ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಿದ್ದ ಶ್ರೀಲಂಕಾ ಫೈನಲ್ ಪಂದ್ಯದಲ್ಲೂ ಅದೇ ರೀತಿಯ ಸ್ಪಿರಿಟ್ ತೋರಿಸಿ ತನ್ನ ಆರನೇ ಏಷ್ಯಾ ಕಪ್ ಅನ್ನು ಗೆದ್ದುಕೊಂಡಿದೆ.
ಘಟಾನುಘಟಿ ತಂಡ, ಕಪ್ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಭಾರತ ತಂಡ ಪಂದ್ಯಾವಳಿಯಿಂದ ಹೊರಗೆ ಹೋದಮೇಲೆ ಪಾಕಿಸ್ತಾನವೇ ಚಾಂಪಿಯನ್ ಎಂದುಕೊಂಡಿದ್ದ ಎಲ್ಲರ ನಂಬಿಕೆಯನ್ನು ಶ್ರೀಲಂಕಾ ಈ ಮೂಲಕ ಬುಡಮೇಲು ಮಾಡಿದೆ.
ಪಂದ್ಯಾವಳಿ ಶುರುವಾದಾಗ ಶ್ರೀಲಂಕಾ ತಂಡವನ್ನು ಯಾರೂ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಹಾಗೆ ನೋಡಿದರೆ ಲೀಗ್ ಹಂತದಲ್ಲಿ ನಿರ್ಗಮಿಸುವ ತಂಡ ಎಂದೇ ಭಾವಿಸಲಾಗಿತ್ತು. ಶ್ರೀಲಂಕಾ ತಂಡದ ಇತ್ತೀಚಿನ ಪ್ರದರ್ಶನ ಅದಕ್ಕೆ ಕಾರಣವಾಗಿತ್ತು. ತಂಡದಲ್ಲಿ ಪ್ರತಿಭಾವಂತರು ಸಾಕಷ್ಟಿದ್ದರೂ ಒಂದು ತಂಡವಾಗಿ ಗೆಲ್ಲುವ ಪ್ರದರ್ಶನ ಅವರಿಂದ ಬಂದಿರಲಿಲ್ಲ. ಆದರೆ ತಮ್ಮಲ್ಲಿ ಕೇವಲ ಪ್ರತಿಭೆ ಅಷ್ಟೇ ಅಲ್ಲ ಸಮಯಕ್ಕೆ ತಕ್ಕಂತೆ ಆಡುವ ಸಾಮರ್ಥ್ಯ ಕೂಡಾ ಇದೆ ಎಂದು ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಆಟಗಾರರು ಪ್ರೂವ್ ಮಾಡಿದರು.
ಫೈನಲ್ ಪಂದ್ಯ ಕೂಡಾ ಶ್ರೀಲಂಕಾ ಆಟಗಾರರಿಗೆ ಸುಲಭದ ಮಾತಾಗಿರಲಿಲ್ಲ. ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಶ್ರೀಲಂಕಾಗೆ ಉತ್ತಮ ಆರಂಭವೇನೂ ಸಿಗಲಿಲ್ಲ. ಬೇಗನೆ ಎರಡು ವಿಕೆಟ್ ಕಳೆದುಕೊಂಡು ನಿಧಾನಗತಿಯಲ್ಲಿ ಸಾಗುತ್ತಿದ್ದ ತಂಡಕ್ಕೆ ಮತ್ತಷ್ಟು ಆಘಾತ ಕಾದಿತ್ತು. ತಂಡದ ಮೊತ್ತ 58 ಆಗುವಷ್ಟರಲ್ಲಿ ತಂಡದ ನಾಯಕ ಶಾನಕ ಸೇರಿದಂತೆ 5 ಆಟಗಾರರನ್ನು ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು ಶ್ರೀಲಂಕಾ. ಆದರೆ ಆರನೇ ವಿಕೆಟ್ಟಿಗೆ ಎಡಗೈ ಬ್ಯಾಟ್ಸ್ ಮನ್ ರಾಜಪಕ್ಸ ಮತ್ತು ಆಲ್ ರೌಂಡರ್ ಹಸರಂಗ 58 ರನ್ ಕಲೆ ಹಾಕಿ ಪಂದ್ಯದ ಗತಿ ಬದಲಿಸಿದರು. ನಂತರ ರಾಜಪಕ್ಸ ವೈಯಕ್ತಿಕ 71 ರನ್ ಗಳಿಸಿ ತಂಡದ ಮೊತ್ತವನ್ನು 170ಕ್ಕೇರಿಸಿದರು. ಈ ಮೊತ್ತವನ್ನು ಹಿಂಬಾಲಿಸಿದ ಪಾಕ್ ತಂಡಕ್ಕೆ ಮೊದಲ ಓವರ್ ಬೋನಸ್ ಆಗಿ ಪರಿಣಮಿಸಿತು.
ಪಂದ್ಯದ ಮೊದಲ ಓವರ್ ನಲ್ಲಿ ಒಂದೂ ಲೀಗಲ್ ಬಾಲ್ ಮಾಡದೆ ಒಂಭತ್ತು ರನ್ ಗಳ ಗಿಫ್ಟ್ ಕೊಟ್ಟಿದ್ದರು ಶ್ರೀಲಂಕಾ ಬೋಲರ್ ಮಧುಶಂಕಾ. ಆದರೆ ಇದ್ದಕ್ಕಿದ್ದಂತೆ ನಾಯಕ ಬಾಬರ್ ಅಜಮ್ ಮತ್ತು ಫಖರ್ ಜಮಾನ್ ತಮ್ಮ ವಿಕೆಟ್ ಒಪ್ಪಿಸಿದರು. ಇದಾದ ನಂತರ ಮೊಹಮ್ಮದ್ ರಿಜ್ವಾನ್ ಇನ್ನಿಂಗ್ಸ್ ಗೆ ಲಂಗರು ಹಾಕಿ ಇಫ್ತಿಕಾರ್ ಅವರೊಂದಿಗೆ ಹೋರಾಟ ಮುಂದುವರಿಸಿದರು.
ಆದರೆ ಇವರಿಬ್ಬರ ಜೊತೆಯಾಟದಲ್ಲಿ ರನ್ ರೇಟ್ ಸೊರಗಿತ್ತು. ಹಾಗಾಗಿ ಮುಂದಿನ ಬ್ಯಾಟ್ಸ್ ಮನ್ ಗಳಿಗೆ ವೇಗವಾಗಿ ರನ್ ಗಳಿಸುವ ಸವಾಲು ಎದುರಾಗಿತ್ತು. ಇದರ ಪರಿಣಾಮವಾಗಿ 93 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಪಾಕ್ 125 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ನಲುಗಿತು. ಬೋಲಿಂಗ್ ನಲ್ಲೂ ಮಿಂಚಿದ ಹಸರಂಗ ಒಂದೇ ಓವರ್ ನಲಲ್ 3 ವಿಕೆಟ್ ಕಬಳಿಸಿ ಶ್ರೀಲಂಕಾ ಪರ ಮಿಂಚಿದರು.
ಕೊನೆಗೆ 147 ರನ್ ಗಳಿಗೆ ಪಂದ್ಯದ ಕೊನೆಯ ಬಾಲಿನಲ್ಲಿ ಆಲೌಟ್ ಆಗುವುದರೊಂದಿಗೆ ಶ್ರೀಲಂಕಾ ಈ ಬಾರಿಯ ಏಷ್ಯಾ ಕಪ್ ವಿನ್ನರ್ ಆಯಿತು. 71 ರನ್ ಗಳಿಸಿದ ರಾಜಪಕ್ಸ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಉತ್ತಮ ಆಲ್ ರೌಂಡ್ ಪ್ರದರ್ಶನ ತೋರಿ 66 ರನ್ ಗಳಿಸಿ 9 ವಿಕೆಟ್ ಕಿತ್ತ ಹಸರಂಗ ಸರಣಿ ಶ್ರೇಷ್ಟ ಎನಿಸಿಕೊಂಡರು. ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ತನ್ನ ಹಳೆಯ ಖದರ್ ಕಳೆದುಕೊಂಡಿದ್ದ ಶ್ರೀಲಂಕಾ ತಂಡಕ್ಕೆ ಈ ಗೆಲುವು ಮಹತ್ತರವಾದದ್ದು ಎಂದರೆ ತಪ್ಪಿಲ್ಲ.