Monday, April 29, 2024

ಸತ್ಯ | ನ್ಯಾಯ |ಧರ್ಮ

ಗಂಡೆಂಬ ಬೇಡಿಕೆ : ಕಳ್ಳುಬಳ್ಳಿ 9

“ಹೆಣ್ಣು ಮರಿ ಹುಟ್ಟಿ ಬಂದರೆ ಮತ್ತೆಮತ್ತೆ ಮರಿ ಹಾಕುತ್ತದೆ.  ಅಗ ಮನೆ ತುಂಬಾ ಮರಿಗಳು ಎನ್ನುವ ಬೇಸರ ಇರಬಹುದೇನೋ?  ಅದೇ ಗಂಡಾದರೆ ಈ ಯಾವುದೇ ತಲೆಬಿಸಿ ಇರೋದೆಲ್ಲವಲ್ಲ..” ನಳಿನಾ ಚಿಕ್ಕಮಗಳೂರು ಅವರ ಕಳ್ಳುಬಳ್ಳಿ 9 ನೇ ಅಧ್ಯಾಯ

ಮೊನ್ನೆ ಬೆಳಿಗ್ಗೆ ಇನ್ನೂ ಒಂಬತ್ತು ಗಂಟೆ ಕಳೆದಿರಲಿಲ್ಲ.  ನನಗೆ ಪರೀಕ್ಷೆಯ ಒತ್ತಡ ಇದ್ದುದರಿಂದ ಲಗುಬಗೆಯಿಂದ ಹತ್ತಿರದ ಹೊಟೇಲ್ ಒಂದಕ್ಕೆ ತಿಂಡಿ ಕಟ್ಟಿಸಿಕೊಂಡು ಬರಲು ಹೋಗಿದ್ದೆ.  ಆರ್ಡರ್ ತಿಳಿಸಿ ಟೇಬಲ್ ಬಳಿ ಕೂತಿದ್ದಾಗ ಎಳೆ ಬೆಕ್ಕಿನ ದ್ವನಿ ತೇಲಿ ಬಂತು.  ಬಲಕ್ಕೆ ಹೊರಳಿದಾಗ ಮೆಲ್ಲಗೆ ಹೆಜ್ಜೆ ಇಡುತ್ತಾ ಪುಟಾಣಿ ಬೆಕ್ಕು ರಾಗ ಹಾಡಿ ನಡೆದಾಡುತ್ತಿದ್ದದು ಕಂಡು ಬಂತು.  ಕ್ರೀಮ್ ಬಣ್ಣದ ಪಟ್ಟಾ ಪಟ್ಟೆ ಮೈಯ ಅದರ ಅಂದವನ್ನು ಹೊಗಳುತ್ತಾ ಖುಷಿಪಟ್ಟೆ. 

ಹೊಟೇಲ್ ಬಾಗಿನಲ್ಲಿ ನಾಲ್ಕಾರು ಪುರುಷರು ಮಾತನಾಡುತ್ತಿದ್ದರು.  ಅದೂ ಬೆಕ್ಕಿನ ಬಗ್ಗೆನೆ.  ಅಷ್ಟರಲ್ಲಿ ಬೆಕ್ಕು ಆ ಮಧ್ಯವಯಸ್ಕ ಪುರುಷರ ಕಾಲ ಬಳಿ ಕಾಣಿಸಿಕೊಂಡಿತು.  ಅದರಲ್ಲೊಬ್ಬಾತ ‘ಅವನವ್ವನ್ನಾ … ಹಾಕಿರೋ ಮೂರೂ ಹೆಣ್ಣು ಮರಿನೇ ಆಗಬೇಕಾ?  ಅಲ್ಲಾ ಒಂದಾರಾ ಗಂಡಾಗಬಾರದಿತ್ತಾ’? ಎಂದು ಜೋರಾಗೇ ಹೇಳಿದಾಗ ಹಿಂದೆ ತಿರುಗಿ, ಆತನ ಮುಖವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದೆ.  ಆತನ ಅಪೇಕ್ಷೆ ಗಂಡೆಂಬ ಬೇಡಿಕೆಯಾಗಿತ್ತು ಎಂಬುದು ಅತ್ಯಂತ ಸ್ಪಷ್ಟವಾಗುತ್ತಿತ್ತು.

ಹೆಣ್ಣು ಮರಿ ಹುಟ್ಟಿ ಬಂದರೆ ಮತ್ತೆಮತ್ತೆ ಮರಿ ಹಾಕುತ್ತದೆ.  ಅಗ ಮನೆ ತುಂಬಾ ಮರಿಗಳು ಎನ್ನುವ ಬೇಸರ ಇರಬಹುದೇನೋ?  ಅದೇ ಗಂಡಾದರೆ ಈ ಯಾವುದೇ ತಲೆಬಿಸಿ ಇರೋದೆಲ್ಲವಲ್ಲ.

ಸಾಕು ಪ್ರಾಣಿ ಪ್ರಪಂಚದಲ್ಲಿ ಸಹ ಗಂಡಿನ ಬೇಡಿಕೆ ಇದ್ದೇ ಇದೆ.  ಇದು ಹೆಚ್ಚು ಕಾಣಿಸೋದು ಸಾಕು ನಾಯಿ ವಿಚಾರದಲ್ಲಿ. ಸಾಕಿದ  ನಾಯಿಗೆ ಮರಿ ಆಗಬಾರದು ಅಂತಲೇ ಸಂತಾನ ಹರಣ ಇಂಜೆಕ್ಷನ್ ಕೊಡಿಸುವುದು ಕಂಡಿದ್ದೇವೆ.  ಇದೆಲ್ಲಾ ಮರಿ ಸಾಕುವ ಗೊಜಿಗೆ ಹೋಗದ ಮನಸ್ಥಿತಿಗಳಿಂದಲ್ಲವೇ? 

ಹಸು, ಎಮ್ಮೆಗಳು ಕರು ಹಾಕಿದಾಗ ಹೆಣ್ಣೇ ಹುಟ್ಟಲಿ ಎಂದು ದೇವರು ಬೇಡುವ ಜನರು ಇದ್ದಾರೆ.  ಆಗ ಮನೆಯಲ್ಲಿ ಕರಾವು ಇನ್ನೂ ಅಧಿಕವಾಗಿ ಹಣದ ಗಳಿಕೆ ಸಹ ಸಾಧ್ಯವಿದೆ ಎಂಬ ಹಿನ್ನೆಲೆಯಲ್ಲಿ. 

ನಿಸರ್ಗಕ್ಕೆ ಮಾತ್ರ ಹೆಣ್ಣು ಗಂಡೆಂಬ ಬೇಧ ಇಲ್ಲವೇ ಇಲ್ಲ.  ಮನುಷ್ಯ ಯಾವಾಗಲೂ ತನ್ನ ಆದ್ಯತೆಯಂತೆಯೇ ಬದುಕಲು ನೋಡಿತ್ತಾನೆ.  ಅವನಿಗೆ ಬೇಕಾದ್ದು ಮಾತ್ರ ಬೇಕು, ಬೇಡದ್ದು ಬೇಡವೇ ಬೇಡ.

ಎಮ್ಮೆ, ಹಸು ಕರು ಹಾಕಿದಾಗ ಗಂಡಾದರೆ ಅದು ಅಷ್ಟೇನು ಉಪಯುಕ್ತ ಅಲ್ಲ, ಮನೆ ತುಂಬಾ ಎತ್ತು, ಹೋರಿ ಏತಕ್ಕೆ?  ಊಳಲು ಸರಿಯಾದ ಎರಡು ಹೋರಿಗಳು ಸಂತೆಯಿಂದ ತಂದು ಇರಿಸಿಕೊಂಡರೆ ಸಾಕು ಎನ್ನುವ ಮನೋಭಾವನೆ ಇದ್ದವರೂ ಇರುತ್ತಾರೆ.  ಗಂಡು ಕರುಗಳನ್ನು ಬೇರೆಯವರ ಉಪಯೋಗಕ್ಕೆ ಮಾರುವುದೂ ಹೆಚ್ಚು.  ಕಟುಕರೂ ಸಹ ಗಂಡು ಕರುವಿನ ಖರೀದಿಗಾರರೇ.

ರಸ್ತೆಯ ಬದಿಯಲ್ಲಿ ಸಹ ಹೆಣ್ಣು ನಾಯಿಗಳು ಅಧಿಕ ಇರುವ ಏರಿಯಾಗಳಲ್ಲಿ ಕಡೆಗೆ ನಾಯಿ ಕಾಟ ಮೊದಲಾದ ಕಾರಣಗಳಿಂದ ಆ ಹೆಣ್ಣು ಮರಿಗಳನ್ನು ಹೇಗಾದರೂ ದೂರ ಮಾಡುವವರಿದ್ದಾರೆ. 

ನನ್ನ ಬಾಲ್ಯದಲ್ಲಿ ವಾಸವಿದ್ದ ಚಿಕ್ಕಮಗಳೂರು ಪಕ್ಕದ ಹಳ್ಳಿಯಲ್ಲಿ ನನ್ನ ಜೊತೆಯ ಆಟಗಾರರು ಒಂದು ದಿನ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಊರಿನ ಕೆರೆಯ ಬಳಿಗೆ ಹೋಗಲು ಪುಸಲಾಯಿಸಿದರು.  ನಾಕಾರು ಮಕ್ಕಳೊಡನೆ ನಾನೂ ನೇರಳಕಟ್ಟೆಯ ಬಳಿಗೆ ಹೋದಾಗ, ಪ್ಲಾಸ್ಟಿಕ್ ಚೀಲದಿಂದ ನಾಯೊ ಮರಿಗಳನ್ನು ಹೊರಹೆ ತೆಗೆದ ಹುಡುಗರು ಒಂದೊಂದನ್ನೇ ಕತ್ತಿನ ಬಳಿ ಚರ್ಮದಿಂದ ಹಿಡಿದು ನೀರಿನೊಳಗೆ ಎಸೆದರು.  ಆ ಹೆಣ್ಣು ಮರಿಗಳು ಕಾಲು ಆಡಿಸುತ್ತಾ ನೀರಿನೊಳಗೆ ಮುಳುಗಿದಾಗ ಅತಿ ಸುಂದರವಾಗಿ ಕಾಣಿಸಿದುವು‌.  ಏನೋ ಒಂಥರ ಖಾಲಿ ಭಾವನೆಯಿಂದ ಕಣ್ಣು ತುಂಬಿ ಬಂತು.  ಆ ಹುಡುಗರೇಕೆ ಹೀಗೆ ಮಾಡಿದರೆಂದು ಕೇಳಿದರೆ, ಅವರಿಗೆ ಮನೆಯಲ್ಲಿ ತಾಕೀತು ಮಾಡಲಾಗಿತ್ತು ಎಂದಿದ್ದರು.

ಲೋಕೋ ಭಿನ್ನ ರುಚಿ.  ಹೆಣ್ಣು ಗಂಡೆಂಬ ಬೇಧ ಮಾಡುವ ಹಕ್ಕು ಯಾರಿಗೂ ಇಲ್ಲ.  ಆದರೆ ಕಳೆದ ವರ್ಷ ಬೀದಿಯಲ್ಲಿ ಹೆಚ್ಚು ನಾಯಿಗಳಿವೆ ಅಂತ ಅನಾಮಿಕರ್ಯಾರೋ ವಿಷವಿಕ್ಕಿ ನಾಲ್ಕಾರು ಮರಿ ಕೊಂದರು.  ಅವುಗಳಲ್ಲಿ ಹೆಣ್ಣು ಗಂಡು ಎರಡೂ ಇದ್ದಿರಬಹುದು.  ಏಕೆಂದರೆ ತಿಂಡಿಗೆ ಬೆರೆಸಿದ್ದ ವಿಷ ಎಲ್ಲವೂ ತಿಂದಿದ್ದವು.  ನನ್ನ ನಾಲ್ಕು ವರ್ಷದ ಮಗಳಿಗೆ ಈ ನಾಯಿ ಮರಿಗಳ ಸಾವಿಗೆ ಕಾರಣ ವಿವರಿಸುವುದು ಬಹು ಕಷ್ಟಸಾಧ್ಯವಾದ ವಿಚಾರವಾಗಿತ್ತು.  ಮಕ್ಕಳಿಗೆ ಪ್ರಾಣಿ ಅಂದರೆ ಎಲ್ಲಾ ಒಂದೇ.  ಹೆಣ್ಣು ಗಂಡು ಎಂಬ ಬೇಧವೂ ತಿಳಿಯದು.  ಈ ಬೇಧಗಳನ್ನು ನಾವು ಅರ್ಥಮಾಡಿಸಿ  ತಿಳಿಸುವುದು ಬಹು ಕಷ್ಟ.  ಆದರೆ ಅದರ ಪರಿಣಾಮಗಳನ್ನು ಮಾತ್ರ ತೋರಿಸಬಹುದು.

ಪ್ರಾಣಿ ಲೋಕದಲ್ಲೂ ಹೆಣ್ಣು ಗಂಡಿನ ಬೇಧ ಎಣಿಸುವುದು ಸಲ್ಲ.  ಪ್ರತಿಯೊಂದು ಜೀವಿಗೂ ತನ್ನದೇ ಆದ ಬದುಕುವ ಹಕ್ಕು ಇದ್ದೇ ಇದೆ.  ಅದನ್ನು ಕಸಿಯುವ ಮನುಜನದು ಮಿತಿ ಮೀರಿದ ಸ್ವಾರ್ಥ.  ಇಂಥ ಸ್ವಾರ್ಥ ಮೀರಿ ಮಾನವೀಯತೆಯ ಆದರ್ಶ ಬೇಳೆಯಲಿ.

Related Articles

ಇತ್ತೀಚಿನ ಸುದ್ದಿಗಳು