ಬೆಂಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರತಿಷ್ಠಿತ ಬಡಾವಣೆಯ ಜನರಿಗಿಂತ ಹೆಚ್ಚು ಹಾನಿಗೊಳಗಾಗಿದ್ದು ಬೆಂಗಳೂರು ಹೊರವಲಯದಲ್ಲಿ ವಾಸಿಸುತ್ತಿರುವ ಕೊಳಗೇರಿ ನಿವಾಸಿಗಳು. ಅದರಲ್ಲಿ ಪ್ರಮುಖವಾಗಿ ಬೆಳ್ಳಂದೂರು, ಮಾರತಹಳ್ಳಿ, ಬ್ರೂಕ್‌ಫೀಲ್ಡ್, ಪಾಳ್ಯಂ, ವೈಟ್‌ಫೀಲ್ಡ್ ಮತ್ತು ಬಿಇಎಂಎಲ್ ಲೇಔಟ್‌ಗಳ ಸ್ಲಂಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರ ಪರಿಸ್ಥಿತಿ ಹೇಳತೀರದು.
News click ಎಂಬ ಆಂಗ್ಲ ಭಾಷೆಯ ಮಾಧ್ಯಮವೊಂದು ಈ ಬಗ್ಗೆ ದೀರ್ಘವಾಗಿ ವರದಿ ಮಾಡಿದ್ದು ತಳಮಟ್ಟದ ನಾಗರೀಕರ ಬವಣೆಗಳನ್ನು ತೆರೆದಿಟ್ಟಿದೆ. ನಿರಂತರ ಮಳೆಯಿಂದಾಗಿ ಈ ಭಾಗದ ಸ್ಲಂಗಳಿಗೆ ಬಹು ಬೇಗನೆ ನಗರ ಭಾಗದ ಕೊಳಚೆ ನೀರು ನುಗ್ಗಿದ್ದು, ಆಹಾರ, ಬಟ್ಟೆ, ಹಾಸಿಗೆ, ಮನೆಯ ಮೇಲ್ಚಾವಣಿ ಎಲ್ಲವೂ ನೀರು ಪಾಲಾಗಿದೆ. ಕನಿಷ್ಟ ಕುಡಿಯುವ ನೀರಿಗೂ ಸಹ ಇಲ್ಲಿನ ಜನ ಪರದಾಡುತ್ತಿದ್ದು ಬಿಬಿಎಂಪಿ ಅಧಿಕಾರಿಗಳು ಮಾತ್ರ ಪ್ರತಿಷ್ಠಿತ ಬಡಾವಣೆಗಳ ಕಡೆಗಷ್ಟೆ ತಮ್ಮ ಗಮನ ನೆಟ್ಟಿದ್ದು ದುರಂತವೇ ಸರಿ. ಇತ್ತ ಮಾಧ್ಯಮಗಳೂ ಕೂಡಾ ಈ ಸ್ಲಂ ನಿವಾಸಿಗಳ ಸಂಕಷ್ಟವನ್ನು ತೆರೆದಿಡಲು ನಿರ್ಲಕ್ಷ್ಯ ಧೋರಣೆ ಹೊಂದಿದ್ದು ಹೊತ್ತಿನ ಊಟ ನೀರಿಗೂ ತತ್ವಾರ ಪಡುವಂತಹ ಸ್ಥಿತಿ ತಲುಪಿದ್ದಾರೆ.

ಮಾರತಹಳ್ಳಿಯ ಮುನ್ನೇಕೊಳಲು ಕೊಳಗೇರಿಯಲ್ಲಿ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಚಿಂದಿ ಆಯುವವರು, ಒಂದಷ್ಟು ಪೌರ ಕಾರ್ಮಿಕರ ಮನೆಗಳೂ ಸೇರಿದಂತೆ ನೂರಾರು ಮನೆಗಳು ಜಲಾವೃತವಾಗಿವೆ. ಈ ಕೊಳಗೇರಿಯಲ್ಲಿ ಒಟ್ಟು 800 ಮನೆಗಳಿದ್ದು ಅಂದಾಜು 2,000 ಮಂದಿ ಪ್ರವಾಹದ ಹೊಡೆತದಿಂದ ನಲುಗುತ್ತಿದ್ದಾರೆ. ಬೆಂಗಳೂರಿನಲ್ಲಿ ಸಧ್ಯ ಶುರುವಾದ ಎರಡನೇ ಹಂತದ ಮಳೆಗೆ ಈ ಕೊಳಗರಿಗೆ ನೀರು ನುಗ್ಗಿ ಸಂಪೂರ್ಣ ಎಲ್ಲಾ ಮನೆಗಳ ಸ್ಥಿತಿ ಅಸ್ತವ್ಯಸ್ತಗೊಂಡಿದೆ. ಮಲಗಿ ಏಳಲೂ ಜಾಗವಿಲ್ಲದಂತಾ ದಾರುಣ ಸ್ಥಿತಿ ಇಲ್ಲಿನ ಜನರದ್ದಾಗಿದೆ.
ಸೆಪ್ಟೆಂಬರ್ 5 ರಂದು ಹಸಿರುದಳ ಎಂಬ NGO ದೊಂದಿಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (CITU), ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (AICCTU) ಸಂಘಟನೆಗಳು ಈ ಕೊಳಗೇರಿಗೆ ತೆರಳಿ ಅಲ್ಲಿನ ಜನರ ದುಸ್ಥಿತಿಗಳನ್ನು ತಿಳಿದು ಬಿಬಿಎಂಪಿ ಅಧಿಕಾರಿಗಳಿಗೆ ತಾತ್ಕಾಲಿಕ ಸೌಕರ್ಯಗಳನ್ನು ಒದಗಿಸಲು ಒತ್ತಾಯಿಸಿವೆ. ಈ ಕಾರ್ಮಿಕ ಸಂಘಟನೆಗಳ ಒತ್ತಾಯ ಮತ್ತು ಒತ್ತಡಕ್ಕೆ ಮಣಿದು ಬಿಬಿಎಂಪಿ ಸಧ್ಯದ ಪರಿಸ್ಥಿತಿ ತಿಳಿಗೊಳಿಸಲು ಟಾರ್ಪಲ್ ವ್ಯವಸ್ಥೆ ಕಲ್ಪಿಸಿದೆ. ಆದರೆ ನೀರು ಗುಡಿಸಲುಗಳಿಗೆ ನುಗ್ಗಿರುವ ಪರಿಣಾಮ ನೆಲದ ಭಾಗ ಕೆಸರಿನಿಂದ ಕೂಡಿದೆ ಮತ್ತು ಮಲಗಿ ಏಳಲೂ ಸಹ ಇಲ್ಲಿನ ಜನಕ್ಕೆ ಆಗದ ಪರಿಸ್ಥಿತಿ ಎದುರಾಗಿದೆ.
ಜೊತೆಗೆ ಮಳೆಯ ನೀರು ಮತ್ತು ಕೊಳಚೆ ನೀರು ಒಂದೇ ಬಾರಿಗೆ ನುಗ್ಗಿದ ಪರಿಣಾಮ ಹಾಸಿಗೆ, ಬಟ್ಟೆ, ಪಾತ್ರೆ, ಆಹಾರ ಪದಾರ್ಥಗಳು ನೀರುಪಾಲಾಗಿವೆ. ಸರಿಯಾಗಿ ನಿಲ್ಲಲೂ ಸಹ ಸೂಕ್ತ ವ್ಯವಸ್ಥೆ ಇಲ್ಲದೇ ಇದ್ದಾಗ ಒಂದೇ ಬಾರಿಗೆ ಮನೆ ಬಿಟ್ಟು ಹೊರ ಬರಬೇಕಾಯಿತು. ಹಾಗಾಗಿ ಆಹಾರ ಪದಾರ್ಥ, ಪಾತ್ರೆ, ಬಟ್ಟೆ ಯಾವುದನ್ನೂ ಹೊತ್ತು ತರಲಾರದೆ ಎಲ್ಲವೂ ನೀರುಪಾಲಾಗಿವೆ.
ಇನ್ನು ಚಿಂದಿ ಆಯುವವರ ಗುಂಪುಗಳು ಒಟ್ಟುಗೂಡಿಸಿಕೊಂಡಿದ್ದ ಒಣ ತ್ಯಾಜ್ಯಗಳೂ ಒಂದಷ್ಟು ನೀರುಪಾಲಾಗಿದೆ. ಇನ್ನು ಸಂಪೂರ್ಣವಾಗಿ ಜಲಾವೃತವಾಗಿರುವ ಜಾಗಗಳಿಂದ ಅಲ್ಲಿನ ಸ್ಲಂ ನಿವಾಸಿಗಳು ಅಗತ್ಯ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುತ್ತಿರುವುದು ನಿರಂತರವಾಗಿ ಕಂಡುಬರುತ್ತಿದೆ.
ಸ್ಥಳೀಯ ನಿವಾಸಿ ಇಮ್ರಾನ್ ಎಂಬುವವರು ‘ನ್ಯೂಸ್ ಕ್ಲಿಕ್’ ಗೆ ನೀಡಿರುವ ಮಾಹಿತಿಯಂತೆ “ನಾವು ಆಳವಾದ ಬಿಕ್ಕಟ್ಟಿನಲ್ಲಿದ್ದರೂ ಸಹ, ನಾವು ನಿಧಾನವಾಗಿ ಸಂಗ್ರಹಿಸಿದ ಒಣ ತ್ಯಾಜ್ಯವನ್ನು ಸಂರಕ್ಷಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅದು ಹೇಗಾದರೂ ನಾವು ನಮ್ಮ ಮನೆಗಳಲ್ಲಿ ಮರು-ನೆಲೆಗೊಳ್ಳುವವರೆಗೆ ಜೀವನೋಪಾಯವನ್ನು ಉಳಿಸಿಕೊಳ್ಳಲು ಸ್ವಲ್ಪ ಮೊತ್ತವನ್ನಾದರೂ ಅದು ಒದಗಿಸಬಹುದು” ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಸಧ್ಯ ಕೊಳಗೇರಿಯ ಭಾಗಗಳಲ್ಲಿ ನೀರು ಕಡಿಮೆಯಾಗುತ್ತಿರುವಾಗ ಪ್ರವಾಹದ ತೀವ್ರತೆ ಬೆಳಕಿಗೆ ಬರುತ್ತಿದೆ. ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ, ಒದ್ದೆಯಾಗಿ ಬಿದ್ದಿರುವ ಹಾಸಿಗೆ, ಬಟ್ಟೆಗಳು ಆಹಾರ ಪದಾರ್ಥಗಳು ಕಾಣ ಸಿಗುತ್ತಿವೆ. ಸೆಪ್ಟೆಂಬರ್ 8 ರ ನಿನ್ನೆಯ ದಿನ ಹಸಿರುದಳ NGO ನೆರವಿನೊಂದಿಗೆ ಜಲಾವೃತಗೊಂಡಿರುವ ನೀರನ್ನು ಪಂಪ್ ಮೂಲಕ ಹೊರಬಿಡಲಾಗುತ್ತಿದೆ. ಬ್ರೂಕ್ ಫೀಲ್ಡ್ ಕೊಳಗೇರಿಯಲ್ಲಿರುವ ಒಟ್ಟು 65 ಮನೆಗಳಿಗೆ ನೀರಿನ ಹೊಡೆತ ತೀವ್ರವಾಗಿ ಸಿಕ್ಕಿದೆ. ಇದರಲ್ಲಿ ವಲಸೆ ಕಾರ್ಮಿಕರು, ಪೌರ ಕಾರ್ಮಿಕರ ಮನೆಗಳೂ ಇವೆ. ಸಧ್ಯಕ್ಕೆ ಇಲ್ಲಿನ ಜನರ ನೆರವಿಗೆ ನಿಂತ CITU, AICCTU, ಹಸಿರುದಳ ಸಮಾಜಸೇವಾ ಸಂಘಟನೆಗಳು ಇಲ್ಲಿನ ಜನರಿಗೆ ತುರ್ತು ನೆರವಿಗೆ ಬರುವಂತೆ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಗೆ ತಕ್ಷಣಕ್ಕೆ ನೆರವಿಗೆ ಬರುವಂತೆ ಒತ್ತಾಯಿಸಿವೆ.
ಮಾತೆತ್ತಿದರೆ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳ ಮುಳುಗಿರುವುದನ್ನು ವರದಿ ಮಾಡಿ ಶ್ರೀಮಂತರ ಮನೆಗಳನ್ನೇ ತೋರಿಸುವ ದೃಶ್ಯ ಮಾಧ್ಯಮಗಳು ಇಂತಹ ಜನರನ್ನು ಮನುಶ್ಯರೆಂದೇ ಪರಿಗಣಿಸಿಲ್ಲವೇನೋ. ಪರಿಣಾಮ ಇಂತಹ ಜನರ ಕೂಗು ಯಾರಿಗೂ ಸಹ ಕೇಳುತ್ತಿಲ್ಲ. ಮನುಷ್ಯ ಜೀವಿ ಬದುಕುತ್ತಿರುವ ಅತ್ಯಂತ ಹೀನಾಯ ಪರಿಸ್ಥಿತಿ ಇದಾಗಿದೆ. ಸರ್ಕಾರದ ಪ್ರತಿನಿಧಿಗಳು ಐಟಿ ಬಿಟಿ ಕಂಪನಿಗಳಿಗೆ ಕೋಟಿ ಮೊತ್ತದ ಪರಿಹಾರ ಕೊಡುವ ಭರವಸೆ ಕೊಡುತ್ತಿದ್ದರೆ ಇಲ್ಲಿನ ಕೊಳಗೇರಿ ನಿವಾಸಿಗಳು ಕುಡಿಯುವ ನೀರಿಗೂ ತತ್ವಾರ ಪಡುವ ಅತ್ಯಂತ ಕೆಟ್ಟ ವ್ಯವಸ್ಥೆ ಇಲ್ಲಿನದಾಗಿದೆ. ಇತ್ತ ವಿರೋಧ ಪಕ್ಷದ ನಾಯಕರಿಂದಲೂ ಸಹ ಇಲ್ಲಿನ ಜನ ನಿರ್ಲಕ್ಷಿತರಾಗಿದ್ದು 75 ನೇ ಸ್ವತಂತ್ರ ಭಾರತದ ಅತಿ ದೊಡ್ಡ ದುರಂತ.