ಬಹುತೇಕ ಸಂದರ್ಭಗಳಲ್ಲಿ ವಿವಾದಿತ ಕೇಂದ್ರಬಿಂದುವಾಗಿರುವ, ಹೆಚ್ಚಿನ ಸಂದರ್ಭಗಳಲ್ಲಿ ಕೋಮುವಾದಿ ಶಕ್ತಿಗಳಿಗೆ ಆಹಾರವಾಗುವ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಈ ಬಾರಿ ಬಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ಶಿವಮೊಗ್ಗ ನಗರದಾದ್ಯಂತ ಸುಮಾರು 5 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ನಗರದಾದ್ಯಂತ ಯಾವುದೇ ಅಹಿತಕರ ದುರ್ಘಟನೆಗಳು ನಡೆಯದಂತೆ ಪೊಲೀಸರು ಶಿವಮೊಗ್ಗ ನಗರದಾದ್ಯಂತ ವಿಶೇಷವಾಗಿ ಗಣಪತಿ ವಿಸರ್ಜನೆಯ ಮೆರವಣಿಗೆ ಹೋಗುವ ಬೀದಿಗಳಲ್ಲಿ ಬಿಗಿಬಂದೋಬಸ್ತ್ ಕೈಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರದ ಶಾಲೆ ಕಾಲೇಜುಗಳಿಗೆ (ಅಂಗನವಾಡಿಯಿಂದ ಪಿಯುಸಿ) ರಜೆ ಘೋಷಣೆ ಮಾಡಲಾಗಿದೆ.
ಅನೇಕ ಸಂದರ್ಭಗಳಲ್ಲಿ ಶಿವಮೊಗ್ಗದ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ವೇಳೆ ಗಲಾಟೆಗಳು ನಡೆದಿವೆ. ಈ ಹಿನ್ನಲೆಯಲ್ಲಿ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಆಗುವವರೆಗೆ ಪೊಲೀಸ್ ಇಲಾಖೆಗೆ ದೊಡ್ಡ ಟೆನ್ಷನ್. ಇಂದಿನ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸೇರಿದಂತೆ ಹೊರಜಿಲ್ಲೆಯಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ನಗರದಲ್ಲಿ ಜನಸಾಗರವೇ ಸೇರುವುದರಿಂದ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಹುತೇಕ ಬಂದ್ ಆಗಲಿವೆ. ಮದ್ಯ ಮಾರಾಟಕ್ಕೆ ಜಿಲ್ಲಾಢಳಿತ ನಿಷೇಧ ಹೇರಿದೆ.
ಪೊಲಿಸರು ಶಿವಮೊಗ್ಗ ನಗರದ ಪ್ರಮುಖ ರಸ್ತೆಯಲ್ಲಿ ಪಥಸಂಚಲನ ನಡೆಸಿದ್ದಾರೆ. ಶಿವಮೊಗ್ಗದ ಡಿಎಆರ್ ಪೊಲೀಸ್ ಮೈದಾನದಿಂದ ಪಥಸಂಚಲನ ಆರಂಭವಾಗಿದ್ದು, ಅಮೀರ್ ಅಹ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ತೀರ್ಥಹಳ್ಳಿ ರಸ್ತೆಯಲ್ಲಿ ಪಥಸಂಚಲನ ಮಾಡಲಾಗಿದೆ. ಇನ್ನು ಇದರಲ್ಲಿ ಡಿಎಆರ್, ಆರ್ಎಎಫ್, ಕೆಎಸ್ಆರ್ಪಿ, ಸಿವಿಲ್ ಪೊಲೀಸರು ಭಾಗಿಯಾಗಿದ್ದರು.
ಗಣೇಶ ಮೆರವಣಿಗೆ ವೇಳೆ ಸಾವಿರಾರು ಜನರು ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಐವರು ಎಎಸ್ಪಿ, 14 ಡಿವೈಎಸ್ಪಿ, 40 ಪಿಐ, 75 ಪಿಎಸ್ಐ ಸೇರಿದಂತೆ ಶಿವಮೊಗ್ಗದಾದ್ಯಂತ ಭದ್ರತೆಗಾಗಿ 5,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಶಿವಮೊಗ್ಗಕ್ಕೆ ಪೊಲೀಸರು ಆಗಮಿಸಿದ್ದಾರೆ. 15 ಡಿಎಆರ್ ತುಕಡಿ, 20 ಕೆಎಸ್ಆರ್ಪಿ ತುಕಡಿ, ಹೋಮ್ಗಾರ್ಡ್ಸ್ ಬಳಕೆ ಮಾಡಲಾಗಿದೆ. ಇನ್ನು 1 ಸಾವಿರ ಸಿಸಿಕ್ಯಾಮರಾ ಅಳವಡಿಕೆ, 100 ವಿಡಿಯೋ ಕ್ಯಾಮರಾ, ಜನಸಂದಣಿ ಮೇಲೆ ನಿಗಾವಹಿಸಲು 20 ಡ್ರೋನ್ ಕ್ಯಾಮರಾಗಳ ಬಳಕೆ ಮಾಡಲಾಗುತ್ತದೆ.