ಭಾರತೀಯ ಕ್ರಿಕೆಟ್ ತಂಡದ ರನ್ ಮೆಶೀನ್ ವಿರಾಟ್ ಕೊಹ್ಲಿ ಇಂದು ೩೪ ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹೊತ್ತು ಹಿರಿಯ ಪತ್ರಕರ್ತರಾದ ದಿನೇಶ್ ಕುಮಾರ್ ಎಸ್ ಸಿ ಅವರ, ಕೊಹ್ಲಿಯ ʼವಿರಾಟʼ ಸಾಧನೆಯ ಝಲಕ್ ನೊಂದಿಗೆ ಪೀಪಲ್ ಮೀಡಿಯಾ ಕನ್ನಡ ವೆಬ್ ಬಳಗವು ಕ್ರಿಕೆಟ್ ಕಿಂಗ್ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸುತ್ತದೆ.
ಆತನ ಆ ಇನ್ನಿಂಗ್ಸ್ ದೇವರ ಹಾಡಿನಂತಿತ್ತು ಎಂದು ಬಿಟ್ಟರು ಗ್ರೆಗ್ ಚಾಪಲ್?! ದೇವರ ಹಾಡು ಎಂದರೆ ಮತ್ತೇನೂ ಅಲ್ಲ, ಅದು ಮನುಷ್ಯನ ಸಾಧ್ಯತೆಗಳನ್ನು ಮೀರಿದ್ದು ಎಂದರ್ಥ. ಚಾಪೆಲ್ ಹೇಳಿದ್ದು ಅದನ್ನೇ.
19ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ವಿರಾಟ್ ಕೊಹ್ಲಿ ಸಿಕ್ಸರ್‌ಗಳನ್ನು ಸಿಡಿಸಿದರು. ಟಿ20 ಕ್ರಿಕೆಟ್‌ನಲ್ಲಿ ಸಿಕ್ಸರುಗಳಿಗೇನು ಕೊರತೆಯೇ? ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆದು ತಂಡವನ್ನು ಗೆಲ್ಲಿಸಿದ ಹೊಡಿಬಡಿ ಆಟಗಾರರಿದ್ದಾರೆ. ಒಂದೇ ಓವರ್‌ನ ಎಲ್ಲ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ಆಟಗಾರರಿದ್ದಾರೆ. ಕೊಹ್ಲಿ ಹೊಡೆದ ಸಿಕ್ಸರ್‌ಗಳು, ಅದರಲ್ಲೂ 19ನೇ ಓವರ್‌ನ ಐದನೇ ಎಸೆತದಲ್ಲಿ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಎಸೆತದಲ್ಲಿ ಲಾಂಗ್ ಆನ್‌ನಲ್ಲಿ ಹೊಡೆದ ಸಿಕ್ಸರ್ ಯಾಕಷ್ಟು ವಿಶೇಷ?
ನಿಜ, ಅದು ಹಲವರು ಹೇಳುವಂತೆ ಡಿವೈನ್ ಶಾಟ್. ಹ್ಯಾರಿಸ್ ರೌಫ್ ಎಸೆದ ಕೊಂಚ ಮಂದಗತಿಯ ಶಾರ್ಟ್ ಆಫ್ ಲೆಂಥ್ ಚೆಂಡನ್ನು ಬ್ಯಾಕ್ ಫುಟ್‌ನಲ್ಲಿ ಕನೆಕ್ಟ್ ಮಾಡಿ ಸ್ಟ್ರೈಟ್ ಬ್ಯಾಟ್‌ನಲ್ಲಿ ಸಿಕ್ಸ್ ಹೊಡೆದ ರೀತಿಯಿದೆಯಲ್ಲ ಅದು ಕೊಹ್ಲಿ ಬಿಟ್ಟರೆ ಮತ್ತೆ ಯಾರಿಗೂ ಸಾಧ್ಯವಿರಲಿಲ್ಲ. ಟೈಮಿಂಗ್‌ನಲ್ಲಿ ಒಂದು ಮೈಕ್ರೋ ಸೆಕೆಂಡ್ ಹೆಚ್ಚು ಕಡಿಮೆಯಾಗಿದ್ದರೂ ಅದು ಸಿಕ್ಸರ್ ಆಗುತ್ತಿರಲಿಲ್ಲ. ಬೇರೆಯವರ ವಿಷಯ ಹಾಗಿರಲಿ, ಆಸ್ಟ್ರೇಲಿಯಾದ ಲೆಜೆಂಡರಿ ಆಟಗಾರ ಮಾರ್ಕ್ ಟೈಲರ್ ಹೇಳಿದ: ʻʻನನಗೆ ಇನ್ನೂ ಆ ಹೊಡೆತ ಹೇಗೆ ಸಾಧ್ಯವಾಯಿತೆಂದೇ ಅರ್ಥವಾಗುತ್ತಿಲ್ಲ. ನಾನೇನಾದರೂ ಆ ಶಾಟ್ ಪ್ರಯತ್ನಿಸಿದ್ದರೆ ಬಹುಶಃ ಲಾಂಗ್ ಆನ್ ನಲ್ಲಿ ಕ್ಯಾಚ್ ಕೊಟ್ಟು ಔಟಾಗುತ್ತಿದ್ದೆ!ʼʼ. ಮಧುರ್ ಪಾತ್ರೇಯ ಎಂಬ ಕ್ರಿಕೆಟ್ ವಿಶ್ಲೇಷಕ, ಟಿ20 ಕ್ರಿಕೆಟ್ ಆರಂಭವಾದಾಗಿನಿಂದ ನಾವು ನೋಡಿರಬಹುದಾದ ಅತ್ಯುತ್ತಮ ಸಿಕ್ಸರ್ ಎಂದರು. ಮಾತ್ರವಲ್ಲ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುನ್ನತ ಇನ್ನೋವೇಟಿವ್ ಶಾಟ್ ಎಂದರು.

ಅಕ್ಟೋಬರ್ 23 ವಿರಾಟ್ ಕೊಹ್ಲಿಯ ದಿನವಾಗಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಚೇಸಿಂಗ್‌ಗೆ ಇಳಿದಿತ್ತು. ಮೊದಲ ನಾಲ್ಕು ವಿಕೆಟ್‌ಗಳು ತೊಪತೊಪನೆ ಉದುರಿದ್ದವು. ಕೊಹ್ಲಿ ನಿಧಾನಕ್ಕೆ ಹಾರ್ದಿಕ್ ಪಾಂಡ್ಯ ಜೊತೆ ಇನ್ನಿಂಗ್ಸ್ ಕಟ್ಟುತ್ತ ನಡೆದಿದ್ದ. ಪಾಂಡ್ಯ ತನ್ನ ಎಂದಿನ ಹೊಡಿಬಡಿ ಆಟ ಆಡಲು ಸಾಧ್ಯವಿರಲಿಲ್ಲ. ಪಾಕಿಸ್ತಾನದ ಬೌಲಿಂಗ್ ಪಡೆ ಸದ್ಯಕ್ಕೆ ಜಗತ್ತಿನ ಅತಿಶ್ರೇಷ್ಠ ಬೌಲಿಂಗ್ ಪಡೆ. ಪಾಕಿಸ್ತಾನದ ಮೂರು-ನಾಲ್ಕು ಬೌಲರ್‌ಗಳು ನೂರೈವತ್ತು ಕಿ.ಮೀ ವೇಗದಲ್ಲಿ ಬೌಲ್ ಮಾಡುತ್ತಾರೆ. ರಿಸ್ಕ್ ತೆಗೆದುಕೊಂಡು ಬೌಂಡರಿ, ಸಿಕ್ಸರ್ ಹೊಡೆಯಲು ಹೋದರೆ ಔಟಾಗುವ ಭೀತಿ. ಔಟಾದರೆ ಕೆಳಹಂತದ ಆಟಗಾರರು ಪಾಕಿಸ್ತಾನದ ಬೌಲರ್‌ಗಳಿಗೆ ಸುಲಭದ ತುತ್ತಾಗಿ ಹೋಗುತ್ತಾರೆ. ಹೀಗಾಗಿ ಕೊಹ್ಲಿ, ಪಾಂಡ್ಯ ಬೇಕಾಗಿದ್ದ ರನ್‌ರೇಟ್‌ಗೆ ಹೋಲಿಸಿದರೆ ನಿಧಾನವಾಗಿ ಆಡುತ್ತಿದ್ದರು. ಕೊನೆಕೊನೆಗೆ ಪಂದ್ಯ ಸಂಪೂರ್ಣ ಭಾರತದ ಕೈ ತಪ್ಪಿ ಹೋಯಿತೆಂದೇ ಎಲ್ಲರೂ ಭಾವಿಸಿದರು. ಆದರೆ ಕೊಹ್ಲಿ, ಹ್ಯಾರಿಸ್ ರೌಫ್ ಎಸೆದ 19ನೇ ಓವರ್‌ನ ಕೊನೆಯ ಎರಡು ಚೆಂಡುಗಳಿಗೆ ಹೊಡೆದ ಸಿಕ್ಸರ್‌ಗಳು ಭಾರತವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದವು.
ಪಾಕಿಸ್ತಾನದ ಅಂದಿನ ಬೆಸ್ಟ್ ಬೌಲರ್ ಹ್ಯಾರಿಸ್ ರೌಫ್ ಮೊದಲ ನಾಲ್ಕು ಎಸೆತಗಳಲ್ಲಿ ಕೊಹ್ಲಿ-ಪಾಂಡ್ಯ ಜೋಡಿಯನ್ನು ರನ್ ಗಳಿಸದಂತೆ ಕಟ್ಟಿ ಹಾಕಿದ್ದರು. ಮೊದಲ ನಾಲ್ಕು ಎಸೆತಗಳಲ್ಲಿ ಮೂರೇ ರನ್‌ಗಳು. ಇನ್ನೇನು ಪಂದ್ಯ ಮುಗಿದೇಹೋಯಿತು, ಪಾಕಿಸ್ತಾನ ಗೆದ್ದೇ ಬಿಟ್ಟಿತು ಎಂಬಂಥ ಸ್ಥಿತಿ. ಆಗ ಐದನೇ ಎಸೆತದಲ್ಲಿ ಕೊಹ್ಲಿ ಬೌಲರ್ ತಲೆಯ ಮೇಲೆ ಹೊಡೆದ ಚೆಂಡು ಬೌಂಡರಿ ಲೈನ್ ದಾಟಿ 90 ಮೀಟರ್ ದೂರ ಹೋಗಿ ಬಿದ್ದಿತು. ಅದೇ ಹೊಡೆತವನ್ನು ಇಡೀ ಕ್ರಿಕೆಟ್ ರಂಗ ಕೊಂಡಾಡುತ್ತಿದೆ. ಇದು ಶಾಟ್ ಆಫ್ ದಿ ಸೆಂಚುರಿ ಎಂದು ಬಣ್ಣಿಸಿದವರು ಹಲವರು.
ವಿರಾಟ್ ಕೊಹ್ಲಿ ಆಟವೇ ಹೀಗೆ. ಟೆಸ್ಟ್, ಏಕದಿನ, ಟಿ20 ಈ ಎಲ್ಲ ಮೂರು ಮಾದರಿಯ ಆಟದಲ್ಲಿ ಕೊಹ್ಲಿಯನ್ನು ಮೀರಿಸುವವರಿಲ್ಲ. ಟಿ20 ಕ್ರಿಕೆಟ್ ಎಂಬುದು ಹೊಡಿಬಡಿ ಮಾದರಿಯ ಆಟ. ಪಕ್ಕಾ ಕ್ರಿಕೆಟಿಂಗ್ ಶಾಟ್‌ಗಳೇ ಇಲ್ಲಿ ಇರಬೇಕೆಂದಿಲ್ಲ. ಎಲ್ಲೋ ಹೊಡೆಯಲು ಪ್ರಯತ್ನಿಸಿದ ಚೆಂಡು ಎಡ್ಜ್ ಆಗಿ ಎಲ್ಲಿಗೋ ಬಿದ್ದರೂ ಪರವಾಗಿಲ್ಲ, ಒಟ್ಟಿನಲ್ಲಿ ರನ್ ಬಂದು ಸುರಿಯಬೇಕು ಅಷ್ಟೆ. ಹೀಗಾಗಿ ಟಿ20 ಪಂದ್ಯಗಳಿಗೆಂದೇ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳು ಹುಟ್ಟಿಕೊಂಡರು. ವಿಕೆಟ್‌ನ ಹಿಂದೆ ಫೈನ್‌ಲೆಗ್, ಥರ್ಡ್ ಮ್ಯಾನ್ ಮತ್ತು ಸ್ಕ್ವೇರ್ ಆಫ್ ದಿ ವಿಕೆಟ್ ನಲ್ಲೇ ಹೆಚ್ಚು ರನ್ ಗಳು ಬರಲಾರಂಭಿಸಿದವು. 360 ಡಿಗ್ರಿಯಲ್ಲೂ ರನ್ ಗಳಿಸುವ ಆಟಗಾರರಿಗೆ ಬೇಡಿಕೆ ಹುಟ್ಟಿಕೊಂಡಿತು. ಆದರೆ ಕೊಹ್ಲಿ ತನ್ನ ತಂತ್ರವನ್ನೇನು ಬದಲಾಯಿಸಿಕೊಳ್ಳಲಿಲ್ಲ. ಆಟದ ವಿಧಾನವೂ ಬದಲಾಗಲಿಲ್ಲ. ಪಕ್ಕಾ ಕ್ರಿಕೆಟಿಂಗ್ ಶಾಟ್‌ಗಳಿಂದಲೇ ಆಡಿದ, ಟಿ20 ಕ್ರಿಕೆಟ್‌ಗೆ ಬೇಕಾದ ವೇಗದಲ್ಲೇ ರನ್ ಗಳಿಸುತ್ತ ಹೋದ.
ಪಾಕಿಸ್ತಾನ ವಿರುದ್ಧದ ವಿರಾಟ್ ಕೊಹ್ಲಿ ಇನ್ನಿಂಗ್ಸ್ ನಿಸ್ಸಂಶಯವಾಗಿ ಅವರ ಜೀವಮಾನದ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದು. ಆ ಒಂದು ಸಿಕ್ಸರ್ ಕೊಹ್ಲಿಯ ಕ್ರಿಕೆಟನ್ನು ಸಮರ್ಥವಾಗಿ ವರ್ಣಿಸುತ್ತದೆ. ಬ್ಯಾಟು ಮತ್ತು ಬಾಲು ಸೇರುವ ಘಳಿಗೆ ಇದೆಯಲ್ಲ, ಅದನ್ನು ಕ್ರಿಕೆಟ್‌ನಲ್ಲಿ ಟೈಮಿಂಗ್ ಎನ್ನುತ್ತಾರೆ. ಕೊಹ್ಲಿಯ ಟೈಮಿಂಗ್ ಅನ್ನು ಆ ದೇವರೇ ನಿರ್ಧರಿಸಿದಂತಿರುತ್ತದೆ. ಹೀಗಾಗಿ ಒಂದು ಮೈಕ್ರೋ ಸೆಕೆಂಡು ಕೂಡ ಹೆಚ್ಚು ಕಡಿಮೆಯಾಗೋದಿಲ್ಲ.
ಭಾರತ ಕ್ರಿಕೆಟ್ ಪ್ರಿಯರ ದೇಶ. ಇಲ್ಲಿ ಸುನೀಲ್ ಗವಾಸ್ಕರ್, ಕಪಿಲ್ ದೇವ್, ಮಹಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸೇರಿದಂತೆ ಲೆಜೆಂಡರಿ ಆಟಗಾರರನೇಕರು ಬಂದು ಹೋಗಿದ್ದಾರೆ. ಈ ಸಾಲಿನಲ್ಲಿ ಕೊಹ್ಲಿ ಕೂಡ ಒಬ್ಬರು. ಆತನಿಗೆ ಅಭಿಮಾನಿಗಳು ಕಿಂಗ್ ಎಂದು ಕರೆಯುತ್ತಾರೆ. ಆತ ಕಿಂಗ್ ಮಾತ್ರವಲ್ಲ, ಜೀನಿಯಸ್ ಎನ್ನುತ್ತಾರೆ ಕ್ರಿಕೆಟಿಗರು.
ವಿರಾಟ್ ಕೊಹ್ಲಿ 2021ರ ಟಿ20 ವಿಶ್ವಕಪ್ ಸಂದರ್ಭದಲ್ಲಿ ತಂಡದ ಕಳಪೆ ಪ್ರದರ್ಶನದಿಂದಾಗಿ ನಾಯಕತ್ವ ಕಳೆದುಕೊಂಡರು. ನಂತರ ಅವರ ಒನ್ ಡೇ ಕ್ಯಾಪ್ಟನ್ಸಿಯನ್ನೂ ಕಿತ್ತುಕೊಳ್ಳಲಾಯಿತು. ಕೊಹ್ಲಿ ಟೆಸ್ಟ್ ನಾಯಕತ್ವವನ್ನೂ ಬಿಟ್ಟುಕೊಟ್ಟರು. ಪಾಕಿಸ್ತಾನ ಎದುರಿನ ಸೋಲು, ಅದರಿಂದಾಗಿ ಎದುರಿಸಬೇಕಾದ ಕೊಳಕು ಟೀಕೆಗಳಿಗೆ ಮಿತಿಯೇ ಇರಲಿಲ್ಲ. ಕೊಹ್ಲಿ ಮಾತ್ರವಲ್ಲ ಆತನ ಪತ್ನಿ ಅನುಷ್ಕಾ ಶರ್ಮರನ್ನೂ ಈ ಕೊಳಕರು ಬಿಡಲಿಲ್ಲ. ಕೊನೆಗೆ ಈ ದಂಪತಿಗಳು, ಪುಟ್ಟ ಕಂದಮ್ಮಳನ್ನೂ ಗುರಿಯಾಗಿಸಿಕೊಂಡು ಬೆದರಿಕೆ ಒಡ್ಡಲಾಯಿತು. ಇನ್ನೊಂದೆಡೆ ಕೊಹ್ಲಿ ಸೆಂಚುರಿ ಹೊಡೆಯುತ್ತಿಲ್ಲ ಎಂಬ ಕೂಗು ಕ್ರಿಕೆಟ್ ಪಂಡಿತರಿಂದಲೇ ಶುರುವಾಯಿತು. ಕೊಹ್ಲಿ ಆಟ ಮುಗಿದೇಹೋಯಿತು ಎಂದು ಹಲವರು. ಕೊಹ್ಲಿ ರಿಟೈರ್ ಆಗಬೇಕು ಎಂಬ ಮಾತುಗಳೂ ಕೇಳಿ ಬರಲಾರಂಭಿಸಿದವು.
ಕೊಹ್ಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಪರಿಶ್ರಮವನ್ನು ಕೈಬಿಡಲಿಲ್ಲ. ನೆಟ್ ಪ್ರಾಕ್ಟಿಸ್‌ನಲ್ಲಿ ಬೆವರು ಹರಿಸುವುದನ್ನು ಮರೆಯಲಿಲ್ಲ. 34 ವರ್ಷದ ವಿರಾಟ್ ಈಗಿನ ಇಂಡಿಯಾ ತಂಡದಲ್ಲಿ ಎಲ್ಲರಿಗಿಂತ ಹೆಚ್ಚು ಫಿಟ್ ಆಗಿದ್ದಾರೆಂದರೆ ನೀವು ನಂಬಲೇಬೇಕು. ಆತನ ಫೀಲ್ಡಿಂಗ್ ಅದ್ಭುತ. ಎದುರಾಳಿ ತಂಡ ಗಳಿಸಬಹುದಾದ ಹತ್ತು-ಹದಿನೈದು ರನ್‌ಗಳನ್ನು ತಡೆಯುವ ಕ್ಷಮತೆ ಆತನಿಗಿದೆ. ಕ್ಯಾಪ್ಟನ್ ಆಗಿರದಿದ್ದರೂ ಕೊಹ್ಲಿ ಯಾವಾಗಲೂ ಪಂದ್ಯದ ಕೇಂದ್ರಬಿಂದುವಾಗಿಯೇ ಇರುತ್ತಾರೆ, ಹಿ ಈಸ್ ಆಲ್ವೇಸ್ ಇನ್ ಆಕ್ಷನ್. ಹಾಡು ಹೇಳಿಕೊಂಡು, ಪುಟ್ಟದಾಗಿ ಸ್ಟೆಪ್ ಹಾಕುತ್ತ ಸಿಕ್ಸರ್ ಸಿಡಿಸುವ ಆಟಗಾರನನ್ನು ನಾವು ಇನ್ನೆಲ್ಲಾದರೂ ನೋಡಿರಲು ಸಾಧ್ಯವೇ? ಬೌಂಡರಿ ಲೈನ್ ನಲ್ಲಿ ಪ್ರೇಕ್ಷಕರ ಕೂಗಿಗೆ ಸ್ಪಂದಿಸುತ್ತ, ಅವರೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಇಂಟರಾಕ್ಷನ್ ನಡೆಸುತ್ತ ಎಲ್ಲರನ್ನೂ ಎಂಗೇಜ್ ಮಾಡುತ್ತ ಹೋಗುವ ಕೊಹ್ಲಿ ಪ್ರೇಕ್ಷಕರ ಪಾಲಿನ ಪಕ್ಕಾ ಎಂಟರ್‌ಟೇನರ್.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ಪಂದ್ಯಾವಳಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆಗಲೇ ಮೂರು ಅರ್ಧಶತಕ ಬಾರಿಸಿ ಆಗಿದೆ. ಎರಡು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ದಕ್ಕಿದೆ. ಕೊಹ್ಲಿ ಹೀಗೇ ಆಡಿದರೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆಯಬಹುದು. ಈಗಷ್ಟೇ ಇಂಟರ್‌ನ್ಯಾಷನಲ್ ಕ್ರಿಕೆಟ್‌ಗೆ ಬಂದ ಹದಿಹರೆಯದ ಆಟಗಾರನೊಬ್ಬನ ಉತ್ಸಾಹ ಕೊಹ್ಲಿಯಲ್ಲಿ ಇನ್ನೂ ಉಳಿದುಕೊಂಡಿದೆ. ಕ್ರಿಕೆಟ್ ಅಂಗಳದ ಒಳಗೂ ಹೊರಗೂ ಆತ ಪುಟ್ಟ ಮಗುವಿನಂತೆ ಸಂಭ್ರಮಿಸುವ, ಕ್ರಿಕೆಟ್‌ಪ್ರೇಮಿಗಳೊಂದಿಗೆ ಸಂವಾದಿಸುವ ರೀತಿಗೆ ಬೆರಗಾಗದವರಿಲ್ಲ.
ಕೊಹ್ಲಿ ಕ್ರಿಕೆಟ್ ಜಗತ್ತಿನ ಪುಟವಿಟ್ಟ ಚಿನ್ನ, ಹ್ಯಾಪಿ ಬರ್ತ್ ಡೇ ಜೀನಿಯಸ್.
ದಿನೇಶ್ ಕುಮಾರ್ ಎಸ್ ಸಿ
ಹಿರಿಯ ಪತ್ರಕರ್ತರು.