Wednesday, June 19, 2024

ಸತ್ಯ | ನ್ಯಾಯ |ಧರ್ಮ

ಶೆಟ್ಟರ ಮೇಲಾಟ ಜೋಶಿಗೆ ಸಂಕಟ?

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಚುನಾವಣಾ ಸೆಣಸಾಟ ಕಾಂಗ್ರೆಸ್ ವಿರುದ್ಧ ಬಿ.ಜೆ.ಪಿ. ಆಗಿರದೇ ಶೆಟ್ಟರ್‌ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗಿದೆ. ಶಾ ಈಗ ಪ್ರಲ್ಹಾದ ಜೋಶಿಯವರಿಗೆ ಹೊಸ ಟಾರ್ಗೆಟ್ ವಿಧಿಸಿದ್ದಾರೆಂದು ಹೇಳಲಾಗುತ್ತಿದ್ದು  “ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಬರುವ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಐದನ್ನಾದರೂ ಬಿ.ಜೆ.ಪಿ. ಗೆಲ್ಲಲೇ ಬೇಕು. ಇಲ್ಲವಾದರೆ ಮುಂದೆ ಕಷ್ಟವಾಗಲಿದೆ” ಎಂದು ಹೇಳಿದ್ದಾರಂತೆ. ಈ ಚುನಾವಣಾ ಕದನ ಬಹಳ ಕುತೂಹಲಕಾರಿಯಾಗಿದೆ ಎನ್ನುತ್ತಾರೆ ಹುಬ್ಬಳ್ಳಿಯ ವೀರೇಶ್ ದೊಡ್ಮನಿ.

 ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ನಿರ್ಗಮಿತ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಘಟನೆ ಮುಂಬರುವ ವರ್ಷಗಳಲ್ಲಿ ರಾಜ್ಯದ ರಾಜಕೀಯ ಅಷ್ಟೇ ಅಲ್ಲ, ರಾಷ್ಟ್ರದ ರಾಜಕೀಯದಲ್ಲಿಯೇ ಸ್ಥಿತ್ಯಂತರ ಉಂಟು ಮಾಡುವ ಸಾಧ್ಯತೆಗಳು ನಿಚ್ಚಳವಾಗುತ್ತಿವೆ. ಈ ಕ್ಷೇತ್ರದ ಚುನಾವಣಾ ಸೆಣಸಾಟ ಕಾಂಗ್ರೆಸ್ ವಿರುದ್ಧ ಬಿ.ಜೆ.ಪಿ. ಆಗಿರದೇ ಶೆಟ್ಟರ್‌ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗಿರುವುದರಿಂದ ರಾಷ್ಟ್ರೀಯ ಮಾಧ್ಯಮಗಳೂ ಹುಬ್ಬಳ್ಳಿಗೆ ಧಾವಿಸುತ್ತಿವೆ.

ಇನ್ನೊಂದೆಡೆ ಬಿ.ಜೆ.ಪಿ. ಹೈಕಮಾಂಡ್‌ಗೆ ಈ ಕ್ಷೇತ್ರ ಬಿ.ಜೆ.ಪಿ.ಗೆ ದಕ್ಕುವುದು ಕಷ್ಟ ಎಂಬ ಗುಪ್ತಚರ ವರದಿಗಳು ತಲುಪಿರುವುದರಿಂದ ಸರಾಸರಿ ಪ್ರತಿದಿನ ಒಬ್ಬರಾದರೂ ಬಿ.ಜೆ.ಪಿ. ರಾಷ್ಟ್ರೀಯ ನಾಯಕರು ಹುಬ್ಬಳ್ಳಿಗೆ ಬಂದಿಳಿದು ರಹಸ್ಯ ಸಭೆ, ಬಹಿರಂಗ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಅಮಿತ್ ಶಾ, ಜೆ.ಪಿ. ನಡ್ಡಾ, ಸ್ಮೃತಿ ಇರಾನಿ ಮತ್ತೆಮತ್ತೆ ಬಂದು ರೂಪಿಸುವ, ಪರಾಮರ್ಶಿಸುವ, ಪರಿಷ್ಕರಿಸುವ ರಣನೀತಿಗಳೆಲ್ಲ ಸಾಕಾಗುತ್ತಿಲ್ಲ ಎಂಬುದು ಬಿ.ಜಿ.ಪಿ. ವಲಯದಲ್ಲಿ ಕೇಳಿಬರುತ್ತಿರುವ ಮಾತು. ಈ ನಾಯಕರೆಲ್ಲ ಹೇಳುತ್ತಿರೋದು ಒಂದೇ ಮಂತ್ರ-ಶೆಟ್ಟರ್ ಪಕ್ಷದ್ರೋಹ ಮಾಡಿದ್ದಾರೆ! ಹೇಗೆ ಅಂತ ಪತ್ರಕರ್ತರು ಕೇಳಿದರೆ ಒಬ್ಬರ ಬಳಿಯೂ ಉತ್ತರವಿಲ್ಲ. “ಅವರಿಗೆ ಟಿಕೆಟ್ ನೀಡದಿರುವ ಕಾರಣ ಅವರು ಕೇಳಿದ್ದಾರೆ, ನೀವ್ಯಾಕೆ ಕಾರಣ ಹೇಳುತ್ತಿಲ್ಲ?” ಅಂತ ಪತ್ರಿಕಾಗೋಷ್ಟಿಯಲ್ಲಿ ಕೇಳಲಾದ ಪ್ರಶ್ನೆಗೆ ಶಾ ಹೇಳಿದ್ದಿಷ್ಟೇ-“ಕಾರಣವನ್ನು ಶೆಟ್ಟರ್‌ಗೆ ತಿಳಿಸಿದ್ದೇವೆ, ಮತದಾರರಿಗೆ ತಿಳಿಸುತ್ತೇವೆ. ಆದರೆ ನಿಮಗೆ (ಮಾಧ್ಯಮದವರಿಗೆ) ಹೇಳಲ್ಲ” ಎಂಬ ಉದ್ಧಟತನದ ಉತ್ತರ ಹೇಳಿ ಪಲಾಯಗೈದಿದ್ದಾರೆ.

ಈ ಶಾ ಈಗ ಪ್ರಲ್ಹಾದ ಜೋಶಿಯವರಿಗೆ ಹೊಸ ಟಾರ್ಗೆಟ್ ವಿಧಿಸಿದ್ದಾರೆ ಎಂಬ ಸುದ್ದಿ ಜೋಶಿ ಅವರ ಆಪ್ತವಲಯದಿಂದಲೇ ಬಹಿರಂಗಗೊಂಡಿದೆ. “ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಬರುವ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಐದನ್ನಾದರೂ ಬಿ.ಜೆ.ಪಿ. ಗೆಲ್ಲಲೇ ಬೇಕು. ಇಲ್ಲವಾದರೆ ಮುಂದೆ ಕಷ್ಟವಾಗಲಿದೆ” ಎಂದು ಹೇಳಿದ್ದಾರಂತೆ. ಈ ‘ಕಷ್ಟ’ ಎಂದರೆ ಏನು ಎಂಬುದೇ ಈಗ ಬಿ.ಜೆ.ಪಿ.ಯಲ್ಲಿ ನಡೆಯುತ್ತಿರುವ ಚರ್ಚೆ. ಜೋಶಿ ಅವರ ಕೇಂದ್ರ ಸಚಿವ ಸ್ಥಾನ ಹೋಗುತ್ತದೆಯೇ ಅಥವಾ ಸಂಸದೀಯ ವ್ಯವಹಾರ/ಕಲ್ಲಿದ್ದಲಿನಂಥ ಪ್ರಮುಖ ಖಾತೆ ಮಾತ್ರ ಕೈ ತಪ್ಪಲಿದೆಯೇ? ಕಾಲವೇ ಹೇಳಬೇಕು.

ಶಾ ಬಂದು ಹೋದಾಗಿನಿಂದ ಜೋಶಿಯವರು ಈಗ ದಿನನಿತ್ಯ ‘ಬುದ್ಧಿಜೀವಿಗಳ ಸಭೆ’ಯನ್ನು ಖಾಸಗಿ ಹೋಟೆಲ್‌ನಲ್ಲಿ ಕರೆಯುತ್ತಿದ್ದಾರೆ. ನಾನಾ ಜಾತಿ-ಸಮುದಾಯಗಳ, ವಿವಿಧ ಬಡಾವಣೆಗಳ ಮುಖಂಡರ ಸಭೆ ಕರೆಯೋದು, ಮೋದಿ ಅವರ ಕೈ ಬಲ ಪಡಿಸಿ ಅಂತ ವೋಟ್ ಕೇಳುವಲ್ಲಿ ಮಗ್ನರಾಗಿದ್ದಾರೆ. ಅಷ್ಟೇ ಅಲ್ಲ, ಜೋಶಿ ಅವರ ಪತ್ನಿ ಜ್ಯೋತಿ ಅವರು ಸ್ವತಃ ತಮ್ಮ ಪತಿಯ ಚುನಾವಣೆಗೂ ಇಷ್ಟು ಕಷ್ಟಪಟ್ಟಿರಲಿಲ್ಲ. ಹೆಸರಿಗೆ ಒಂದೆರಡು ದಿನ ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಪೂರ್ವ ಮತ್ತು ಧಾರವಾಡ ಕ್ಷೇತ್ರಗಳಲ್ಲಿ ಮತ ಯಾಚಿಸಿದ ಕೇಂದ್ರ ಸಚಿವರ ಪತ್ನಿ, ಸೆಂಟ್ರಲ್‌ನಲ್ಲೇ ಹೆಚ್ಚು ಮತಯಾಚನೆ ಮಾಡುತ್ತಿರುವುದು ನೋಡಿ, ಬಿ.ಜೆ.ಪಿ. ಮಹಿಳಾ ಮೋರ್ಚಾದ ಸದಸ್ಯರು ಆಶ್ಚರ್ಯಗೊಂಡಿದ್ದಾರೆ.

ಜೋಶಿ ಅವರು ಸಾರ್ವಜನಿಕವಾಗಿ ಮತ ಕೇಳಲು ಹೋದಾಗ, ಶೆಟ್ಟರನ್ನು ಬಿಟ್ಟು ಹೋದದ್ದೇ ಇಲ್ಲ. ಈಗ ಟೆಂಗಿನಕಾಯಿಯಂಥ ‘ಹೊಸಬ’ ಮತ್ತು ‘ಯುವ ಕಾರ್ಯಕರ್ತನಿಗಾಗಿ’ ಕೇಂದ್ರ ಸಚಿವರಾಗಿ ಮತ ಕೇಳುತ್ತಿರುವುದು ಸ್ವತಃ ಜೋಶಿಯವರಿಗೂ, ಅವರ ಆಪ್ತರಿಗೂ ಮುಜುಗರ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ‘ಬುದ್ಧಿಜೀವಿಗಳ ಸಭೆಗಳ’ ವಾಟ್ಸ್ಯಾಪ್ ಮೆಸ್ಸೇಜ್‌ಗಳು ಬ್ಯಾಂಕ್, ರೈಲ್ವೆ, ಎಲ್.ಐ.ಸಿ., ಬಿ.ಎಸ್.ಎನ್.ಎಲ್., ಅಂಚೆ ಇಲಾಖೆಯ ಉದ್ಯೋಗಿಗಳಿಗೆ ಬರುತ್ತಿವೆ. ಇನ್ನೊಂದೆಡೆ 165 ಬಿ.ಜೆ.ಪಿ. ಮೈನಾರಿಟಿ ಮೋರ್ಚಾದ ಪದಾಧಿಕಾರಿಗಳನ್ನು ಕರೆಸಿ, “ಶೆಟ್ಟರ ಪರವಾಗಿ ನೀವು ಯಾರಾದರೂ ಕೆಲಸ ಮಾಡಿದ್ದು ಕಂಡುಬಂದರ ರೌಡಿಶೀಟ್ ಓಪನ್/ರಿ-ಓಪನ್ ಮಾಡಿಸ್ತೀನಿ” ಎಂಬ ಎಚ್ಚರಿಕೆಯೂ ಜಾರಿಯಾಗಿದೆ.‌

ನವಲಗುಂದ ಕೂಡ 2018 ರಿಂದ  ಒಮ್ಮೆ ಎನ್.ಎಚ್.ಕೋನರಡ್ಡಿ (ಆಗ ಜೆ.ಡಿ.ಎಸ್., ಈಗ ಕಾಂಗ್ರೆಸ್) ಮತ್ತೊಮ್ಮೆ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ಆಯ್ಕೆ ಮಾಡುತ್ತ ಬಂದಿದೆ. ಈ ಬಾರಿ ಕೋನರಡ್ಡಿ ತಮ್ಮ ಜೆ.ಡಿ.ಎಸ್. ಮತಗಳು ಮತ್ತು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡಿರುವುದು ಮುನೇನಕೊಪ್ಪರಿಗೆ ತಲೆ ನೋವಾಗಿದೆ.

ಐದು ಕ್ಷೇತ್ರಗಳನ್ನು ಗೆಲ್ಲುವುದರ ಜೊತೆಗೆ ಜೋಶಿ ಅವರು ತಾವು ‘ಲಿಂಗಾಯತ ವಿರೋಧಿ ಅಲ್ಲ’ ಎಂದು ಸಾಬೀತುಪಡಿಸಬೇಕಾಗಿರುವ ಸವಾಲು ಕೂಡ ಇದೆ. ಅಂತೆಯೇ “ನಾವು ಲಿಂಗಾಯತರ ಬದಲು ಲಿಂಗಾಯತರಿಗೇ ಟಿಕೆಟ್ ನೀಡಿದ್ದೇವೆ” ಎಂಬ ಹೇಳಿಕೆಯನ್ನು ಶಾ ಅವರಿಂದ ಕೊಡಿಸಿದ್ದಾರೆ. ಆದರೆ “ಟೆಂಗಿನಕಾಯಿ ಲಿಂಗಾಯತರಾದರೂ  ಸಂತೋಷ-ಜೋಶಿಯವರು ಸೃಷ್ಟಿಸಿರುವ ಅಭ್ಯರ್ಥಿ. ಈ ಬಾರಿ ಶೆಟ್ಟರ್ ಸೋತರೆ ಬಿ.ಜೆ.ಪಿ. ಲಿಂಗಾಯತರನ್ನು ‘ಗ್ರಾಂಟೆಡ್’ ಆಗಿ ತೆಗೆದುಕೊಳ್ಳಲಿದೆ. ಹಾಗಾಗಿ ಇದೊಮ್ಮೆಯಾದರೂ ನಾವು ನಮ್ಮ ಮುನಿಸು ತೋರದಿದ್ದರೆ ಮುಂದೆ ಜೋಶಿ-ಸಂತೋಷರ ಕಾಲಾಳಾಗಿಯೇ ಇರಬೇಕಾಗುತ್ತದೆ” ಎಂಬ ಎಚ್ಚರಿಕೆ ಕೆಲವು ಲಿಂಗಾಯತ-ಬಸವ ಸಂಘಟನೆಗಳಿಂದ ಜಾರಿಯಾಗಿದೆ.

ಶೆಟ್ಟರು ತಮ್ಮ ಕ್ಷೇತ್ರದ ಜೊತೆಗೆ ಕೊಪ್ಪಳ, ರೋಣ ಮತ್ತಿತರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿರುವುದರಿಂದ ಶಾ-ಮೋದಿ ಉತ್ತರ ಕರ್ನಾಟಕದ ಗಲ್ಲಿಗಲ್ಲಿಗೂ ಧಾವಿಸಬೇಕಾಗಿದೆ.

ವೀರೇಶ್ ದೊಡ್ಮನಿ, ಹುಬ್ಬಳ್ಳಿ

ರಾಜಕೀಯಾಸಕ್ತರು

ಇದನ್ನು ಓದಿದ್ದೀರಾhttps://peepalmedia.com/whose-wave-is-there-in-karnataka/ http://ಕರ್ನಾಟಕದಲ್ಲಿ ಯಾರ ಪರ ಅಲೆ ಇದೆ?

Related Articles

ಇತ್ತೀಚಿನ ಸುದ್ದಿಗಳು