Home ಬ್ರೇಕಿಂಗ್ ಸುದ್ದಿ ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಡ್ಡಗಾಲು : ಸಿದ್ದರಾಮಯ್ಯ ಕಿಡಿ

ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಡ್ಡಗಾಲು : ಸಿದ್ದರಾಮಯ್ಯ ಕಿಡಿ

0

ಕರ್ನಾಟಕ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಅನುಷ್ಠಾನಕ್ಕೆ ತರುತ್ತಿರುವ ಹಂತದಲ್ಲಿ ಈಗ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಡಬೇಕಿದ್ದ ಅಕ್ಕಿಗೆ ಅಡ್ಡಗಾಲು ಹಾಕಿದೆ. ಈ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಬಡವರಿಗೆ ಕೊಡುವ ಅಕ್ಕಿ ವಿಚಾರದಲ್ಲಿ ಬಿಜೆಪಿ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯಕ್ಕೆ ಸಲ್ಲಬೇಕಾದ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದ ಕೇಂದ್ರ ಸರ್ಕಾರ, ಇದೀಗ ತಾರತಮ್ಯ ನಿರ್ಧಾರ ಕೈಗೊಂಡಿದೆ. ಉಚಿತ ಅಕ್ಕಿ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇಂದು ನಡೆದ ತುರ್ತು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಒಂದೊಂದಾಗಿ ಬಿಜೆಪಿ ಅಡ್ಡಗಾಲು ಹಾಕಲು ಮುಂದಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಈ ಹಿಂದೆ ಡೆಪ್ಯುಟಿ ಮ್ಯಾನೇಜರ್​ 7 ಲಕ್ಷ ಟನ್​ ಅಕ್ಕಿ ಸಂಗ್ರಹ ಇದೆ ಎಂದಿದ್ದರು. ಅಕ್ಕಿ ಸಂಗ್ರಹ ಇದ್ದರೂ ಕೇಂದ್ರ ಯಾಕೆ ಪೂರೈಕೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿಯವರು ಬಡವರ ವಿರೋಧಿಗಳು. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಪ್ರತೀ ಪ್ರಜೆಗಳೂ ಅರ್ಥ ಮಾಡಿಕೊಳ್ಳುವ ಕಾಲ ದೂರ ಇಲ್ಲ ಎಂದು ಕಿಡಿಕಾರಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಗ್ಯಾರಂಟಿಯನ್ನು ಯಶಸ್ವಿಯಾಗಿ ಜಾರಿಮಾಡಿದೆ. ಜುಲೈ 1 ರಿಂದ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಮಂಡಳಿ ಉಪ ಪ್ರಧಾನ ವ್ಯವಸ್ಥಾಪಕರಿಗೆ 2.28 ಲಕ್ಷ ಮೆ.ಟನ್ ಅಗತ್ಯವಿದೆ ಎಂದು ಕೋರಿ ಜೂನ್‌ 9 ರಂದೇ ಪತ್ರ ಬರೆಯಲಾಗಿತ್ತು. ಇದಕ್ಕೆ ಜೂನ್‌ 12 ರಂದು ಭಾರತೀಯ ಆಹಾರ ನಿಗಮವು ಒಪ್ಪಿಗೆ ಸೂಚಿಸಿ ಕ್ವಿಂಟಾಲ್‌ ಗೆ 3400 ರೂ. ದರದಲ್ಲಿ ಅಕ್ಕಿ ಪೂರೈಕೆ ಮಾಡವುದಾಗಿ ಪತ್ರ ಬರೆದಿತ್ತು. ಆದರೆ ಈಗ ಕೇಂದ್ರ ಬಿಜೆಪಿ ಪಕ್ಷ ಇಲ್ಲದ ಸಮಸ್ಯೆ ತಂದು ಬಡವರಿಗೆ ನೀಡುವ ಅಕ್ಕಿಯ ವಿಷಯದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಅಕ್ಕಿ ಬೆಳೆಯುವ ರಾಜ್ಯಗಳಾದ ಪಂಜಾಬ್ ನ ಸರ್ಕಾರವನ್ನು ಈಗಾಗಲೇ ಆಹಾರ ಸಚಿವ ಕೆ‌.ಹೆಚ್.ಮುನಿಯಪ್ಪ ಸಂಪರ್ಕಿಸಿದ್ದಾರೆ. ಪಂಜಾಬ್ ನಲ್ಲಿ ಅಷ್ಟು ಅಕ್ಕಿ ಸಂಗ್ರಹ ಇಲ್ಲದ ಹಿನ್ನೆಲೆಯಲ್ಲಿ ತೆಲಂಗಾಣ, ಆಂಧ್ರ, ಛತ್ತಿಸ್‍ಗಡ್, ಹರಿಯಾಣದವರಿಗೆ ಈಗಾಗಲೇ ಸಂಪರ್ಕ ಮಾಡಲಾಗಿದೆ. ನಾಳೆ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ತೆಲಂಗಾಣ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ. ಅಂತೆಯೇ ಛತ್ತೀಸ್‌ಗಢ ರಾಜ್ಯದಿಂದಲೂ ಲಭ್ಯವಿರುವ ಅಕ್ಕಿಯ ಮಾಹಿತಿ ಇಂದು ಸಂಜೆಯೊಳಗೆ ಲಭಿಸಲಿದೆ. ನಾಳೆ ಸಂಜೆಯೊಳಗೆ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಅಕ್ಕಿಯ ಪ್ರಸ್ತಾಪಕ್ಕೆ ಜೂನ್ 12 ರಂದು ಕೇಂದ್ರ ಒಪ್ಪಿಗೆ ಸೂಚಿಸಿ, ಈಗ ಅಕ್ಕಿ ಇಲ್ಲ ಎಂಬುದು ಸ್ಪಷ್ಟವಾಗಿ ಇವರು ಬಡವರ ವಿರೋಧಿ ಎಂಬುದನ್ನು ಸಾಭೀತುಪಡಿಸಿದಂತೆ. ಕೇಂದ್ರ ಸರ್ಕಾರ ಉಚಿತವಾಗಿಯೇನೂ ಅಕ್ಕಿ ನೀಡುವುದಿಲ್ಲ ನಾವು ಹಣ ಕೊಟ್ಟೇ ಕೊಂಡುಕೊಳ್ಳುವುದು. ಇತರರಿಗೆ ಕೊಡುವ ರೀತಿಯಲ್ಲಿ ನಮಗೂ ಕೊಡುತ್ತಿದ್ದರು. ಆದರೆ ಈಗ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೀಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಅವರು ಬಂದಿದ್ದಾರೆ. ಈಗಲೂ ನಾವು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಈ ರೀತಿ ಮಾಡಿರುವುದರಿಂದ ಇದೊಂದು ಷಡ್ಯಂತ್ರ ಎಂದೇ ಪರಿಗಣಿಸಬೇಕಾಗುತ್ತದೆ ಎಂದರು.

You cannot copy content of this page

Exit mobile version