ಪ್ರವಾದಿ ಕುರಿತು ಅವಮಾನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬಂಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಯು. ಯು. ಲಲಿತ್ ನೇತೃತ್ವದ ಪೀಠ, ಅರ್ಜಿಯು ತುಂಬಾ ಸರಳವಾಗಿ ಹಾಗೂ ನಿರುಪದ್ರವಿಯಾಗಿ ಕಾಣುತ್ತದೆ. ಆದರೆ ಈ ಅರ್ಜಿಯು ತುಂಬಾ ದೂರಗಾಮಿ ಪರಿಣಾಮಗಳನ್ನು ಹೊಂದಿದೆ. ನಿರ್ದೇಶನಗಳನ್ನು ನೀಡುವಾಗ ನ್ಯಾಯಾಲಯವು ಸೂಕ್ಷ್ಮವಾಗಿರಬೇಕು. ಈ ಅರ್ಜಿಯನ್ನು ಹಿಂಪಡೆಯುವುದು ನಮ್ಮ ಸಲಹೆ. ಅರ್ಜಿ ಹಿಂಪಡೆಯಲಾಗಿದೆ ಎಂದು ಪರಿಗಣಿಸಿ ಅರ್ಜಿ ವಜಾಗೊಳಿಸಲಾಗಿದೆ ಎಂದು ಪೀಠ ಹೇಳಿದೆ.
ಮಾರ್ಚ್ 26ರಂದು ಖಾಸಗಿ ಮಾಧ್ಯಮದಲ್ಲಿ ಪ್ರವಾದಿಯ ಕುರಿತು ಶರ್ಮಾ ಅವಹೇಳನಾಕಾರಿ ಹೇಳಿಕೆ ನೀಡಿದ್ದರು. ಈ ಒಂದು ಹೇಳಿಕೆಯಿಂದಾಗಿ ಈ ವರ್ಷದ ಆರಂಭದಲ್ಲಿ ರಾಷ್ಟ್ರದಾದ್ಯಂತ ಭಾರಿ ವಿವಾದ ಸೃಷ್ಟಿಯಾಗಿತ್ತು. ಹಲವಾರು ಮುಸ್ಲಿಂ ರಾಷ್ಟ್ರಗಳು ಈ ಹೇಳಿಕೆಯನ್ನು ವಿರೋಧಿಸಿದ್ದವು. ನಂತರ ಕೇಂದ್ರ ಸರ್ಕಾರವು ಹೇಳಿಕೆಯನ್ನು ವಿರೋಧಿಸಿತ್ತು. ಇದರ ಬೆನ್ನಲ್ಲೇ ಬಿಜೆಪಿ, ನೂಪುರ್ ಶರ್ಮ ಹೇಳಿಕೆಗೂ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿತ್ತು, ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.