ಬೆಂಗಳೂರು: ರಾಜ್ಯ ಹಾಗೂ ರಾಷ್ಟ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಆಡಳಿತದಲ್ಲಿದ್ದು ಪ್ರಧಾನಿ ಮೋದಿಯವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕಾರದ ಅವಧಿಯಲ್ಲಿ ಸಾಮಾಜಿಕ ನ್ಯಾಯ ಸಮಾಧಿಯಾಗುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಎಸ್ ಉಗ್ರಪ್ಪ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ವ್ಯವಸ್ಥೆಯ ಕಟ್ಟ ಕಡೆಯ ಬಡವರು ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮಕ್ಕಳ ಭವಿಷ್ಯದ ಮೇಲೆ ಚಪ್ಪಡಿ ಕಲ್ಲು ಎಳೆಯುವಂತಹ ಪ್ರಯತ್ನ ನರೇಂದ್ರ ಮೋದಿಯವರಿಂದ ನಡೆದಿದೆ ದೂರಿದ್ದಾರೆ.
ಪ್ರಾಥಮಿಕ ಹಾಗೂ ಮಧ್ಯಮ ಶಾಲೆಗಳಲ್ಲಿ 22.56 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, 14.89 ಲಕ್ಷ ಶಾಲೆಗಳಲ್ಲಿ ಈ ಮಕ್ಕಳು ಕಲಿಯುತ್ತಿದ್ದಾರೆ. ಅದರಲ್ಲಿ 10.22 ಲಕ್ಷ ಸರ್ಕಾರಿಶಾಲೆಗಳು ಆಗಿವೆ. ಈ ಶಾಲೆಗಳಲ್ಲಿ ಗ್ರಾಮೀಣ ಭಾಗದ ಹಾಗೂ ಎಲ್ಲಾ ವರ್ಗದ ಮಕ್ಕಳು ಕಲಿಯುತ್ತಿದ್ದಾರೆ. ಶಿಕ್ಷಣ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿತ್ತು ಎಂದರು.
ಕಾಂಗ್ರೆಸ್ ಅವಧಿಯಲ್ಲಿ ಸಂವಿಧಾನಕ್ಕೆ ಆರ್ಟಿಕಲ್ 21ಎ ಮೂಲಕ ಶಿಕ್ಷಣ ಹಕ್ಕು ತರುವ ಮೂಲಕ ಸಮಾಜದ ಎಲ್ಲಾ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ಸಿಗುವಂತೆ ಮಾಡಲಾಗಿತ್ತು. ಇದರ ಜೊತೆಗೆ ಬಡವರು ಅಲ್ಪಸಂಖ್ಯಾತರು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ವಿದ್ಯಾರ್ಥಿ ವೇತನ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಈ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರ್ಕಾರ ಶೇಕಡ 75ರಷ್ಟು ಹಾಗೂ ರಾಜ್ಯ ಸರ್ಕಾರ ಶೇಕಡ 25 ರಷ್ಟು ನೀಡುತಿತ್ತು ಎಂದು ಹೇಳಿದರು.
ಈಗ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿದ ನಂತರ ಈ ಅನುಪಾತ 60:40 ರಷ್ಟು ಆಗಿದೆ ಎಂಬ ಮಾಹಿತಿ ನೀಡಿದರು. ಆದರೆ ಇಲ್ಲಿ ಆಘಾತಕಾರಿ ವಿಚಾರ ಏನೆಂದರೆ, ಒಂದರಿಂದ ಎಂಟನೇ ತರಗತಿಯವರೆಗಿನ ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಮೋದಿಯವರ ಸರ್ಕಾರ ನಿಲ್ಲಿಸಿದೆ. ಮೋದಿ ಅವರ ಸರ್ಕಾರ ಮಕ್ಕಳ ಭವಿಷ್ಯದ ವಿಚಾರದಲ್ಲಿ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಂಡಿದೆ. ಇದೇ ಕಾರಣಕ್ಕೆ ನಾನು ಮೋದಿ ಅವರನ್ನು ಆಧುನಿಕ ಭಸ್ಮಾಸುರರು ಎಂದು ಕರೆಯುತ್ತಿರುತ್ತೇನೆ ಎಂದು ಟೀಕಿಸಿದ್ದಾರೆ.
ದೇಶದ ಮುಂದಿನ ಶಿಲ್ಪಿಗಳ ಆಗುವಂತಹ ಮಕ್ಕಳ ಭವಿಷ್ಯ ಹಾಗೂ ಬದುಕಿನ ಜೊತೆ ಬಿಜೆಪಿ ನಾಯಕರು ಚೆಲ್ಲಾಟವಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದನ್ನು ಅತ್ಯಂತ ಕಠಿಣ ಶಬ್ದಗಳಿಂದ ಖಂಡಿಸುತ್ತೇವೆ ಎಂದರು.
ಮೋದಿ ಅವರ ಸರ್ಕಾರ 2015 ರಿಂದ 2021 ರವರೆಗೆ ಸಂಸತ್ತಿನಲ್ಲಿ ನೀಡಲಾಗಿರುವ ಅಂಕಿ ಅಂಶಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಶ್ರೀಮಂತರ ಸುಮಾರು 10 ಲಕ್ಷ ಕೋಟಿ ರೂಪಾಯಿಯಷ್ಟು ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದೆ. ಕೇಂದ್ರ ಸರ್ಕಾರ ಬಡವರ ಪರವಾಗಿಲ್ಲಾ ಶ್ರೀಮಂತರ ಪರವಾಗಿ ಇದೆ ಎಂಬುದಕ್ಕೆ ಇದೇ ಸಾಕ್ಷಿ. 2017- 18ರಲ್ಲಿ 1.61 ಲಕ್ಷ ಕೋಟಿಯಷ್ಟು, 2018-19 ರಲ್ಲಿ 2.36 ಲಕ್ಷ ಕೋಟಿ, 2019-20 ರಲ್ಲಿ 2.34 ಲಕ್ಷ ಕೋಟಿ, 2020-21ರಲ್ಲಿ 2.02 ಲಕ್ಷ ಕೋಟಿ 2021- 22 ರಲ್ಲಿ 1.57 ಲಕ್ಷ ಕೋಟಿ ಶ್ರೀಮಂತ ಉದ್ಯಮಿಗಳ ಸಾಲ ಮನ್ನ ಮಾಡಿದೆ ಎಂದು ತಿಳಿಸಿದರು.
ಹಿಂದೂ ಪ್ರಾಜೆಕ್ಟ್ ಲಿಮಿಟೆಡ್ ಎಂಬ ಕಂಪನಿ 835 ಕೋಟಿ ಸಾಲ ಮಾಡಿದ್ದು, ಅದರಲ್ಲಿ 830 ಕೋಟಿಯನ್ನು ಮನ್ನಾ ಮಾಡಲಾಗಿದೆ. ಅದೇ ರೀತಿ ಕಿಂಗ್ಫಿಶರ್ ಏರ್ಲೈನ್ಸ್ ವಿವಿಧ ಬ್ಯಾಂಕುಗಳಲ್ಲಿ 1335 ಕೋಟಿ ಸಾಲ ಮಾಡಿದ್ದಾರೆ ಇದರಲ್ಲಿ 1935 ಕೋಟಿಯನ್ನು ಮನ್ನಾ ಮಾಡಲಾಗಿದೆ. ಅದೇ ರೀತಿ ಟ್ರಾನ್ಸ್ಪರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ 1217 ಕೋಟಿ ಸಾಲ ಮಾಡಿದ್ದು ಅದರಲ್ಲಿ ಸಂಪೂರ್ಣ 1217 ಕೋಟಿ ಮನ್ನಾ ಮಾಡಿದೆ. ಕೆಎಸ್ಐ ಲಿಮಿಟೆಡ್ ಕಂಪನಿ, 861 ಕೋಟಿ ಸಾಲ ಪಡೆದಿದ್ದು ಇದರಲ್ಲಿ 859 ಕೋಟಿ ಮನ್ನ ಮಾಡಿದೆ. ಜೂಮ್ ಡೆವಲಪರ್ಸ್ ಕಂಪನಿ ಸಾಲ ಪಡೆದಿದ್ದು 1968 ಕೋಟಿ ಮೊನ್ನ ಆಗಿರುವುದು ಕೂಡ 1968 ಕೋಟಿ. ರೋಡ್ ಮ್ಯಾಕ್ ಗ್ಲೋಬಲ್ 2851 ಕೋಟಿ ಮನ್ನಾ ಆಗಿರುವುದು 1302ಕೋಟಿ. ಹೀಗೆ ಹಲವು ಕಂಪನಿಗಳ ಸಾಲ ಮನ್ನಾ ಮಾಡಲಾಗಿದೆ. ಆದರೆ ನಮ್ಮ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಕೇವಲ 400 ಕೋಟಿ ಮಾತ್ರ. ಇದನ್ನು ನೀಡಲು ಸಾಧ್ಯವಿಲ್ಲ ಎಂದರೆ ಇವರ ಆದ್ಯತೆ ಕೇವಲ ಹಣವಂತರು ಶ್ರೀಮಂತರು ಮಾತ್ರವೇ ಹೊರತು ಬಡವರು ಪರಿಶಿಷ್ಟರು ಅಲ್ಲ ಎಂದು ಹೇಳಿದರು.
ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಸಾಧ್ಯವಾಗದ ಸರ್ಕಾರ, ಅದಾನಿ ಅಂಬಾನಿ ಸೇರಿದಂತೆ ಕೆಲವೇ ಕೆಲವು ಮಂದಿಯ ಲಕ್ಷಾಂತರ ಕೋಟಿ ಸಾಲವನ್ನು ಮನ್ನಾ ಮಾಡುವ ಮೂಲಕ ಬಡ ಮಕ್ಕಳ ಶಿಕ್ಷಣದ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಿದ್ದಾರೆ. ಇವರು ಯಾವ ಮುಖ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 2013ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಈ ಸಮುದಾಯಗಳ ಜನಸಂಖ್ಯೆ ಅನುಗುಣವಾಗಿ ಬಜೆಟ್ ನಲ್ಲಿ ಎಲ್ಲಾ ಇಲಾಖೆಗಳಲ್ಲಿ ಹಣವನ್ನು ಮೀಸಲಿಡುವ ಕಾನೂನನ್ನು ಜಾರಿಗೆ ತರಲಾಯಿತು. ಇಂತಹ ಕಾನೂನು ಇರುವುದು ದೇಶದಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಮಾತ್ರ. ಅದರ ಪರಿಣಾಮವಾಗಿ ಶೇಕಡ 17ರಷ್ಟು ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸುಮಾರು 30 ಸಾವಿರ ಕೋಟಿಗಿಂತ ಹೆಚ್ಚು ಅನುದಾನವನ್ನು ಪ್ರತಿ ವರ್ಷ ನೀಡಲಾಗುವುದು. ಈ ಅನ್ನದಾನವನ್ನು ಆಯಾ ವರ್ಷ ಬಳಕೆ ಮಾಡಿಕೊಳ್ಳಬೇಕು. ಹಾಗೂ ಈ ಹಣವನ್ನು ಬೇರೆ ವಿಚಾರಗಳಿಗೆ ವರ್ಗಾವಣೆ ಮಾಡಬಾರದು ಎಂದು ಕಾನೂನಿನಲ್ಲಿ ತಿಳಿಸಿದೆ. ಒಂದು ವೇಳೆ ಈ ಅನುದಾನ ಬಳಕೆ ಆಗದಿದ್ದರೆ ಅದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಕಾನೂನನ್ನು ತರಲಾಗಿದೆ ಎಂದರು.
ರಾಜ್ಯ ಸರ್ಕಾರ ಈಗ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಬಗ್ಗೆ ಎಲ್ಲಿಲ್ಲದ ಪ್ರೀತಿಯ ಮಾತುಗಳನ್ನಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಈ ಅನುದಾನವನ್ನು ಈ ವರ್ಷ 29,165 ಕೋಟಿ ನೀಡಿದ್ದು, ಇದರ ಪೈಕಿ 15% ಗಿಂತ ಕಡಿಮೆ ಅನುದಾನ ಬಳಕೆಯಾಗಿದೆ. ಅದರಲ್ಲೂ ವಿಶೇಷವಾಗಿ ಉನ್ನತ ಶಿಕ್ಷಣ ಇಲಾಖೆಯಲ್ಲಿ 2.2% ನಷ್ಟು ಮಾತ್ರ ಬಳಕೆಯಾಗಿದೆ. ಕೌಶಲ್ಯ ಅಭಿವೃದ್ಧಿ ಇಲಾಖೆ 4.5% ಅನುದಾನವನ್ನು ಬಳಕೆ ಮಾಡಿದೆ. ಪರಿಶಿಷ್ಟರ ಮೀಸಲಾತಿ ಹೆಚ್ಚಳ ವಿಚಾರವಾಗಿ ಸಮಿತಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಈ ಸಮಿತಿ ವರದಿ ನೀಡಿ ಮೂರು ವರ್ಷಗಳಾದರು ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಈಗ ರಾಜ್ಯಪಾಲರ ಮೂಲಕ ಸುಗ್ರೀವಾಜ್ಞೆ ಹೊರಡಿಸಿ, ಪರಿಶಿಷ್ಟ ಜಾತಿಯವರಿಗೆ 17%, ಪರಿಶಿಷ್ಟ ಪಂಗಡದವರಿಗೆ 7% ಮೀಸಲಾತಿ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
2004-05ರಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ, ಶಿಕ್ಷಣ ಹಾಗೂ ಉದ್ಯೋಗ ವಿಚಾರದಲ್ಲಿ ಈ ಮೀಸಲಾತಿಯನ್ನು ನೀಡಿತ್ತು. ರಾಜ್ಯ ಸರ್ಕಾರ ಸುಗ್ರೀವ ಹೊರಡಿಸಿದ್ದು ಆದರೆ ಇದುವರೆಗೂ ಯಾವುದೇ ಅಧಿಕೃತ ಆದೇಶವನ್ನು ಬಿಡುಗಡೆ ಮಾಡಿಲ್ಲ ಎಂಬ ಆಘಾತಕಾರಿ ವಿಚಾರ ಇಂದು ಬೆಳಗ್ಗೆ ತಿಳಿಯಿತು. ಬಿಜೆಪಿ ಸರ್ಕಾರಕ್ಕೆ ಪರಿಶಿಷ್ಟರಿಗೆ ಮೀಸಲಾತಿ ನೀಡಲು ನಿಜವಾಗಿ ಆಸಕ್ತಿ ಇದ್ದರೆ ಸುಗ್ರೀವಾಜ್ಞೆ ಹೊರಡಿಸಿದ ಮರುದಿನವೇ ಸರ್ಕಾರದ ಆದೇಶವನ್ನು ಹೊರಡಿಸಬೇಕಿತ್ತು ಎಂದರು.
ಇತ್ತೀಚಿಗೆ ಶ್ರೀರಾಮುಲು ಬಳ್ಳಾರಿ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತ ನಾವು ಕೈಗೆ ಬಳೆ ತೊಟ್ಟುಕೊಂಡಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಶ್ರೀರಾಮುಲು ಅವರು ಸ್ತ್ರೀ ಸಮುದಾಯಕ್ಕೆ ಅಪಚಾರ ಎಸಗಿದ್ದಾರೆ. ಈ ಹೇಳಿಕೆಯನ್ನು ಖಂಡಿಸಿ ಆರ್ ಎಸ್ ಎಸ್ ಆಗ ಬಿಜೆಪಿಯವರು ಶ್ರೀರಾಮುಲುವರಿಂದ ಕ್ಷಮೆ ಹೇಳಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ಬಿಜೆಪಿಯವರಾಗಲಿ ಅಥವಾ ಆರ್ ಎಸ್ ಎಸ್ ನವರಾಗಲಿ ಹಿಂದುತ್ವದ ಪರವಾಗಿಲ್ಲಾ, ಅವರು ಮನುವಾದದ ಪರವಾಗಿದ್ದಾರೆ. ಸ್ತ್ರೀಯರನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ಕಾಣುತ್ತಾರೆ ಎಂಬುದು ಶ್ರೀರಾಮುಲು ಅವರ ಮಾತಿನ ಮೂಲಕ ಸ್ಪಷ್ಟವಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗಾಗಿ ನೀಡಲಾಗಿರುವ ಅನುದಾನದಲ್ಲಿ ಕೇವಲ 15% ಮಾತ್ರ ಬಳಕೆಯಾಗಿದ್ದು, ಶ್ರೀರಾಮುಲು ಏನು ಮಾಡುತ್ತಿದ್ದರು? ಕೇಂದ್ರ ಸರ್ಕಾರ ಬಡ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿದ್ದು ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಯಾಕೆ ಒತ್ತಡ ತರುತ್ತಿಲ್ಲ? ನಿಮಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಕ್ಕಳು ಹಿಂದುಳಿದ, ಅಲ್ಪಸಂಖ್ಯಾತ ವರ್ಗದ ಮಕ್ಕಳು ಬೇಡವಾಗಿದ್ದಾರೆ. ಇದೆಲ್ಲವನ್ನು ನೋಡಿದರೆ ನೀವು ಸರ್ವಾಧಿಕಾರಿ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದೀರಿ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದರು.
ಸರ್ಕಾರ ತನ್ನ ಈ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜಮೀನು ಕೊಡಿಸುವ ಯೋಜನೆ ಇದೆ. ನಿಮ್ಮ ಆಡಳಿತದ ಅವಧಿಯಲ್ಲಿ ಪರಿಶಿಷ್ಟರಿಗೆ ಎಷ್ಟು ಜಮೀನನ್ನು ಕೊಡಿಸಿದ್ದೀರಿ. ನನ್ನ ಪ್ರಕಾರ ಈ ಸರ್ಕಾರ ಬಂದ ನಂತರ ಯಾರಿಗೂ ಜಮೀನು ಕೊಡಿಸಿಲ್ಲ. ಮಕ್ಕಳಿಗೆ ವಿದ್ಯಾರ್ಥಿ ವೇತನಗಳನ್ನು ನೀಡಿಲ್ಲ. ಪರಿಶಿಷ್ಟ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿ ಮಾಡುತ್ತಿರುವಾಗ ಅವರಿಗೆ ವಿದ್ಯಾರ್ಥಿ ವೇತನ ನೀಡಿಲ್ಲ ಎಂದು ಹೇಳಿದರು.
ಪರಿಶಿಷ್ಟ ಸಮುದಾಯಕ್ಕೆ ನೀಡಲಾಗಿರುವ ಗಂಗಾ ಕಲ್ಯಾಣ ಕೊಳವೆಬಾವಿ ಯೋಜನೆ ಯಲ್ಲಿ ಅಕ್ರಮ ನಡೆದಿದೆ. ಹಾಗಿದ್ದರೆ ಈ ಸರ್ಕಾರ ಏನು ಮಾಡುತ್ತಿದೆ? ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹಾಗೂ ಯಾವುದೇ ಸಚಿವರು ಇರುವುದಿಲ್ಲ. ಹೀಗಾಗಿ ವಿಧಾನಸೌಧಕ್ಕೆ ಬೀಗ ಹಾಕಿದ ರೀತಿಯಲ್ಲಿ ಇರುತ್ತದೆ ಎಂದು ವ್ಯಂಗಿಸಿದ್ದಾರೆ.
ಇದೆಲ್ಲದರ ಜೊತೆಗೆ ಬಿಜೆಪಿ ರೌಡಿಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ. ಪ್ರತಿ ಮಂತ್ರಿಗಳು ಒಂದಿಷ್ಟು ರೌಡಿಗಳನ್ನು ಹಂಚಿಕೊಳ್ಳಲು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಬೆಂಗಳೂರು ಇಂದು ಅಪರಾಧಗಳ ನಗರವಾಗಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳು ಗೃಹ ಸಚಿವರು ಹಾಗೂ ಇತರೆ ಮಂತ್ರಿಗಳು ಈ ವರ್ಗದ ಜನರ ಅನುದಾನ ಬಳಕೆ, ವಿದ್ಯಾರ್ಥಿ ವೇತನ ವಿಚಾರವಾಗಿ ನಿರ್ಲಕ್ಷ್ಯ ವಹಿಸಿದೆ. ಮುಂದಿನ ಚುನಾವಣೆಯಲ್ಲಿ ಸೋಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಅರಿತು ಎಲ್ಲಾ ವಾಮ ಮಾರ್ಗಗಳನ್ನು ಹಿಡಿದಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಕಾಂಗ್ರೆಸ್ ಪರವಾಗಿರುವ ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಮತಗಳನ್ನು ಕೈಬಿಡಲಾಗಿದೆ. ಅವರ ಪರವಾಗಿರುವ ಮತದಾರ ಹೆಸರು ಸೇರ್ಪಡೆ ಮಾಡಲಾಗುತ್ತಿದೆ. ಈ ಬಗ್ಗೆ ಆರಂಭದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದಾಗ ಏನೂ ನಡೆದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ ಚುನಾವಣಾ ಆಯೋಗ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿದೆ ಎಂದು ಹೇಳಿದ್ದಾದರು.