ಬೆಂಗಳೂರು : ಹಿಂದಿನ ಕಾಂಗ್ರೆಸ್ ಆಡಳಿತಾವಧಿಯ ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಕೆ ಕೈಗೊಂಡು ಪ್ರತಿಪಕ್ಷ ಕಾಂಗ್ರೆಸ್ಸಿಗೆ ತಿರುಗೇಟು ನೀಡಲು ಬಿಜೆಪಿ ಸಜ್ಜಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅರ್ಜಿಯೇ ಹಾಕದೆ ಸರ್ಕಾರಿ ಉದ್ಯೋಗಿಯಾಗಬಹುದಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 14 ಜನರು ಅಕ್ರಮವಾಗಿ ಶಿಕ್ಷಕರಾಗಿ ನೇಮಕಾತಿಯಾಗಿದ್ದರು. ಈ ಅಕ್ರಮ ನೇಮಕಾತಿಗೆ ಕಾಂಗ್ರೆಸ್ ಫಿಕ್ಸ್ ಮಾಡಿದ ಕಮಿಷನ್ ಪರ್ಸಂಟೇಜ್ ಎಷ್ಟು? ಎಂದು ಬಿಜೆಪಿ ಪ್ರಶ್ನಿಸಿದೆ.
ತಾಕತ್ತಿದ್ದರೆ ನಮ್ಮ ಹಗರಣಗಳನ್ನು ಬಯಲಿಗೆಳೆಯಿರಿ ಎನ್ನುವ ಸಿದ್ದರಾಮಯ್ಯ ಅವರೇ, ಹಗರಣ ಮಾಡಿ, ತನಿಖೆಗೆ ಹೆದರಿ ತನಿಖಾ ಸಂಸ್ಥೆಗಳನ್ನು ಮುಚ್ಚುವಾಗ ನಿಮ್ಮ ಧಮ್ ಎಲ್ಲಿ ಹೋಗಿತ್ತು? ಶಿಕ್ಷಕರ ನೇಮಕಾತಿ ಹಗರಣ, ಅರ್ಕಾವತಿ ರೀಡೂ ಹಗರಣ, ಇಂಧನ ಇಲಾಖೆ ಹಗರಣ ಒಂದೇ ಎರಡೇ, ಕಾಂಗ್ರೆಸ್ ಮಾಡಿದ್ದೆಲ್ಲವೂ ಹಗರಣವೇ ಎಂದು ಬಿಜೆಪಿ ಕಿಡಿಕಾರಿದೆ.
ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮ ಅವಧಿಯಲ್ಲಿ ನಡೆದ 2014-15 ರ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಹಗರಣ ಒಂದೊಂದಾಗಿಯೇ ಹೊರಬೀಳುತ್ತಿದೆ. ಕಾಂಗ್ರೆಸ್ ಸರ್ಕಾರ 100% ಕಮಿಷನ್ ಸರ್ಕಾರ ಎಂಬ ನಮ್ಮ ವಾದದಲ್ಲಿ ಏನು ತಪ್ಪಿದೆ? ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡಿದೆ.