ಹೊಸದಿಲ್ಲಿ: ಗಾಯಕ ಸಿಧು ಮೂಸೆ ವಾಲಾ ಅವರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದ ಕೆನಾಡಾ ಮೂಲದ ಭೂಗತ ಪಾತಕಿ ಗೋಲ್ಡಿ ಬ್ರಾರ್‌ನನ್ನು ಕ್ಯಾಲಿಫೊರ್ನಿಯದಲ್ಲಿ ಅಮೇರಿಕಾದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶುಕ್ರವಾರ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ʼರಾಜ್ಯದ ಮುಖ್ಯಸ್ಥನಾಗಿ, ಕೆನಡಾದಲ್ಲಿ ಕುಳಿತಿರುವ ದೊಡ್ಡ ದರೋಡೆಕೋರ ಗೋಲ್ಡಿ ಬ್ರಾರ್‌ನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ, ನಾವು ಅವನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದೆವು. ಹೀಗಾಗಿ ಅಮೇರಿಕಾದ ಅಧಿಕಾರಿಗಳು ಅವನನ್ನು ಭಾರತಕ್ಕೆ ಹಸ್ತಾಂತರಿಸುತ್ತಿದ್ದು, ಕಾನೂನಿನ ನಿಯಮದ ಪ್ರಕಾರ ಅವರನ್ನು ಶಿಕ್ಷಿಸಲಾಗುವುದುʼ ಎಂದು ಅವರು ಹೇಳಿದ್ದಾರೆ.
ಬ್ರಾರ್‌ನನ್ನು ಗಡೀಪಾರು ಮಾಡುವ ಅಗತ್ಯವಿದೆಯೇ ಎಂದು ಕ್ಯಾಲಿಫೋರ್ನಿಯಾ ಪೊಲೀಸರು ಭಾರತ ಸರ್ಕಾರವನ್ನು ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ʼನಾವು ಈ ವಿಷಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುತ್ತಿದ್ದೇವೆ, ಇದರಿಂದ ಇತರರನ್ನು ಇಲ್ಲಿಗೆ ಕರೆತರಲಾಗುತ್ತಿದ್ದು, ಅವನನ್ನು ವಿಚಾರಣೆಗೊಳಪಡಿಸಲಾಗುತ್ತದೆ. ಹೀಗಾಗಿ ಗೋಲ್ಡಿ ಬ್ರಾರ್ ಶೀಘ್ರದಲ್ಲೇ ಪಂಜಾಬ್ ಪೊಲೀಸರ ವಶದಲ್ಲಿರಲಿದ್ದಾರೆʼ ಎಂದು ಭಗವಂತ್ ಮಾನ್ ತಿಳಿಸಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಸ್ಪರ್ಧಿಸಿದ್ದ ಮೂಸೆ ವಾಲಾ ಅವರನ್ನು ಮೇ 29 ರಂದು ಮಾನಸಾದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಪಂಜಾಬಾನಾ ಆಮ್ ಆದ್ಮಿ ಪಕ್ಷದ ಸರ್ಕಾರವು ಗಾಯಕ ಸೇರಿದಂತೆ 424 ಜನರಿಗೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ ಈ ದಾಳಿ ನಡೆದಿದೆ ಎನ್ನಲಾಗಿದೆ.
ಮೂಸೆ ವಾಲಾ ಹತ್ಯೆಯ ನಂತರ, 2021 ರಲ್ಲಿ ಅಕಾಲಿದಳದ ನಾಯಕ ವಿಕ್ಕಿ ಮಿಡುಖೇರಾ ಅವರ ಹತ್ಯೆಗೆ ಪ್ರತೀಕಾರವಾಗಿ ಇದು ನಡೆದಿದೆ ಎಂದು ಬ್ರಾರ್ ಫೇಸ್ಬುಕ್ ಪೋಸ್ಟ್ನಲ್ಲಿ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದ.