Home ಅಂಕಣ ಹೆಂಡತಿಯ ಮುಖ ನೋಡುತ್ತಾ ಕುಳಿತು…

ಹೆಂಡತಿಯ ಮುಖ ನೋಡುತ್ತಾ ಕುಳಿತು…

0

“..ಮನೆಯಲ್ಲಿ ಹೆಂಡತಿಯ ಜೊತೆ ಕಾಲ ಕಳೆಯುವುದು ಎನ್ನುವುದನ್ನು ಅನ್‌ ಪ್ರೊಡಕ್ಟಿವ್‌ ಎನ್ನುವುದಾದರೆ, ಮಹಿಳೆಯ ಪಾತ್ರ ಮನೆಯಲ್ಲಾಗಲೀ, ಬದುಕಲ್ಲಾಗಲೀ ಏನೂ ಇಲ್ಲ, ಆಕೆ ಕೇವಲ ಮನೆಯ ಚಾಕರಿಗಳು ಮಾಡಿ, ಮಕ್ಕಳನ್ನು ಹಡೆಯುವ ಯಂತ್ರವಾಗಿರುತ್ತಾಳೆ…” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ

ಮನೆಯಲ್ಲಿ ಕುಳಿತು ಎಷ್ಟು ಹೊತ್ತು ಹೆಂಡತಿಯ ಮುಖ ನೋಡಿಕೊಂಡು ಇರುತ್ತೀರಿ; ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದು ಎಲ್‌ ಆಂಡ್‌ ಟಿ ಅಧ್ಯಕ್ಷರು ಹೇಳಿಕೆ ಕೊಟ್ಟಿರುವುದು ಸುದ್ದಿಯಾಗಿದೆ. ಈ ನಿಟ್ಟಿನಲ್ಲಿ ಉತ್ತಮವಾಗಿ ಕೆಲಸ ಮಾಡಲು ಮಾನಸಿಕ ಆರೋಗ್ಯವೂ ಮುಖ್ಯ ಎಂದು ನಟಿ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ನೀಡಿರುವುದು ಸ್ವಾಗತಾರ್ಹ.

ಹೆಂಡತಿಯ ಮುಖ ನೋಡಿಕೊಂಡು ಇರುವುದು ಎನ್ನುವ ಒಂದು ವಾಕ್ಯವೇ ಪುರುಷ ಪ್ರಧಾನ ವ್ಯವಸ್ಥೆಯ ಬೇರುಗಳು ಎಷ್ಟು ಆಳಕ್ಕೆ ಹಬ್ಬಿವೆ ಎನ್ನುವುದನ್ನು ತೋರಿಸುತ್ತವೆ. ಎಷ್ಟು ಹೊತ್ತು ತಾನೇ ಹೆಂಡತಿಯನ್ನು ನೋಡಿಕೊಂಡು ಇರುತ್ತೀರಿ, ಬಂದು ಕೆಲಸ ಮಾಡಿ ಎನ್ನುವುದು ಕೆಲಸ ಮತ್ತು ವೈಯಕ್ತಿಕ ಬದುಕಿನ ಹೊಂದಾಣಿಕೆಯನ್ನು ಪ್ರಶ್ನಿಸುವುದಲ್ಲದೆ, ಪುರುಷ ಪ್ರಧಾನ ವ್ಯವಸ್ಥೆ ಗಂಡಿನ ಮತ್ತು ಹೆಣ್ಣಿನ ಮೇಲೆ ಹೇರಿರುವ ಅಭಿಪ್ರಾಯಗಳನ್ನೂ ಸೂಚಿಸುತ್ತದೆ. ಗಂಡು ಮಾತ್ರವೇ ದುಡಿಯುವುದು ಎನ್ನುವುದರ ಜೊತೆಗೆ ಹೆಣ್ಣಿನ ಕೊಡುಗೆ ಏನೂ ಇಲ್ಲ ಎನ್ನುವ ಭಾವನೆಯನ್ನು ಹೇರುವ ಜೊತೆಗೆ ಗಂಡಿಗೆ ದುಡಿಯುವುದರ ಹೊರತಾಗಿ ಬೇರೆ ಬದುಕೇ ಇಲ್ಲ ಎನ್ನುವುದನ್ನೂ ಹೇರುತ್ತದೆ. ಮನೆ, ಮನೆಯವರ ಜೊತೆ ಸಂತೋಷವಾಗಿ ಸಮಯ ಕಳೆದಷ್ಟೂ, ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ, ಮಾನಸಿಕವಾಗಿ ಆರೋಗ್ಯವಂತನಾಗಿರುವ ವ್ಯಕ್ತಿ ಕೆಲಸದ ಸ್ಥಳದಲ್ಲಿ ಇನ್ನಷ್ಟು ಕೊಡುಗೆ ನೀಡಬಲ್ಲ ಎನ್ನುವುದು ಹಿಂದಿನಿಂದಲೂ ಬಂದ ಅರಿವು.

ಮನೆಯಲ್ಲಿ ಹೆಂಡತಿಯ ಜೊತೆ ಕಾಲ ಕಳೆಯುವುದು ಎನ್ನುವುದನ್ನು ಅನ್‌ ಪ್ರೊಡಕ್ಟಿವ್‌ ಎನ್ನುವುದಾದರೆ, ಮಹಿಳೆಯ ಪಾತ್ರ ಮನೆಯಲ್ಲಾಗಲೀ, ಬದುಕಲ್ಲಾಗಲೀ ಏನೂ ಇಲ್ಲ, ಆಕೆ ಕೇವಲ ಮನೆಯ ಚಾಕರಿಗಳು ಮಾಡಿ, ಮಕ್ಕಳನ್ನು ಹಡೆಯುವ ಯಂತ್ರವಾಗಿರುತ್ತಾಳೆ. ಒಬ್ಬ ಗಂಡಿನ ಬದುಕಿನಲ್ಲಿನ ಭಾವನಾತ್ಮಕ, ವೈಚಾರಿಕ ಸಾಂಗತ್ಯಕ್ಕೆ ಹೆಣ್ಣು ನೀಡುವ ಕೊಡುಗೆಯನ್ನು ಸಂಪೂರ್ಣವಾಗಿ ಅಲಕ್ಷಿಸುವ ಮನಸ್ಥಿತಿಗಳಿಗೆ ಹೆಣ್ಣು ಭೋಗದ ವಸ್ತುವೂ ಅಲ್ಲ, ಶೋಕೇಸಿನ ಗೊಂಬೆಯೂ ಅಲ್ಲ, ಜೊತೆಗೆ ಹೆಂಡತಿಯ ಜೊತೆ ಸಮಯ ಕಳೆಯುವುದು ನಾಚಿಕೆಗೇಡಿನ ವಿಷಯವೂ ಅಲ್ಲ ಎನ್ನುವುದನ್ನು ತಿಳಿಸಬೇಕಿದೆ.

ಮನೆಯಲ್ಲಿರುವುದರ ಅರ್ಥ ಹೆಂಡತಿಯ ಮುಖವನ್ನೇ ನೋಡುತ್ತಿರುವುದು ಎನ್ನುವುದಾದರೆ ಹೆಣ್ಣು ಕೇವಲ ವಸ್ತುವಷ್ಟೇ. ಅಥವಾ ಹೆಣ್ಣು ಕೇವಲ ಗಂಡ ತನ್ನನ್ನು ನೋಡುತ್ತಾ ಇರಲಿ ಎಂದಷ್ಟೇ ಬಯಸುತ್ತಾಳೆ ಎನ್ನುವುದು ಕೂಡ ಒಂದು ಅಭಿಪ್ರಾಯ ಹೇರಿಕೆಯೇ. ಹೆಣ್ಣು ಸಬಲಳಾಗಿ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಭಾಗವಹಿಸುತ್ತಿರುವಾಗ, ಗಂಡು ಮಾತ್ರ ದುಡಿಯುವುದು, ಮತ್ತು ಹೆಣ್ಣು ಮನೆಯಲ್ಲಿ ಗಂಡ ಬಂದು ತನ್ನ ಮುಖ ನೋಡುತ್ತಾ ಕೂತಿರುತ್ತಾನೆ ಎಂದಷ್ಟೇ ಬದುಕುವುದು ಎನ್ನುವ ಚಿತ್ರಣವೇ ಹಾಸ್ಯಾಸ್ಪದ.

ಆ ಹೇಳಿಕೆಯು ಮಹಿಳೆಯರ ಕುರುತಾಗಿ ಅವಮಾನಕಾರಿಯಾಗಿದೆ ಎನ್ನುವುದರ ಜೊತೆ ಜೊತೆಗೆ ಪುರುಷ ಪ್ರಧಾನ ವ್ಯವಸ್ಥೆಯು ಪುರುಷರ ಮೇಲೂ ಎಷ್ಟು ಒತ್ತಡ ಹೇರುತ್ತಿದೆ ಎನ್ನುವುದನ್ನು ಗಮನಿಸಬೇಕಾಗಿದೆ. ಮನೆಯಲ್ಲಿ ಒಬ್ಬ ಪುರುಷ ಕಳೆಯುವ ಸಮಯ ಅವನ ಸಂಗಾತಿಯ ಜೊತೆಯೇ ಆಗಿರಬಹುದು, ತಂದೆ ತಾಯಿಯ ಜೊತೆಯೇ ಆಗಿರಬಹುದು, ಮಕ್ಕಳ ಜೊತೆಯೇ ಆಗಿರಬಹುದು, ಸ್ನೇಹಿತರ ಜೊತೆಯೇ ಆಗಿರಬಹುದು ಅಥವಾ ತನಗಾಗಿಯೇ ಸಮಯ ಕಳೆಯಬಹುದು. ಅದೆಲ್ಲವನ್ನೂ ಹೊರತುಪಡಿಸಿ ಒಬ್ಬ ಪುರುಷನಿಗೆ ದುಡಿಮೆ ಬಿಟ್ಟರೆ ಬೇರೇನೂ ಇಲ್ಲ ಎನ್ನುವುದನ್ನು ಹೇರುವುದು ಅಮಾನವೀಯ.

ವಿಶ್ವ ಸಂತೋಷದ ವರದಿ 2024ರ ಅನುಸಾರ (World Happiness Report) 143 ದೇಶಗಳಲ್ಲಿ ಭಾರತ 126ನೇ ಸ್ಥಾನದಲ್ಲಿದೆ. ಕುಟುಂಬದ ಜೊತೆಯೋ ಅಥವಾ ಬೇರೇನೇ ಕಾರಣಕ್ಕೂ ಸಮಯ ಕಳೆಯದೇ ಸದಾ ಕೆಲಸ ಮಾಡುವವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ ಹೋದಲ್ಲಿ ಕೊನೆಯ ಸ್ಥಾನಕ್ಕೂ ತಲುಪುವ ಸಾಧ್ಯತೆಯಿದೆ. ಮನೆ, ಕುಟುಂಬದ ಜೊತೆ ಸಮಯ ಕಳೆಯುವುದು ಅವಮಾನಕಾರಿ ವಿಷಯ ಎನ್ನುವಂತೆ ಹೇಳಿಕೆಗಳನ್ನು ಕೊಟ್ಟಾಗ ಅದು ಬಹಳಷ್ಟು ಅನಾರೋಗ್ಯಕರ ಸಂಸ್ಕೃತಿಗಳನ್ನು ಹುಟ್ಟುಹಾಕುವ ಸಾಧ್ಯತೆಗಳಿವೆ. ಮನೆಯಲ್ಲಿನ, ಮನೆಯವರ ಶ್ರಮವನ್ನು ಕಡೆಗಣಿಸುವ, ತಿರಸ್ಕರಿಸುವ, ಅಲ್ಲಗಳೆಯುವ ಮಾದರಿಗಳು ಹುಟ್ಟಿಕೊಳ್ಳುತ್ತಾ ಹೋಗುತ್ತದೆ.

ಕೆಲವಷ್ಟು ಕಛೇರಿಗಳಲ್ಲಿ ಉದ್ಯೋಗಿಯ ಮನೆಯವರನ್ನೂ ಕರೆದು ಸನ್ಮಾನಿಸುವ ಪದ್ಧತಿಯಿದೆ. ಒಬ್ಬ ಉದ್ಯೋಗಿಯ ಸಾಧನೆಗೆ ಅವರ ಮನೆಯವರು ನೀಡುವ ಬೆಂಬಲ ಕೂಡ ಕಾರಣ ಎಂದು ಗೌರವಿಸುವುದೂ ಇದೆ. ಇಳಿಸಂಜೆಯಲ್ಲಿ ಅಜ್ಜ ಅಜ್ಜಿ ಕೈಹಿಡಿದು ನಡೆಯುವುದನ್ನು ನೋಡುವಾಗ ಆಗುವ ಸಂತೋಷ, ದಿನದ ಅಂತ್ಯದಲ್ಲಿ ದುಡಿದು ಬಂದ ಗಂಡ ಹೆಂಡತಿ ಮೆಟ್ಟಿಲಲ್ಲಿ ಕೈಹಿಡಿದು ಕೂತು ಭವಿಷ್ಯದ ಕನಸು ಕಾಣುವುದನ್ನು ನೋಡುವ ಸಂತೋಷ, ಮನೆಮಂದಿಯೆಲ್ಲಾ ಕೂತು ಮನೆಯ ಮಕ್ಕಳು ಆಡುವುದನ್ನು ನೋಡುವ ಖುಷಿ, ಇದೆಲ್ಲ ಯಾವ ಬೆಲೆಗೂ ಅಳತೆಗೂ ನಿಲುಕದ್ದು. ನಮ್ಮಲ್ಲಿ ಎಷ್ಟೋ ಮಂದಿ ವಾರ ಪೂರ್ತಿ ದುಡಿಯುವುದೇ ವಾರದಲ್ಲಿ ಒಂದು ದಿನ ಮಕ್ಕಳ, ಹೆಂಡತಿಯ, ಗಂಡನ, ಅಪ್ಪ ಅಮ್ಮಂದಿರ ಜೊತೆ ಕೂತು ಕಳೆಯುವುದಕ್ಕೆ. ಅದನ್ನು ಅವಮಾನ ಎಂದು ಭಾವಿಸಿ ದುಡಿಯುವುದು ಅರ್ಥಹೀನ ಮತ್ತು ಅಷ್ಟು ಪ್ರೋತ್ಸಾಹಿಸುವ ಜೀವಗಳಿಗೆ ಮಾಡುವ ಅವಮಾನ.

ಬದುಕಿನಲ್ಲಿ, ಕಾರ್ಯಕ್ಷೇತ್ರಗಳಲ್ಲಿ, ಮಹಿಳೆಯರ ಕೊಡುಗೆಯ ಕುರಿತಾಗಿ ಗೌರವ ಇಲ್ಲದಾಗಲೇ ಗಂಡು ಮಾತ್ರವೇ ಹೊರಹೋಗಿ ದುಡಿಯುವುದು, ಅವನಿಗೆ ದುಡಿಮೆಯ ಹೊರತಾದ ಬದುಕಿರಬಾರದು, ಹೆಣ್ಣು ಭೋಗದ ವಸ್ತುವಷ್ಟೇ, ಅವಳಿಗೆ ಗಂಡ ಬಂದಾಗ ಆದರಿಸುವುದರ ಹೊರತಾದ ಬದುಕಿಲ್ಲ ಎಂಬರ್ಥದ ಉಡಾಫೆಯ ಹೇಳಿಕೆಗಳು ಹೊರಬರುವುದು.

ಎಲ್‌ ಆಂಡ್‌ ಟಿ ಸಂಸ್ಥೆಯ 49000ಕ್ಕೂ ಹೆಚ್ಚಿನ ಪರ್ಮನೆಂಟ್‌ ಉದ್ಯೋಗಿಗಳಲ್ಲಿ ಕೇವಲ 2900ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ ಎಂದು ಕಂಪೆನಿಯ ವಾರ್ಷಿಕ ವರದಿ ಹೇಳುತ್ತದೆ. ಸಂಸ್ಥೆಯ ಕಾರ್ಯಕಾರಿ ಸಮಿತಿಯಲ್ಲಾಗಲೀ, ಲೀಡರ್‌ ಶಿಪ್‌ ಸಮಿತಿಯಲ್ಲಾಗಲೀ ಒಬ್ಬರೂ ಮಹಿಳಾ ಉದ್ಯೋಗಿಗಳು ಇಲ್ಲದೇ ಇಲ್ಲದಿರುವುದು ವಿಷಾದನೀಯ. ಶೇಕಡಾ 10ರಷ್ಟೂ ಮಹಿಳಾ ಉದ್ಯೋಗಿಗಳಿಲ್ಲದ ಸಂಸ್ಥೆಯ ಅಧ್ಯಕ್ಷರೊಬ್ಬರು ಈ ರೀತಿ ಹೇಳಿಕೆ ಕೊಡುವುದು ವಿಷಾದನೀಯ.

ಉನ್ನತ ಹುದ್ದೆಗಳಲ್ಲಿನ ವ್ಯಕ್ತಿಗಳು, ಸೂಕ್ಷ್ಮತೆಗಳನ್ನು ಹೊಂದಿ ಸಂವೇದನಾಶೀಲವಾಗಿ ಆಲೋಚಿಸಲು ಮತ್ತು ನಡೆದುಕೊಳ್ಳಳು ಸಾಧ್ಯವಾದಾಗ ಸಮಾಜದಲ್ಲಿ ಒಂದಷ್ಟು ಬದಲಾವಣೆ ತರಲು ಸಾಧ್ಯ. ತಾವೇ ಅಸೂಕ್ಷ್ಮವಾಗಿ, ಅಮಾನವೀಯವಾಗಿ ಮಾತನಾಡಿದಾಗ ಅದರ ಮುಂದಿನ ಬೆಳವಣಿಗೆಗಳು ಏನಾಗಬಹುದು ಎನ್ನುವುದನ್ನು ಅವರು ಯೋಚಿಸಬೇಕಿದೆ.

You cannot copy content of this page

Exit mobile version