ಬೆಂಗಳೂರು: ಸರ್ಕಾರಿ ಶಾಲೆಗಳ, ಮಠ ಮಂದಿರಗಳ ಭೂಮಿಗಳನ್ನೂ ವಕ್ಫ್ ಬೋರ್ಡ್ ಕಬಳಿಸುತ್ತಿದೆ. ಕರ್ನಾಟಕದಲ್ಲಿ ಆರಂಭಗೊಂಡಿರುವ ವಕ್ಫ್ ಉಪಟಳ ಈಗ ಕೇರಳ, ಆಂಧ್ರಪ್ರದೇಶ, ತಮಿಳುನಾಡಿಗೂ ವ್ಯಾಪಿಸುತ್ತಿದೆ. ಇದೊಂದು ದಂಧೆಯಾಗಿ ಮಾರ್ಪಟ್ಟಿದೆ. ಇದರ ಮೂಲವಾಗಿರುವ ಸಚಿವ ಜಮೀರ್ ಅಹಮದ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಒಬ್ಬ ಟೋಪಿ ಗಿರಾಕಿ, ಅವರು ಮಸೀದಿ ಒಳಗೆ ಹೋದಾಗ ಟೋಪಿ ಹಾಕಿಕೊಳ್ಳುತ್ತಾರೆ, ಮಸೀದಿಯಿಂದ ಹೊರಬಂದು ಅದೇ ಟೋಪಿಯನ್ನು ರೈತರು ಮತ್ತು ಜನಸಾಮಾನ್ಯರಿಗೆ ಹಾಕುತ್ತಾರೆ ಎಂದು ಅವರು ಹೇಳಿದ್ದಾರೆ.
ಜನರಿಗೆ ಸಿದ್ದರಾಮಯ್ಯನವರ ಮೇಲಿನ ನಂಬಿಕೆಯೇ ಹೊರಟು ಹೋಗಿದೆ. ಎಲ್ಲಾ ರೈತರ ಪಹಣಿಗಳಲ್ಲಿಯೂ ವಕ್ಫ್ ಬೋರ್ಡ್ ಹೆಸರು ತೆಗೆದು ಹಾಕುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ನಾನು ಈ ಕುರಿತು ಗೃಹ ಸಚಿವ, ಪ್ರಧಾನಿ ಹಾಗೂ ಜೆಪಿಸಿಗೂ ಪತ್ರ ಬರೆದಿರುವುದಾಗಿ ಹೇಳಿದ ಅವರು ಜಂಟಿ ಸಮಿತಿ ರಾಜ್ಯಕ್ಕೆ ಬಂದು ಇಲ್ಲಿನ ಪರಿಸ್ಥಿತಿ ಅವಲೋಕಿಸಬೇಕು ಎಂದು ಆಗ್ರಹಿಸಿದರು. ಸಮಿತಿಯನ್ನು ರಚಿಸಿರುವುದೇ ನ್ಯಾಯ ಕೊಡಿಸುವ ಸಲುವಾಗಿ, ಹೀಗಾಗಿ ಅವರು ಇಲ್ಲಿ ಬಾರದೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು “ಸಿದ್ದರಾಮಯ್ಯನವರು ಇದೊಂದು ರಾಜಕೀಯ ಪ್ರೇರಿತ ಹೋರಾಟ ಎಂದಿದ್ದಾರೆ ಆದರೆ ನಮ್ಮದು ಜನಪರ ಹೋರಾಟ. ರೈತರಿಗೆ ನ್ಯಾಯ ಸಿಗುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಅಶೋಕ ಹೇಳಿದರು.