ಶಿವಮೊಗ್ಗ ನಗರದಲ್ಲಿ ಹಿಂದೂ ಮಹಾಸಭಾದ ಗಣಪತಿ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಗಣೇಶ ಹಬ್ಬದ ಕೆಲವೇ ದಿನಗಳ ಹಿಂದೆ ನಗರದಲ್ಲಿ ದೊಡ್ಡ ಮಟ್ಟದ ಕೋಮು ಗಲಭೆ ನಡೆದಿದ್ದ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ಇದ್ದು ಪೊಲೀಸರ ಮುಂಜಾಗ್ರತೆಯಿಂದ ಸಧ್ಯದ ಮಟ್ಟಿಗೆ ಇದು ತಣ್ಣಗಾಗಿದೆ.
ಸಾವರ್ಕರ್-ಟಿಪ್ಪು ಫ್ಲೆಕ್ಸ್ ವಿವಾದದ ನಂತರ ಶಿವಮೊಗ್ಗ ನಗರದ ಪರಿಸ್ಥಿತಿ ಒಂದು ರೀತಿಯ ಬೂದಿ ಮುಚ್ಚಿದ ಕೆಂಡದಂತಿದೆ. ಪ್ರತಿ ವರ್ಷ ಒಂದಿಲ್ಲೊಂದು ಸಣ್ಣಪುಟ್ಟ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದ್ದ ಈ ಉತ್ಸವಕ್ಕೆ ಈ ಬಾರಿ ಪೊಲೀಸ್ ವ್ಯವಸ್ಥೆ ಹಿಂದೆಂದಿಗಿಂತಲೂ ಹೆಚ್ಚು ಬಿಗಿ ಬಂದೋಬಸ್ತ್ ಮಾಡಲಾಗಿದೆ.
ನಗರದಲ್ಲಿ ಮೆರವಣಿಗೆ ಸಾಗುವ ಪ್ರತೀ ಕಡೆಗೂ ಪೊಲೀಸ್ ಕಣ್ಗಾವಲಿದ್ದು, ಅಹಿತಕರ ಘಟನೆ ತಡೆಯಲು ಎಲ್ಲಾ ಕಡೆಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಜೊತೆಗೆ ಇಲಾಖೆಯ ಕಡೆಯಿಂದಲೂ ವಿಡಿಯೋ ಚಿತ್ರೀಕರಣ ನಡೆಸಲಿದ್ದು ಪೋಲೀಸರ ರಾಪಿಡ್ ಆಕ್ಷನ್ ಫೋರ್ಸ್ ಸಹ ನಗರದಲ್ಲಿ ಬೀಡು ಬಿಟ್ಟಿದೆ.
ಗಣೇಶೋತ್ಸವದ ಉತ್ಸವವು ಭೀಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ, ಗಾಂಧಿ ಬಜಾರ್ ಮುಖ್ಯರಸ್ತೆ, ಬಿ.ಹೆಚ್ ರಸ್ತೆ, ನೆಹರೂ ರಸ್ತೆ ಮುಖಾಂತರ ಗೋಪಿ ಸರ್ಕಲ್, ದುರ್ಗಿಗುಡಿ ಮುಖ್ಯರಸ್ತೆ, ಜೈಲ್ ಸರ್ಕಲ್, ಮಹಾವೀರ ಸರ್ಕಲ್, ಸವಳಂಗ ಮುಖ್ಯರಸ್ತೆ, ಡಿವಿಎಸ್ ಸರ್ಕಲ್, ಪೊಲೀಸ್ ಕಾರ್ನರ್, ಕೋಟೆ ಪೊಲೀಸ್ ಸ್ಟೇಶನ್ ಮಾರ್ಗವಾಗಿ ಮತ್ತೆ ಭೀಮೇಶ್ವರ ದೇವಸ್ಥಾನದಿಂದ ತುಂಗಾ ನದಿಗೆ ವಿಸರ್ಜನೆ ಮಾಡಲಾಗುತ್ತದೆ. ಈ ಮಾರ್ಗದ ಎಲ್ಲಾ ಕಡೆಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಭದ್ರಾವತಿಯ, ಬೆಂಗಳೂರು, ಹೊಳೆಹೊನ್ನೂರು, ಚಿತ್ರದುರ್ಗ, ಹೊನ್ನಾಳಿ, ಹರಿಹರ, ದಾವಣಗೆರೆ ಕಡೆಗಳಿಂದ ಬರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಇನ್ನು ಮೆರವಣಿಗೆ ಸಾಗುವ ಮಾರ್ಗದ ಸುತ್ತಮುತ್ತ 100 ಅಡಿ ಅಂತರದಲ್ಲಿ ಎಲ್ಲಾ ವಾಹನ ಸಂಚಾರ ಮತ್ತು ನಿಲುಗಡೆಯನ್ನು ಸಂಪೂರ್ಣ ನಿಶೇಧಿಸಲಾಗಿದೆ.
ಇತ್ತೀಚೆಗಷ್ಟೆ ವಿವಿಧ ಧಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ಸೌಹಾರ್ದ ನಡಿಗೆ ನಡೆದಿದ್ದು ಈ ದಿನದಲ್ಲಿ ಅನಿರೀಕ್ಷಿತವಾಗಿ ಜರುಗಬಹುದಾದ ದುರ್ಘಟನೆಗಳಿಗೆ ಸ್ವಲ್ಪ ತಡೆ ಬಂದಿದೆ. ಆ ನಿಟ್ಟಿನಲ್ಲಿ ಈ ಬಾರಿ ಶಿವಮೊಗ್ಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂಬುದು ಶಾಂತಿ ಸೌಹಾರ್ದತೆ ಸಾಮರಸ್ಯ ಬಯಸುವ ಶಿವಮೊಗ್ಗ ನಗರ ಜನತೆಯ ಆಶಯವಾಗಿದೆ.