ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ದಿನದಿಂದ ದಿನಕ್ಕೆ ಲಂಚದ ಪ್ರಮಾಣ ಏರಿಕೆಯಾಗುತ್ತಿರುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೋವಿಡ್ ಕಾಲದಲ್ಲಿ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಪರಿಹಾರ ನೀಡಲು ನಿಗದಿಪಡಿಸಿದ್ದ ರೂ.103.47 ಕೋಟಿ ಹಣದಲ್ಲಿ ರೂ.31.14 ಕೋಟಿಯನ್ನು ಖಾಸಗಿ ಶಾಲೆಗಳ ಶಿಕ್ಷಣ ಹಕ್ಕು ಕಾಯಿದೆ (ಆರ್.ಟಿ.ಇ) ಶುಲ್ಕ ಮರುಪಾವತಿಗೆ ನೀಡಿದ್ದಿರಿಲ್ಲಾ? ಇದು ಯಾರ ಮೇಲಿನ ಕಾಳಜಿಯಿಂದ ಎಂದು ಪ್ರಶ್ನಿಸಿದ್ದಾರೆ.
ಖಾಸಗಿ ಶಾಲೆಗಳ ಅಕ್ರಮಗಳ ವಿರುದ್ಧ ಸಮರ ಸಾರಿದವರಂತೆ ಹೇಳಿಕೆ ನೀಡುತ್ತಿರುವ ಸಚಿವ ಬಿ.ಸಿ. ನಾಗೇಶ್ ಅವರೇ, ಕೋವಿಡ್ ಪರಿಹಾರದ ಹಣವನ್ನು ಖಾಸಗಿ ಶಾಲೆಗಳ ಆರ್.ಟಿ.ಇ ಶುಲ್ಕ ಮರುಪಾವತಿಗೆ ದುರ್ಬಳಕೆ ಮಾಡಿರುವುದು ಯಾರ ಮೇಲಿನ ಪ್ರೀತಿಯಿಂದ? ಕೋವಿಡ್ ಪರಿಹಾರಕ್ಕಾಗಿಯೇ ನಿಗದಿಪಡಿಸಿದ್ದ ಹಣವನ್ನು ಪೂರ್ಣವಾಗಿ ಆ ಉದ್ದೇಶಕ್ಕಾಗಿಯೇ ಬಳಸದಿರಲು ಕಾರಣವೇನು? ಆರ್.ಟಿ.ಇ ಮರುಪಾವತಿಗಾಗಿಯೇ 2022-23ನೇ ಸಾಲಿಗೆ ನಿಗದಿಪಡಿಸಿದ್ದ ರೂ.500 ಕೋಟಿ ಹಣವನ್ನು ನಿಮ್ಮ ಇಲಾಖೆ ಪೂರ್ಣವಾಗಿ ಬಳಸಿಕೊಂಡಿದೆಯೇ ? ಎಂದು ಪೆಶ್ನೆಗಳ ಸರಮಾಲೆ ಹಾಕಿದ್ದಾರೆ.
ಶಾಲಾ ಮಕ್ಕಳ ಶೂ ಖರೀದಿಗೆ ಐದು ವರ್ಷಗಳ ಹಿಂದಿನ ದರದಲ್ಲಿ ಹಣ ನೀಡಿ ಶಿಕ್ಷಕರನ್ನು ದಾನಿಗಳ ಮುಂದೆ ಕೈಯೊಡ್ಡುವಂತೆ ಮಾಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೇ, ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆಗೆ ತಿಂಗಳಿಗೆ ರೂ.93,000 ನೀಡುತ್ತಿದ್ದೀರಲ್ಲಾ ಇದು ನ್ಯಾಯವೇ? ಎಂದು ವಾಗ್ದಾಳಿ ನಡೆಸಿದ್ದಾರೆ.
ಅತಿಥಿ ಉಪನ್ಯಾಸಕರು ಕನಿಷ್ಠ 6000 ರೂಪಾಯಿಯಷ್ಟು ಗೌರವಧನ ಹೆಚ್ಚಿಸಿ ಎಂದು ಕೇಳಿದರೆ ರೂ.3000 ಕೊಟ್ಟು ಬಾಯಿ ಮುಚ್ಚಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೇ, ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಟೆಂಡರ್ ಕರೆಯದೆ ಮೂರು ತಿಂಗಳಿಗೆ ರೂ.2,83,200 ಖರ್ಚು ಮಾಡುವುದು ಅನ್ಯಾಯ ಅಲ್ಲವೇ? ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.