Home ಬೆಂಗಳೂರು ರಸ್ತೆಗುಂಡಿಗೆ ಯೋಧ ಬಲಿ: ಪ್ರತಿಭಟಿಸಿದ ಎಎಪಿ ಮುಖಂಡರ ಬಂಧನ

ರಸ್ತೆಗುಂಡಿಗೆ ಯೋಧ ಬಲಿ: ಪ್ರತಿಭಟಿಸಿದ ಎಎಪಿ ಮುಖಂಡರ ಬಂಧನ

0

ಬೆಂಗಳೂರು: ರಾಜಾಜಿನಗರದ ಡಾ. ರಾಜ್‌ಕುಮಾರ್‌ ರಸ್ತೆಯಲ್ಲಿದ್ದ ಗುಂಡಿಯಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮಾಜಿ ಯೋಧ ಕುಮಾರ್‌ ಮೃತಪಟ್ಟಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಎಎಪಿ ಬೆಂಗಳೂರು ವಕ್ತಾರರಾದ ಉಷಾ ಮೋಹನ್‌ರವರು, ʼಬೆಂಗಳೂರಿನಲ್ಲಿ ರಸ್ತೆಗುಂಡಿಯಿಂದಾಗಿ ಅಪಘಾತವಾಗುವುದು ಸಾಮಾನ್ಯವಾಗಿಬಿಟ್ಟಿದೆ. ತಿಂಗಳಿಗೆ ಕನಿಷ್ಠ ಮೂರ್ನಾಲ್ಕು ಮಂದಿಯಾದರೂ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಪಘಾತ ನಡೆದು ಯೋಧ ಕುಮಾರ್‌ ಜೀವ ಕಳೆದುಕೊಂಡ ಸ್ಥಳಕ್ಕೆ ಮುಖ್ಯಮಂತ್ರಿ ಆಗಮಿಸಬೇಕು. ಮೃತರ ಕುಟುಂಬಕ್ಕೆ ಶೀಘ್ರ ಪರಿಹಾರ ವಿತರಿಸಬೇಕು. ರಸ್ತೆ ಗುಂಡಿಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕುʼಎಂದು ಆಗ್ರಹಿಸಿದರು.

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಎಎಪಿ ಮುಖಂಡರಾದ ಸುಮನ್‌ ಪ್ರಶಾಂತ್‌ ಮಾತನಾಡಿ, ʼಜೀರೋ ಟ್ರಾಫಿಕ್‌ನಲ್ಲಿ ತಿರುಗಾಡುವ ಮುಖ್ಯಮಂತ್ರಿಯವರಿಗೆ ಹಾಗೂ ಸದಾ ಕಾರಿನಲ್ಲೇ ತಿರುಗಾಡುವ ಸಚಿವರುಗಳು ಹಾಗೂ ಶಾಸಕರುಗಳಿಗೆ ಬೈಕ್‌ ಸವಾರರ ಕಷ್ಟ ಅರ್ಥವಾಗುತ್ತಿಲ್ಲ. ಕೇಳಿದಷ್ಟು ಕಮಿಷನ್‌ ಕೊಡಲು ಗುತ್ತಿಗೆದಾರರು ಒಪ್ಪದ ಕಾರಣಕ್ಕೆ ರಸ್ತೆ ಕಾಮಗಾರಿಗೆ ಹಣ ಬಿಡುಗಡೆ ಮಾಡಲೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಸಚಿವರು ಹಾಗೂ ಶಾಸಕರ ಹಣದ ದಾಹದಿಂದ ಅಮೂಲ್ಯ ವ್ಯಕ್ತಿಗಳನ್ನು ದೇಶ ಕಳೆದುಕೊಳ್ಳುತ್ತಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಎಎಪಿ ಮುಖಂಡರಾದ ಉಷಾ ಮೋಹನ್‌, ಸುಮನ್‌ ಪ್ರಶಾಂತ್‌, ಪುಟ್ಟಣ್ಣ ಗೌಡ, ವಿಶ್ವನಾಥ್‌, ಮಹೇಶ್‌ ಬಾಬು ಮತ್ತಿತರ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

You cannot copy content of this page

Exit mobile version