ದೆಹಲಿಯ ತಿಹಾರ್ ಜೈಲಿನಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಸಂಸದ ಇಂಜಿನಿಯರ್ ರಶೀದ್ ಮೇಲೆ ದಾಳಿ ನಡೆದಿದೆ. ಜೈಲು ಮೂಲಗಳ ಪ್ರಕಾರ, ಮಂಗಳಮುಖಿ ಕೈದಿಗಳು ರಶೀದ್ ಮೇಲೆ ಹಲ್ಲೆ ನಡೆಸಿದ್ದಾರೆ.
ವಾದ-ವಿವಾದದ ನಂತರ ಈ ದಾಳಿ ನಡೆದಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ರಶೀದ್ ಅವರು ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿ ಗುಂಪುಗಳಿಗೆ 2017ರಲ್ಲಿ ಹಣಕಾಸು ಒದಗಿಸಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅವರನ್ನು 2019ರಲ್ಲಿ ಬಂಧಿಸಿತ್ತು.
ರಶೀದ್ ಮೇಲೆ ದಾಳಿ ನಡೆದಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ತಂದೆಯ ರಕ್ಷಣೆಗಾಗಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ರಶೀದ್ ಅವರ ಮಗ ಅಬ್ರಾರ್ ರಶೀದ್ ಪತ್ರ ಬರೆದಿದ್ದಾರೆ. ತಮ್ಮ ತಂದೆಯನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ರಶೀದ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಜೈಲು ನಂ.3ರಲ್ಲಿ ಪ್ರಸ್ತುತ ಮೂವರು ಮಂಗಳಮುಖಿ ಕೈದಿಗಳು ಇದ್ದಾರೆ. ಅವರೊಂದಿಗಿನ ವಾಗ್ವಾದದ ನಂತರ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಆದರೆ ಕೊಲೆ ಸಂಚಿನ ಆರೋಪವನ್ನು ಜೈಲು ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಅಂತಹ ಯಾವುದೇ ಸಂಚು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಶೀದ್ ಮೇಲಿನ ದಾಳಿಯ ಕುರಿತು ವಕೀಲರನ್ನು ಭೇಟಿಯಾಗುವುದಾಗಿ ಅಬ್ರಾರ್ ರಶೀದ್ ತಿಳಿಸಿದ್ದಾರೆ. ಇದು ಕೇವಲ ಒಂದು ಕುಟುಂಬಕ್ಕೆ ಸಂಬಂಧಿಸಿದ ವಿಷಯವಲ್ಲ, ಜೈಲಿನಲ್ಲಿರುವ ಎಲ್ಲ ಕೈದಿಗಳ ಸುರಕ್ಷತೆಯ ಬಗ್ಗೆ ಈ ಪ್ರಶ್ನೆ ಕೇಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ತಮ್ಮ ತಂದೆ ಸಂಸತ್ ಸದಸ್ಯರಾಗಿರುವುದರಿಂದ ಅವರ ಸುರಕ್ಷತೆ ಕಾಪಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅಬ್ರಾರ್ ರಶೀದ್ ಒತ್ತಾಯಿಸಿದ್ದಾರೆ.
ಇತ್ತ, ಅವಾಮಿ ಇತ್ತಿಹಾದ್ ಪಕ್ಷವು ಜೈಲಿನೊಳಗೆ ಯಾವ ರೀತಿಯ ದಾಳಿ ನಡೆದಿದೆ ಎಂಬುದನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದೆ. ಜೈಲಿನಲ್ಲಿ ಕಾಶ್ಮೀರಿ ಕೈದಿಗಳನ್ನು ಮಂಗಳಮುಖಿಗಳು ಮತ್ತು ಗ್ಯಾಂಗ್‌ಸ್ಟರ್‌ಗಳ ಜೊತೆ ಇಟ್ಟು ಕಾಶ್ಮೀರಿಗರನ್ನು ಕಿರುಕುಳ ಮತ್ತು ಬ್ಲಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದೆ. ಅಲ್ಲದೆ, ‘ಹೆಚ್‌ಐವಿ ಇರುವ ಮಂಗಳಮುಖಿ ಕೈದಿಗಳ ಜೊತೆ ಇವರನ್ನು ಇಟ್ಟಿರುವುದೇಕೆ?’ ಎಂದು ಪ್ರಶ್ನಿಸಿದೆ.