ಬೆಂಗಳೂರು: ಸುಮಾರು 400 ವಿದ್ಯಾರ್ಥಿಗಳಿಗೆ ಉಚಿತ ಮನೆಪಾಠ ನೀಡುವುದರಲ್ಲಿ ತೊಡಗಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ಡಾ. ಎ.ರಾಜುರವರು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದು, ಆಮ್ ಆದ್ಮಿ ಪಾರ್ಟಿಯ (ಎಎಪಿ) ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಡಾ. ಎ.ರಾಜುರವರನ್ನು ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು, ಮೂಲತಃ ಇದೇ ಬೆಂಗಳೂರಿನವರಾದ ಡಾ. ಎ.ರಾಜುರವರು ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿದವರು. 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದರು. ಕೆನರಾ ಬ್ಯಾಂಕ್ ನೌಕರರ ಸಂಘಟನೆ ಹಾಗೂ ಅಖಿಲ ಭಾರತ ಪರಿಶಿಷ್ಟ ಜಾತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ, ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷರಾಗಿ ಹಾಗೂ ಅಖಿಲ ಭಾರತ ಬಾಕ್ಸಿಂಗ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಮೀಡಿಯಾ ಕ್ಲಬ್ ಆಫ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿಯಾಗಿ ಕೂಡ ಕಾರ್ಯ ನಿರ್ವಹಿಸಿದ ಅನುಭವಿ ವ್ಯಕ್ತಿತ್ವ ಡಾ. ಎ.ರಾಜುರವರದ್ದು ಎಂದು ಹೇಳಿದರು.
ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಡಾ. ಎ.ರಾಜುರವರು ಬೆಂಗಳೂರಿನ ರಾಜಾಜಿನಗರದಲ್ಲಿ ಸುಮಾರು 400 ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯೂಷನ್ ಮಾಡುತ್ತಿದ್ದಾರೆ. ಜೊತೆಗೆ, ಇನ್ನೂ ಅನೇಕ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ನೆರವಾಗುತ್ತಾ ಬಂದಿದ್ದಾರೆ. ಪ್ರಚಾರ ಬಯಸದೇ ಸಮಾಜಸೇವೆಯಲ್ಲಿ ತೊಡಗಿಕೊಳ್ಳುವ ಇವರ ಸ್ವಭಾವವು ಆದರ್ಶವಾದದ್ದು ಎಂದು ಪೃಥ್ವಿ ರೆಡ್ಡಿ ಹೇಳಿದರು.
ಪಕ್ಷ ಸೇರಿ ಮಾತನಾಡಿದ ಡಾ. ಎ.ರಾಜು ಅವರು, ʼಆಮ್ ಆದ್ಮಿ ಪಾರ್ಟಿಯ ಭ್ರಷ್ಟಾಚಾರ ವಿರೋಧಿ ಧೋರಣೆ ಹಾಗೂ ಶೈಕ್ಷಣಿಕ ಪ್ರಗತಿಯ ಬಗ್ಗೆ ಪಕ್ಷಕ್ಕಿರುವ ಬದ್ಧತೆಯನ್ನು ಮೆಚ್ಚಿ ಸೇರ್ಪಡೆಯಾಗುತ್ತಿದ್ದೇನೆ. ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು. ಆಗ ಮಾತ್ರ ದೇಶವು ನಿಜವಾದ ಪ್ರಗತಿ ಸಾಧಿಸುತ್ತದೆ. ಇದನ್ನು ಆಮ್ ಆದ್ಮಿ ಪಾರ್ಟಿಯೊಂದೇ ಸಾಕಾರಗೊಳಿಸಬಲ್ಲದು. ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರವು ಇದನ್ನು ಸಾಧಿಸಿ ತೋರಿಸಿದ್ದು, ಪಂಜಾಬ್ ಸರ್ಕಾರ ಕೂಡ ಇದೇ ಮಾದರಿಯಲ್ಲಿ ಸಾಗಿದೆ. ಕರ್ನಾಟಕದಲ್ಲಿ ಕೂಡ ಎಎಪಿ ಆಡಳಿತ ಬಂದು ಇಲ್ಲಿನ ಸಮಸ್ಯೆಗಳು ಬಗೆಹರಿಯಬೇಕಿದೆ ಎಂದು ಹೇಳಿದರು.