Home ಬ್ರೇಕಿಂಗ್ ಸುದ್ದಿ ಹಾಸನ ಗುಣಮಟ್ಟದ ಶಿಕ್ಷಣ ಕೇವಲ ಶಿಕ್ಷಕರ ಹೊಣೆಗಾರಿಕೆ ಅಲ್ಲ – ಡಿಸಿ ಲತಾ ಕುಮಾರಿ

ಗುಣಮಟ್ಟದ ಶಿಕ್ಷಣ ಕೇವಲ ಶಿಕ್ಷಕರ ಹೊಣೆಗಾರಿಕೆ ಅಲ್ಲ – ಡಿಸಿ ಲತಾ ಕುಮಾರಿ

0

ಹಾಸನ : ಸರಕಾರಿ ಶಾಲೆಗಳ ಉಳಿಸುವುದು, ನಮ್ಮ ಮಕ್ಕಳಿಗೆ ಶಿಕ್ಷಣ ಕಲ್ಪಿಸುವುದು, ಗುಣಮಟ್ಟದ ಶಿಕ್ಷಣ ನೀಡುವುದು ಕೇವಲ ಸರ್ಕಾರದ ಮತ್ತು ಶಿಕ್ಷಕರ ಹಾಗು ಸಿಬ್ಬಂದಿಯವರ ಕೆಲಸವಲ್ಲ. ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ತಿಳಿಸಿದರು.

  ನಗರದ ಪೆನ್ಷನ್ ಮೊಹಲ್ಲಾದ ಬಳಿಯಿರುವ ಸರಕಾರಿ ಉರ್ದು, ಇಂಗ್ಲಿಷ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ದಿವಂಗತ ಸೈಯದ್ ಅಬ್ದೂಲ್ ರಶೀದ್ ನಿವೃತ್ತ ಶಿಕ್ಷಕರ ಸ್ಮರಣಾರ್ಥ ವಾರ್ಷಿಕ ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ಬ್ಯಾಂಡ್‌ಸೆಟ್ ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನಮ್ಮ ಜೀವನದಲ್ಲಿಯೂ ಶಿಕ್ಷಣ ಬದಲಾವಣೆ ಮಾಡುತ್ತದೆ, ಹಾಗೆಯೇ ಕೆಲಸದಲ್ಲೂ ಶಿಕ್ಷಣ ಬದಲಾವಣೆ ತರಲಿದೆ. ಶಿಕ್ಷಣದ ಬಗ್ಗೆ ಯಾವ ವಿಷಯ ಬಂದರೂ ಮೊದಲ ಆದ್ಯತೆ ಶಿಕ್ಷಣಕ್ಕೆ ಕೊಡುತ್ತೇವೆ. ಇದೊಂದು ಸಣ್ಣ ಕಾರ್ಯಕ್ರಮವಾದರೂ ಸಹ ಇದರಲ್ಲಿ ದೊಡ್ಡ ಸಂದೇಶ ಇದೆ. ಅಂದರೆ ಸರಕಾರಿ ಶಾಲೆಗಳನ್ನ ಬಲಪಡಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ. ಸರಕಾರಿ ಶಾಲೆ ಎಂದರೆ ನಮ್ಮ ಶಾಲೆ. ಸರಕಾರಿ ಶಾಲೆಗಳ ಉಳಿಸುವುದು, ನಮ್ಮ ಮಕ್ಕಳಿಗೆ ಶಿಕ್ಷಣ ಕಲ್ಪಿಸುವುದು, ಗುಣಮಟ್ಟದ ಶಿಕ್ಷಣ ನೀಡುವುದು ಕೇವಲ ಸರ್ಕಾರ, ಶಿಕ್ಷಕರು ಮತ್ತು ಸಿಬ್ಬಂದಿಯವರ ಕೆಲಸವಲ್ಲ, ಪ್ರತಿಯೊಬ್ಬ ನಾಗರೀಕರ ಕರ್ತವ್ಯ” ಎಂದರು. ಒಟ್ಟಾಗಿ ಒಂದು ಪ್ರಯತ್ನ ಮಾಡಿದಾಗ ಉತ್ತಮ ಫಲಿತಾಂಶ ಬರುತ್ತದೆ. ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೊಡುಗೆ ನೀಡಬೇಕು. ಈಗಾಗಲೇ ಈ ಶಾಲೆಗೆ ಬೇಕಾಗಿರುವ ಸೌಲಭ್ಯಗಳ ಬಗ್ಗೆ ತಿಳಿಸಲಾಗಿದೆ. ಏನೇ ಇರಲಿ ಶಿಕ್ಷಣಕ್ಕೆ ಮೊದಲ ಗಮನ ಹರಿಸಬೇಕು. ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರು ಸರಕಾರಿ ಶಾಲೆಗೆ ಕೊಡುಗೆ ನೀಡಿದರೆ ಇಂತಹ ಶಾಲೆಯನ್ನು ಉಳಿಸಿ ಬೆಳೆಸಬಹುದು. ಶಿಕ್ಷಣದಿಂದಲೇ ಮಕ್ಕಳಲ್ಲಿ ಬದಲಾವಣೆ ತರಬಹುದು ಎಂದು ಸಲಹೆ ನೀಡಿದರು.

 ಅವರು ವಿದ್ಯಾರ್ಥಿಗಳಿಗೆ ಸಂದೇಶ ನೀಡುತ್ತಾ, ಸ್ವಾವಲಂಬನೆಯ ಜೀವನದ ಬಗ್ಗೆ ಹೆಚ್ಚಿನ ಒತ್ತು ಕೊಡಬೇಕು. ಹೆಣ್ಣುಮಕ್ಕಳು ಯಾರ ಮೇಲೂ ಬಾರ ಹೊರಿಸದೆ ಸ್ವತಂತ್ರವಾಗಿ ಬದುಕಲು ಪ್ರೋತ್ಸಾಹಿಸಬೇಕು. ಗಂಡು ಮಕ್ಕಳು ವಯಸ್ಸಿಗೆ ಬಂದಾಗ ಹದಿಹರಿಯದಲ್ಲಿ ಕೆಲವೊಮ್ಮೆ ದಾರಿ ತಪ್ಪುವುದು ಕಾಣಿಸಬಹುದು. ಈಗಿನಿಂದಲೇ ವ್ಯಸನ ಮತ್ತು ಇತರ ದುಶ್ಚಟಗಳಿಂದ ದೂರ ಇರಲು ಅವರಿಗೆ ತಿಳುವಳಿಕೆ ನೀಡಬೇಕೆಂದು ನಾನು ಕೋರುತ್ತೇನೆ ಎಂದು ಹೇಳಿದರು.

  ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಂ. ಬಲರಾಮ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಂಗನಾಥ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಾಂತರಾಜು, ಜನಪ್ರಿಯ ಆಸ್ಪತ್ರೆಯ ಚೇರ್ಮನ್ ಡಾ. ಅಬ್ದೂಲ್ ಬಶೀರ್, ಮಹಾನಗರ ಪಾಲಿಕೆ ಸದಸ್ಯ ರಪೀಕ್ ಅಹಮದ್, ಆಲೆ-ಅಮೀನ್ ಶಿಕ್ಷಣ ಸಂಸ್ಥೆಯ ಸಯ್ಯಾದ್ ತಾಜ್, ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕರಾದ ಆರ್.ಪಿ. ವೆಂಕಟೇಶ್ ಮೂರ್ತಿ, ಪತ್ರಿಕಾ ಛಾಯಾಗ್ರಹಕ ಅತೀಖುರಮಾನ್, ಶಾಲಾ ಶಿಕ್ಷಕರ ಸಂಘದ ಚೈತ್ರ ಮಂಜೇಗೌಡ, ಸಯ್ಯಾದ್ ಉಮರ್ ಫಾರೂಖ್, ಎಸ್.ಎಸ್. ಪಾಷಾ, ಕಸಾಪ ಮಾಜಿ ಗೌರವಾಧ್ಯಕ್ಷ ರವಿನಾ ಕಲಗೂಡು, ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version