ಕನ್ನಡ ಭಾಷಾಭಿಮಾನವನ್ನು ಪಹಲ್ಗಾಮ್ ದಾಳಿಗೆ ಹೋಲಿಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾದ ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಹೇಳುವಂತೆ ಕೇಳಿದ ಕನ್ನಡಿಗರನ್ನು ಪೆಹಲ್ಗಾಮ್ ಉಗ್ರರಿಗೆ ಹೋಲಿಕೆ ಮಾಡಿದ ಪರಿಣಾಮ ಈ ನಿಷೇಧ ಹೇರಲಾಗಿದೆ.
ವಿವಾದಾತ್ಮಕ ಹೇಳಿಕೆ ವಿಚಾರದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗಂಭೀರವಾಗಿ ಕ್ರಮ ಜರುಗಿಸುವ ಬಗ್ಗೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ವಾಣಿಜ್ಯ ಮಂಡಳಿಯ ಕುಮಾರ್, ಸಂಗೀತ ನಿರ್ದೇಶಕ ಧರ್ಮವಿಶ್, ನಿರ್ದೇಶಕರ ಸಂಘದ ಅಧ್ಯಕ್ಷ ವಿಶ್ವನಾಥ್ , ಗಾಯಕಿ ಶಮಿತಾ ಮಲ್ನಾಡ್ ಸೇರಿದಂತೆ ಹಲವು ಮಂದಿ ಸದಸ್ಯರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಸೋನು ನಿಗಮ್ ಅವರ ಹೇಳಿಕೆ ಅಕ್ಷರಶಃ ಖಂಡನಾರ್ಹ. ಒಮ್ಮೆ ವೈರಲ್ ಆದ ವಿಚಾರವನ್ನು ಮತ್ತೆ ಮತ್ತೆ ಲೈವ್ ಬಂದು ಅವರ ಮಾತನ್ನ ಸಮರ್ಥಿಸಿಕೊಂಡಿದ್ದು ಸಹ ಅವರ ಅಸಹನೆಗೆ ಸಾಕ್ಷಿ. ಹೀಗಾಗಿ ಈ ಕ್ಷಣದಿಂದಲೇ ಅವರ ಮೇಲೆ ಇಡೀ ಚಿತ್ರರಂಗ ಅಸಹಕಾರ ಹೇರಲಾಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಕನ್ನಡಿಗರು ಅವರ ಜೊತೆಗೆ ಯಾವುದೇ ಚಟುವಟಿಕೆ ಮಾಡಬಾರದು. ಅವರನ್ನ ಕರ್ನಾಟಕ ಇಂಡಸ್ಟ್ರಿಯಿಂದ ಅಸಹಕಾರ ಮಾಡ ಬೇಕು ಅಂತ ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಅವರ ವಿರುದ್ದ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಚರ್ಚಿಸಲಾಗುತ್ತದೆ. ಅಲ್ಲಿಯವರೆಗೆ ಯಾವುದೇ ಕಾರ್ಯಕ್ರಮಕ್ಕೂ ಅವರನ್ನ ಕರೆಯಬಾರದು. ಸಿನಿಮಾಗಳಲ್ಲಿ ಅವರ ಬಳಿ ಹಾಡಿಸಬಾರದು. ಅವರ ಕಡೆಯಿಂದ ಲೈವ್ ಕೂಡ ಕಾರ್ಯಕ್ರಮ ಮಾಡಿಸಬಾರದು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಯಾರಾದರೂ ಅವರನ್ನ ಕರೆದು ಹಾಡು ಹಾಡಿಸಿದರೆ ಅವರ ವಿರುದ್ಧವೂ ಕ್ರಮಕೈಗೊಳ್ಳುತ್ತೇವೆ. ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ. ಸದ್ಯಕ್ಕೆ ಅಸಹಕಾರ ಎಂದು ತೀರ್ಮಾನ ಮಾಡಿದ್ದೇವೆ. ಇದೇ ವಿಚಾರಕ್ಕೆ ಮುಂದಿನ ದಿನಗಳಲ್ಲಿ ಎಲ್ಲರನ್ನ ಆಹ್ವಾನಿಸುತ್ತೇವೆ ಎಂದು ನರಸಿಂಹಲು ಹೇಳಿದ್ದಾರೆ.
ಅವರನ್ನ ಬ್ಯಾನ್ ಮಾಡಬೇಕಾ? ಎಷ್ಟು ದಿನ ಬ್ಯಾನ್ ಮಾಡಬೇಕು? ಯಾವ ರೀತಿ ಅವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ತಿಳಿಸಿದ್ದಾರೆ.