ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ದ್ವಿಪೌರತ್ವದ ಬಗ್ಗೆ ಪೊಲೀಸ್ ತನಿಖೆಗೆ ಆದೇಶಿಸಲು ಉತ್ತರ ಪ್ರದೇಶದ ನ್ಯಾಯಾಲಯಗಳಲ್ಲಿ ಎರಡು ವರ್ಷಗಳಿಂದ ಹೋರಾಡುತ್ತಿರುವ ಬೆಂಗಳೂರಿನ ಉದ್ಯಮಿ ಮತ್ತು ಬಿಜೆಪಿ ಕಾರ್ಯಕರ್ತ ವಿಘ್ನೇಶ್ ಶಿಶಿರ್ ಅವರ ವಿರುದ್ಧ ಕರ್ನಾಟಕದಲ್ಲಿ ₹13 ಕೋಟಿಗೂ ಹೆಚ್ಚು ಮೊತ್ತದ ವಂಚನೆ ಮತ್ತು ಹಣ ದುರುಪಯೋಗದ ಗಂಭೀರ ಆರೋಪಗಳಿರುವುದು ಬೆಳಕಿಗೆ ಬಂದಿದೆ.
₹9.6 ಕೋಟಿ ಹಣ ದುರುಪಯೋಗ ಪ್ರಕರಣ
2016ರಲ್ಲಿ ಶಿಶಿರ್ ವಿರುದ್ಧ ಮೊದಲ ಪ್ರಕರಣ ದಾಖಲಾಯಿತು. ಸಿಂಪ್ಸನ್ಸ್ ಅಂಡ್ ಕಂಪನಿ ಎಂಬ ಖಾಸಗಿ ಸಂಸ್ಥೆಗೆ ಸರ್ಕಾರ ನೇಮಿಸಿದ ಲಿಕ್ವಿಡೇಟರ್ ಆಗಿ ಕೆಲಸ ನಿರ್ವಹಿಸಿದ್ದ ಶಿಶಿರ್ ಅವರ ತಂದೆ ಸತೀಶ್ ಕಶ್ಯಪ್ ಅವರು, 2014ರ ಫೆಬ್ರವರಿಯಿಂದ 2016ರ ಆಗಸ್ಟ್ ನಡುವೆ ₹9.6 ಕೋಟಿ ರೂ. ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿದ್ದಾರೆ.
ಬೆಂಗಳೂರು ವಿಚಾರಣಾ ನ್ಯಾಯಾಲಯದ ಆರೋಪಪಟ್ಟಿಯ ಪ್ರಕಾರ, ಶಿಶಿರ್ ಅವರು ದುರುಪಯೋಗದ ಹಣ ಸ್ವೀಕರಿಸಿದ ಮುಖ್ಯ ವ್ಯಕ್ತಿಯಾಗಿದ್ದಾರೆ. ತಾಯಿ ಅನಿತಾ ಪಾಲುದಾರರಾಗಿದ್ದ ಸಣ್ಣ ಜಲವಿದ್ಯುತ್ ಯೋಜನೆಗಳ ಕಂಪನಿಗಳು ಸೇರಿದಂತೆ ಹಲವು ಸಂಸ್ಥೆಗಳ ಮೂಲಕ ಹಣ ವರ್ಗಾವಣೆ ನಡೆದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಸಿಐಡಿ ತನಿಖೆಯಲ್ಲಿ, ಸತೀಶ್ ಅವರು ಸಿಂಪ್ಸನ್ಸ್ ಸಂಸ್ಥೆಯಿಂದ ತಾವು ಪಡೆದ ಹಣವನ್ನು ಎಲ್‌ಇಡಿ ಬಲ್ಬ್ ಖರೀದಿಗೆ ಬಳಸಿದ್ದಾಗಿ ಹೇಳಿದ್ದರು. ಆದರೆ ವಾಸ್ತವದಲ್ಲಿ ಆ ಹಣ ಹಲವು ಸಣ್ಣ ಜಲವಿದ್ಯುತ್ ಕಂಪನಿಗಳಿಗೆ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಸೆಪ್ಟೆಂಬರ್ 30, 2025ರಂದು ವಿಶೇಷ ಲೋಕಾಯುಕ್ತ ನ್ಯಾಯಾಲಯವು ಶಿಶಿರ್, ಅವರ ತಂದೆ-ತಾಯಿ ಮತ್ತು ಸಹಚರ ರಾವ್ ವಿರುದ್ಧದ ಪ್ರಕರಣ ರದ್ದು ಮಾಡಲು ನಿರಾಕರಿಸಿದ್ದು, “ಹಣ ಮರುಪಡೆಯಲು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅತ್ಯಂತ ಆಘಾತಕಾರಿ” ಎಂದು ಟಿಪ್ಪಣಿ ನೀಡಿದೆ.
ಅಂಗವಿಕಲ ಮಹಿಳೆಗೂ ₹3.36 ಕೋಟಿ ಮೋಸ
2018ರಲ್ಲಿ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದ್ದು, ಬೆಂಗಳೂರಿನ 26 ವರ್ಷದ ಅಂಗವಿಕಲ ಮಹಿಳೆಯನ್ನು ₹3.36 ಕೋಟಿ ಮತ್ತು 3,680 ಚದರ ಅಡಿ ವಾಸಸ್ಥಳ ವಿಷಯದಲ್ಲಿ ಮೋಸಗೊಳಿಸಿದ ಆರೋಪ ಶಿಶಿರ್ ವಿರುದ್ಧ ಇದೆ.
ನಾಗಶೆಟ್ಟಿಹಳ್ಳಿ ಗ್ರಾಮದಲ್ಲಿರುವ ಜಾಗವನ್ನು ಉಡುಗೊರೆ ರೂಪದಲ್ಲಿ ಪಡೆದಿದ್ದ ಆ ಮಹಿಳೆ ಅದನ್ನು ಮಾರಾಟ ಮಾಡಲು ಮುಂದಾದಾಗ, ಶಿಶಿರ್, ಅವರ ಪೋಷಕರು ಮತ್ತು ಸಹಚರ ಕಾಳಿಂಗ ರಾವ್ ₹3.36 ಕೋಟಿ ನೀಡುವ ನೆಪದಲ್ಲಿ ಜಮೀನು ಖರೀದಿಗೆ ಮುಂದಾದರು. ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಅರಿವಿಲ್ಲದ ಆ ಮಹಿಳೆಯಿಂದ ಜಂಟಿ ಖಾತೆ ತೆರೆಸಿ ಖಾಲಿ ಚೆಕ್ಕುಗಳಿಗೆ ಸಹಿ ಮಾಡಿಸಿಕೊಂಡ ಆರೋಪ ಇವರ ಮೇಲಿದೆ.
ಬೆಂಗಳೂರು ಪೊಲೀಸರ ತನಿಖೆಯಲ್ಲಿ ಜಂಟಿ ಖಾತೆಗೆ ₹3.36 ಕೋಟಿ ಜಮೆಯಾಗಿರುವ ಸಾಕ್ಷ್ಯ ಲಭ್ಯವಾಗಿದ್ದು, ಆ ಹಣ ನಂತರದಲ್ಲಿ ಶಿಶಿರ್ ಸ್ವಾಮ್ಯದ ‘ಹೈ ಆಕ್ಟೇನ್ ವರ್ಲ್ಡ್ ವೈಡ್ ಕಾಫಿ’ (₹65 ಲಕ್ಷ) ಮತ್ತು ‘ವಿಘ್ನೇಶ್ವರ ಎಸ್ಟೇಟ್ಸ್ ಅಂಡ್ ಟೂರಿಸಂ’ (₹2.02 ಕೋಟಿ) ಸಂಸ್ಥೆಗಳಿಗೆ ವರ್ಗಾವಣೆಯಾಗಿದೆ.
2025ರ ಫೆಬ್ರವರಿಯಲ್ಲಿ ಆರೋಪ ರದ್ದು ಕೋರಿ ಸಲ್ಲಿಸಿದ್ದ ಮನವಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿ, ವಿಚಾರಣೆ ನಡೆಸಲು ಸಾಕಷ್ಟು ಸಾಕ್ಷ್ಯಗಳಿವೆ ಎಂದು ತಿಳಿಸಿದೆ.
ಶಿಶಿರ್ ಹೇಳಿಕೆ
ತಮ್ಮ ವಿರುದ್ಧದ ಆರೋಪಗಳು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಶಿಶಿರ್ ಆರೋಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ವಿರುದ್ಧ ತಾವು ದಾಖಲಿಸಿದ ಪ್ರಕರಣಗಳಿಗೆ ಸಂಬಂಧಿಸಿ ತಮ್ಮನ್ನು ಗುರಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ನ್ಯಾಯಾಲಯ ಅವರ ಈ ವಾದ ತಿರಸ್ಕರಿಸಿ ವಿಚಾರಣೆಗೆ ಆದೇಶಿಸಿದೆ.
ಕರ್ನಾಟಕ ಬಿಜೆಪಿ ನಾಯಕರು ಮಾತ್ರ ಶಿಶಿರ್ ಅವರನ್ನು ರಾಜ್ಯ ಮಟ್ಟದ ಯಾವುದೇ ಪಕ್ಷದ ವೇದಿಕೆಯಲ್ಲಿ ಕಂಡಿಲ್ಲ ಎಂದು ತಿಳಿಸಿದ್ದು, ದೆಹಲಿಯ ನಾಯಕರ ಮೂಲಕ ಸಂಪರ್ಕ ಹೊಂದಿರಬಹುದು ಎಂದು ಹೇಳಿದ್ದಾರೆ.
