Home ಅಪರಾಧ ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಹಿಳೆಗೆ ಲೈಂಗಿಕ ಕಿರುಕುಳ; ಬಿಜೆಪಿ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲು

ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಹಿಳೆಗೆ ಲೈಂಗಿಕ ಕಿರುಕುಳ; ಬಿಜೆಪಿ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲು

0

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಚನ್ನಪಟ್ಟಣ ಮಂಡಲದ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಟಿಎಸ್ ರಾಜು ಮೇಲೆ ಪ್ರಕರಣ ದಾಖಲಾಗಿದೆ.

ಬಿಜೆಪಿ ಅಧ್ಯಕ್ಷ ಟಿಎಸ್ ರಾಜು ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಚನ್ನಪಟ್ಟಣದ ಅಕ್ಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ಮಹಿಳೆ, ಗಣೇಶ ಹಬ್ಬದ ಸಲುವಾಗಿ ತವರು ಮನೆಗೆ ಬಂದಿದ್ದರು. ಸೆ. 7ರಂದು ಗ್ರಾಮದಲ್ಲಿ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಸಲುವಾಗಿ ಮೆರವಣಿಗೆ ನಡೆಯುವಾಗ ಮಹಿಳೆ ರಾತ್ರಿ 11.40ರ ಸುಮಾರಿಗೆ ತಾಯಿಯೊಂದಿಗೆ ಮನೆ ಮುಂದೆ ನಿಂತಿದ್ದರು. ತಾಯಿ ಕಾರ್ಯನಿಮಿತ್ತ ಒಳಕ್ಕೆ ಹೋಗಿದ್ದರು. ಮಹಿಳೆ ಒಬ್ಬರೇ ಇದ್ದಿದ್ದನ್ನು ಗಮನಿಸಿ ಅವರತ್ತ ಬಂದಿದ್ದ ಬಿಜೆಪಿ ನಾಯಕ ತೂಬಿನಕೆರೆ ರಾಜು, ‘ಯಾವಾಗ ಬಂದೆ ಬೇಬಿ’ ಎಂದು ಕೇಳಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಮಹಿಳೆಯ ಹೆಗಲ ಮೇಲೆ ಕೈ ಹಾಕಿ ಎದೆ ಭಾಗವನ್ನು ಮುಟ್ಟುತ್ತಾ, ಕಾಮುಕ ದೃಷ್ಟಿಯಿಂದ ಕೈ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ. ಅಲ್ಲದೆ, ತನ್ನ ಮೊಬೈಲ್ ಫೋನ್‌ನಿಂದ ಮಹಿಳೆಯ ಫೋಟೊ ತೆಗೆದು ತನ್ನ ಸ್ನೇಹಿತರಿಗೆ ಕಳಿಸಿದ್ದ. ಈ ಕುರಿತು ಮಹಿಳೆ ಪ್ರಶ್ನಿಸಿದಾಗ, ‘ನನ್ನ ಮೊಬೈಲ್, ನನ್ನಿಷ್ಟ’ ಎಂದು ರಾಜು ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ.

ಆತನ ವರ್ತನೆಯಿಂದ ದಿಗ್ಧಮೆಗೊಂಡ ಮಹಿಳೆ ತಕ್ಷಣ ಒಳಗಿದ್ದ ತನ್ನ ಅಣ್ಣನಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ಪ್ರಶ್ನಿಸಿದಾಗ, ರಾಜು ತಬ್ಬಿಬ್ಬುಗೊಂಡಿದ್ದಾನೆ. ನಂತರ, ಕುಟುಂಬದವರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ, ಆತನ ಮೊಬೈಲ್ ಕಿತ್ತಕೊಂಡು ಇಟ್ಟುಕೊಂಡಿದ್ದು, ತನಿಖೆ ಸಂದರ್ಭದಲ್ಲಿ ಹಾಜರುಪಡಿಸುವೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ಲೋಕಸಭೆ ಚುನಾವಣೆ ವೇಳೆಯೂ ಇದೇ ಮಹಿಳೆಯೊಂದಿಗೆ ರಾಜು ಅಸಭ್ಯವಾಗಿ ನಡೆದುಕೊಂಡಿದ್ದು, ಕರೆ ಮಾಡಿ ಕೆಟ್ಟದಾಗಿ ಮಾತನಾಡಿದ್ದ ಬಗ್ಗೆಯೂ ಮಹಿಳೆ ತನ್ನ ದೂರಿನಲ್ಲಿ ದಾಖಲಿಸಿದ್ದಾರೆ. ಹೀಗಾಗಿ ಹಲವು ದಿನಗಳಿಂದ ಬಿಜೆಪಿ ನಾಯಕ ತೂಬಿನಕೆರೆ ರಾಜು ಉದ್ದೇಶಪೂರ್ವಕವಾಗಿಯೇ ತನ್ನ ಮೇಲೆ ಲೈಂಗಿಕ ಕಿರುಕುಳ ಎಸಗಲು ಪ್ರಯತ್ನಿಸುತ್ತಿದ್ದು, ತನಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದೂ ಆಗ್ರಹಿಸಿದ್ದಾರೆ.

You cannot copy content of this page

Exit mobile version