ಧರ್ಮಸ್ಥಳ ಗ್ರಾಮದಲ್ಲಿ ಅಕ್ರಮವಾಗಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಸಾಕ್ಷಿದಾರರು ಎಂದು ಪರಿಗಣಿಸಿರುವ ಪುರಂದರ ಗೌಡ ಮತ್ತು ತುಕಾರಾಂ ಗೌಡ ಅವರ ಸಾಕ್ಷಿಗಳನ್ನು ತನಿಖೆಗೆ ಪೂರಕವಾಗಿ ತೆಗೆದುಕೊಂಡು ತನಿಖೆ ನಡೆಸಲು ಎಸ್ಐಟಿ ತೀರ್ಮಾನಿಸಿದೆ. ಅದರಂತೆ ಧರ್ಮಸ್ಥಳದ ಬಂಗ್ಲೆ ಗುಡ್ಡವನ್ನು ಮತ್ತೊಮ್ಮೆ ಶೋಧಿಸಲು ಈಗ ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.
ಸ್ಥಳೀಯರಾದ ಪುರಂದರ ಗೌಡ ಹಾಗೂ ತುಕಾರಾಮ್ ಗೌಡ ಎಂಬ ಇಬ್ಬರು ಸಾಕ್ಷಿದಾರರು, ನೇತ್ರಾವತಿ ಕಾಡಿನಲ್ಲಿ ಚಿನ್ನಯ್ಯ ಶವವನ್ನು ಹೂಳುವಾಗ ನೋಡಿದ್ದೇವೆ ಎಂದು ಎಸ್‌ಐಟಿಗೆ ದೂರು ನೀಡಿದ್ದರು. ಆದರೆ, ಆ ದೂರನ್ನು ಎಸ್ಐಟಿ ಪರಿಶೀಲನೆ ನಡೆಸದ ಹಿನ್ನೆಲೆಯಲ್ಲಿ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದ ಪರಿಣಾಮ ಈಗ ಹೈಕೋರ್ಟ್ ನಿರ್ದೇಶನದ ಮೇರೆಗೆ ಎಸ್ಐಟಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.
ಈಗಾಗಲೇ ಸೌಜನ್ಯ ಅವರ ಮಾವ ಧರ್ಮಸ್ಥಳ ಗ್ರಾಮದ ಪಾಂಗಾಳದ ವಿಠಲ ಗೌಡ ಅವರು ಬಂಗ್ಲೆ ಗುಡ್ಡದ ಮೇಲ್ಬಾಗದಲ್ಲೇ ಮನುಷ್ಯರ ಕಳೆಬರ ನೋಡಿದ್ದರೂ ಎಸ್ಐಟಿ ಅಧಿಕಾರಿಗಳು ಪರಿಗಣಿಸಿಲ್ಲ ಎಂದು ದೂರಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮತ್ತೊಮ್ಮೆ ಬಂಗ್ಲೆ ಗುಡ್ಡ ಶೋಧಿಸಲು ಎಸ್ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮೂಲದಿಂದ ಬಂಗ್ಲೆ ಗುಡ್ಡ ಅರಣ್ಯ ಇಲಾಖೆಗೆ ಸೇರಿರುವ ಹಿನ್ನೆಲೆಯಲ್ಲಿ ಈ ಪ್ರದೇಶದ ಶೋಧಕ್ಕೆ ಅರಣ್ಯ ಇಲಾಖೆ ಅನುಮತಿ ಬೇಕಿದೆ. ಹೀಗಾಗಿ ಅರಣ್ಯ ಅಧಿಕಾರಿಗಳ ಅನುಮತಿ ಅಥವಾ ಉಪಸ್ಥಿತಿಯಲ್ಲೇ ಮರು ಶೋಧ ಕಾರ್ಯ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.