮತ್ತು ಪ್ರೀತಿಸುವ ಜನರ ನಡುವೆ ಬದುಕಿದ್ದ ಗೌರಿ, ಒಬ್ಬ ಜೀವಂತಿಕೆ ಮಿಡಿಯುತ್ತಿದ್ದ ಮಹಿಳೆಯಾಗಿದ್ದರು. ತಮಾಶೆ ಇಷ್ಟಪಡುತ್ತಿದ್ದರು. ಅವರು ನನ್ನ ಲೇಖನಗಳ ಜತೆ ನನ್ನ ಹಳೇ ಫೋಟೊ ಬಳಸುತ್ತಿದ್ದರು. ಒಮ್ಮೆ ಅದನ್ನು ಆಕ್ಷೇಪಿಸುತ್ತ `ನಾನು ಆ ಫೋಟೊದಲ್ಲಿ ಇರುವುದಕ್ಕಿಂತ ಚೆನ್ನಾಗಿದ್ದೇನೆ. ಬೇರೆ ಒಳ್ಳೆಯ ಫೊಟೊ ಬಳಸಬೇಕು ಎಂದು ಬರೆದೆ. ಅವರು ಫೊಟೊ ಬದಲಿಸಿದರು. ಆದರೆ ಲೇಖನ ಪ್ರಕಟವಾದಾಗೆಲ್ಲ `ತರೀಕೆರೆ, ನೀನು ಇರುವುದಕ್ಕಿಂತಲೂ ಚೆನ್ನಾಗಿ ಕಾಣುವ ಫೋಟೊ ಹಾಕಿದೀನಪ್ಪ ಎಂದು ಕರೆಮಾಡಿ ಹೇಳುತ್ತಿದ್ದರು. ಒಮ್ಮೆ ಪ್ರತಿವರ್ಷ ಮಾಡುತ್ತಿದ್ದ ಲಂಕೇಶ್ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಲು ನನ್ನನ್ನು ಆಹ್ವಾನಿಸಿದರು. ಅದು ನನಗೆ ಸಿಕ್ಕ ದೊಡ್ಡ ಪ್ರಶಸ್ತಿಯಾಗಿತ್ತು. ಲಂಕೇಶರ ಭಾವಚಿತ್ರಕ್ಕೆ ಹೂಹಾಕುವ ಮೂಲಕ ಉದ್ಘಾಟನೆ ಮಾಡಬೇಕಿತ್ತು. ನಾಟಕೀಯವಾಗಿ ಅಳುಕು ತೋರಿದೆ. ಕಾರಣ, ಕೀನ್ಯಾದ ಚಿಂತಕ ಗೂಗಿಯ `ಡಿಕಲೊನೈಜಿಂಗ್ ದಿ ಮೈಂಡ್’ ಕೃತಿಯ ನನ್ನ ಅನುವಾದವಿಟ್ಟುಕೊಂಡು ಲಂಕೇಶ್ ಒಂದು ಪುಟ ಚಚ್ಚಿಹಾಕಿದ್ದರು. ಅದರ ನೆನಪಿನಲ್ಲಿ ನಾನು `ಲಂಕೇಶ್ ಫೋಟೊದಿಂದ ಹೊರಬಂದು ನನಗೆ ಹೊಡೆಯಲು ಯತ್ನಿಸಿದರೆ ನೀವೇ ರಕ್ಷಿಸಬೇಕು’ ಎಂದು ವಿನಂತಿಸಿದೆ. ಅದಕ್ಕೆ ಗೌರಿ `ಅಪ್ಪನಿಗೆ ಅಂತಹ ಸಣ್ಣಪುಟ್ಟ ವಿಷಯಗಳ ನೆನಪು ಇರೋಲ್ಲ. ಧೈರ್ಯವಾಗಿ ಬಾ ಮಾರಾಯ’ ಎಂದರು. ಕುತ್ತಿಗೆತನಕ ಹೋರಾಟಗಳಲ್ಲಿ ಮುಳುಗಿದ್ದ ಅವರು ನಗುವ ಬಾಯಿ ಕಳಕೊಂಡಿರಲಿಲ್ಲ. ಹಂಪಿ ಕಡೆ ಬಂದಾಗ ಮನೆಗೆ ಕರೆದರೆ, `ಸಾಬರ ಮನೆಗೆ ಬರ್ತಿದೀನಿ. ಸ್ವೀಟ್ ಮಾಡಿಸಬೇಡ. ಬಿರಿಯಾನಿ ಬಿರಿಯಾನಿ!’ ಎಂದು ಎಚ್ಚರಿಸುತ್ತಿದ್ದರು. ಮನುಷ್ಯ ಸಂಬಂಧ ನಿಭಾಯಿಸುವ ಪ್ರಬುದ್ಧತೆ-ಸೂಕ್ಷ್ಮತೆಯನ್ನು ಅವರು ಪಡೆದುಕೊಂಡಿದ್ದರು.
ಕೃಪೆ : ಅಹರ್ನಿಶಿ ಪ್ರಕಾಶನ