ಹಾಸನ: ರಾಜ್ಯ ಬಜೆಟ್‌ನಲ್ಲಿ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ಮೀಸಲಿಡದಿರುವುದನ್ನು ಖಂಡಿಸಿ, ಲಿಂಗತ್ವ ಮತ್ತು ಬಹುತ್ವಕ್ಕಾಗಿ ಚಳುವಳಿ ಒಕ್ಕೂಟದ ವತಿಯಿಂದ ಬುಧವಾರ ಪತ್ರಿಕಾಗೋಷ್ಠಿ ನಡೆಯಿತು.
ಚಳುವಳಿಯ ಸಹಾಧ್ಯಕ್ಷೆ ವೈಶಾಲಿ ಮಾತನಾಡಿ, ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ತಮ್ಮ ಪ್ರಣಾಳಿಕೆಯಲ್ಲಿ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗಾಗಿ ವಾರ್ಷಿಕ ರೂ. 200 ಕೋಟಿ ಮೀಸಲಿಡುವುದಾಗಿ ಘೋಷಿಸಿತ್ತು. ಆದರೆ, ಪ್ರಸ್ತುತ ಬಜೆಟ್‌ನಲ್ಲಿ ಈ ವಾಗ್ದಾನ ಪ್ರತಿಫಲಿಸಿಲ್ಲ ಎಂದು ಸಂಘಟನೆ ಆರೋಪಿಸಿದರು. ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಭದ್ರತೆ ಕ್ಷೇತ್ರಗಳಲ್ಲಿ ಸ್ಪಷ್ಟ ಯೋಜನೆಗಳ ಅಗತ್ಯವಿದೆ. ಸರ್ಕಾರವು ಬಜೆಟ್ ಅಧಿವೇಶನದಲ್ಲಿ ವಿಶೇಷ ಅನುದಾನ ಘೋಷಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವು ಮಾರ್ಚ್ 3ರಿಂದ ಬಜೆಟ್ ಅಧಿವೇಶನ ಆರಂಭಿಸುವ ಹಿನ್ನೆಲೆ, ಸಮುದಾಯದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಹಣಕಾಸು ಮೀಸಲಾತಿ ಮಾಡಬೇಕೆಂದು ಮನವಿ ಮಾಡಿದರು. ಸಂಘಟನೆ ಮಾಧ್ಯಮಗಳ ಬೆಂಬಲವನ್ನೂ ಕೋರಿದ್ದು, ಸಮುದಾಯದ ಹಕ್ಕು ಹಾಗೂ ಅಭಿವೃದ್ಧಿಗೆ ಸರ್ಕಾರ ಬದ್ಧತೆಯನ್ನು ತೋರಿಸಬೇಕು ಎಂದು ಆಗ್ರಹಿಸಿತು.
ಪತ್ರಿಕಾಗೋಷ್ಠಿಯಲ್ಲಿ ಮರೀಜೋಸೆಫ್, ಮಾರತಮ್ಮ, ವಿನ್ಸೆನ್ಟ್, ಶಿವಣ್ಣ, ಭಾಗ್ಯ ಮೇರಿ ಇತರರು ಹಾಜರಿದ್ದರು.
