ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯನ ಸೂಚನೆ ಮೇರೆಗೆ ನಡೆದ ಸ್ಥಳ ಪರಿಶೀಲನೆ ನಂತರ ಇಂದು ಮೂರನೇ ಬಾರಿಗೆ ಎಸ್ಐಟಿ ಅಧಿಕಾರಿಗಳು ಬಂಗ್ಲೆಗುಡ್ಡಕ್ಕೆ ಭೇಟಿ ನೀಡಿದ್ದಾರೆ. ಸೌಜನ್ಯ ಸೋದರ ಮಾವ ವಿಠಲ ಗೌಡ ಅವರ ಹೇಳಿಕೆ ನಂತರದ ಈ ಭೇಟಿಯ ಬಗ್ಗೆ ಕುತೂಹಲ ಮೂಡಿಸಿದೆ.
ಪ್ರಾಥಮಿಕ ಮಾಹಿತಿಯಂತೆ ಎಸ್‌ಐಟಿ ಅಧಿಕಾರಿಗಳು ಲೋಕೋಪಯೋಗಿ ಅಧಿಕಾರಿಗಳ ಜೊತೆಗೆ ಬಂದು ಸೌಜನ್ಯಾ ಮಾವ ವಿಠಲ ಗೌಡ ತೋರಿಸಿರುವ ಸ್ಥಳದ ಸ್ಕೆಚ್ ತಯಾರು ಮಾಡಲು ಭೇಟಿ ನೀಡಿದ್ದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಅಳತೆ ಟೇಪ್, ಪುಸ್ತಕ ಪೆನ್ ಹಿಡಿದು ಮಾರ್ಕಿಂಗ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದೂರುದಾರ ಚಿನ್ನಯ್ಯನ ನಂತರ ಬಂಗ್ಲೆ ಗುಡ್ಡ ಸ್ಥಳದಲ್ಲಿ ಇನ್ನೂ ಪರಿಶೀಲನೆ ಸರಿಯಾಗಿ ಆಗಿಲ್ಲ , ಸ್ವತಃ ನಾವೇ ಖುದ್ದು ಹಲವು ಅಸ್ಥಿಪಂಜರಗಳನ್ನು ನೋಡಿದ್ದಾಗಿ ಸೌಜನ್ಯ ಮಾವ ವಿಠಲ ಗೌಡ ಹೇಳಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮತ್ತೆ ಬಂಗ್ಲೆಗುಡ್ಡದ ಪರಿಶೀಲನೆ ನಡೆಸಿದ್ದರು. ಆ ಸಂದರ್ಭದಲ್ಲಿ ಹಲವು ಮಾನವ ಅಸ್ಥಿಪಂಜರಗಳು ಸಿಕ್ಕಿದ್ದವು.
ಅಲ್ಲೆ ಸಿಕ್ಕ ಭೂಮಿ ಮೇಲಿನ ಅಸ್ಥಿಪಂಜರಗಳನ್ನು ಆರಿಸಿ ತಂದಿದ್ದ ಅಧಿಕಾರಿಗಳು, ಇದೀಗ ಕೆಲ ದಿನಗಳ ಬಿಡುವು ಕೊಟ್ಟ ಬಳಿಕ ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿ ಮ್ಯಾಪಿಂಗ್ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಎಲ್ಲರೂ ಬಂದು ದೂರು-ಪ್ರತಿದೂರು ಕೊಡುತ್ತಿರುವ ಹಿನ್ನೆಲೆಯಲ್ಲಿ ತನಿಖೆ ಇನ್ನಷ್ಟು ವಿಳಂಬ ಆಗುತ್ತಿದೆ. ಇದನ್ನು ಎಸ್‌ಐಟಿ ತಪ್ಪಿಸಬೇಕು. ಹೀಗಾಗಿ ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಎಸ್ಐಟಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಈಗಾಗಲೇ ಆರಿಸಿ ಪ್ರಯೋಗಾಲಯಕ್ಕೆ ಕಳಿಸಿರುವ ಮೂಳೆಗಳ ಎಫ್‌ಎಸ್‌ಎಲ್ ರಿಪೋರ್ಟ್‌ಗಳು ಇನ್ನಷ್ಟೆ ಬರಬೇಕಿದೆ ಎಂದು ಗೃಹಸಚಿವರು ಹೇಳಿದ್ದಾರೆ.