ಶಿವಮೊಗ್ಗ: ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಶಂಕಿತ ಆರೋಪಿಯ ಮೇಲೆ ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿರುವ ಘಟನೆ, ಶನಿವಾರ ನಗರದ ಹೊರವಲಯದ ಪುರ್ಲೆ ರಸ್ತೆಯಲ್ಲಿನ ವಸತಿ ಬಡಾವಣೆಯಲ್ಲಿ ನಡೆದಿದೆ.
ಕಳೆದ ವಾರ ನಗರದಲ್ಲಿ ಅಶೋಕ್ ಪ್ರಭು ಎಂಬ 45 ವರ್ಷದ ವ್ಯಕ್ತಿಯ ಮೇಲೆ ಹಲ್ಲೆನಡೆದಿದ್ದು, 4 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸಾಗರ ಮೂಲದ ಆಸಿಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ನಂತರ ಪ್ರಕರಣದ ಎರಡನೇ ಶಂಕಿತ ಅಸ್ಲಂಗಾಗಿ ಹುಡುಕಾಟ ನಡೆಸಿದ್ದರು.
ನಗರದ ಹೊರವಲಯದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿದ ವಸತಿ ಬಡಾವಣೆಯಲ್ಲಿ ಶಂಕಿತ ಆರೋಪಿ ಅಸ್ಲಂ ಅಡಗಿಕೊಂಡಿರುವ ಮಾಹಿತಿ ದೊರಕಿದ್ದು, ಸುಳಿವಿನ ಮೇರೆಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಶಾಂತ್ ಹಾಗು ಅವರ ಪೊಲೀಸ್ ತಂಡ ಬಡಾವಣೆಗೆ ದಾವಿಸಿದೆ. ನಂತರ ಎರೆಡು ಕಡೆಯಿಂದ ಮಾತಿನ ಚಕಮಕಿ ನಡೆದಿದ್ದು, ಅಸ್ಲಾಂ ಪೊಲೀಸ್ ಪೆದೆಯೊಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸಬ್ ಇನ್ಸ್ ಪೆಕ್ಟರ್ ಅಸ್ಲಂ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.
ನಂತರ ಘಟನೆಯಲ್ಲಿ ಗಾಯಗೊಂಡಿದ್ದ ಪೊಲೀಸ್ ಪೆದೆ ಮತ್ತು ಶಂಕಿತ ಆರೋಪಿ ಅಸ್ಲಂನನ್ನು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.