ಮುಂಬೈ: ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ಸಭೆಯಲ್ಲಿ ಕುಳಿತು ರಮ್ಮಿ ಆಡಿದ್ದಾರೆ ಎಂದು ಮಹಾರಾಷ್ಟ್ರ ಸಚಿವ ಮಾಣಿಕ್ ರಾವ್ ಕೋಕಾಟೆ ವಿರುದ್ಧ ಬಂದಿದ್ದ ಆರೋಪಗಳು ತೀವ್ರ ವಿವಾದಕ್ಕೆ ಕಾರಣವಾಗಿದ್ದವು. ವಿರೋಧ ಪಕ್ಷಗಳು ಅವರ ರಾಜೀನಾಮೆಗೆ ಆಗ್ರಹಿಸಿದ್ದವು.
ಈ ವಿವಾದದ ನಂತರ, ರಾಜ್ಯ ಸರ್ಕಾರವು ತೆಗೆದುಕೊಂಡ ಇತ್ತೀಚಿನ ನಿರ್ಧಾರ ಚರ್ಚೆಗೆ ಗ್ರಾಸವಾಗಿದೆ. ಮಾಣಿಕ್ ರಾವ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿಲ್ಲ, ಬದಲಿಗೆ ಅವರಿಗೆ ಕ್ರೀಡಾ ಖಾತೆಯನ್ನು ವಹಿಸಲಾಗಿದೆ. ಸರ್ಕಾರದ ಈ ನಡೆ ಟೀಕೆಗೆ ಒಳಗಾಗಿದೆ.
ಗುರುವಾರ ಮಧ್ಯರಾತ್ರಿ ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ ಪುನರ್‌ರಚನೆಗೆ ಸಂಬಂಧಿಸಿದಂತೆ ಒಂದು ಪ್ರಕಟಣೆ ಹೊರಬಿದ್ದಿದೆ. ಈ ಹಿಂದೆ ಕೃಷಿ ಸಚಿವರಾಗಿದ್ದ ಮಾಣಿಕ್ ರಾವ್ ಕೋಕಾಟೆ ಅವರ ಜವಾಬ್ದಾರಿಯನ್ನು ಎನ್‌ಸಿಪಿ ಸಚಿವ ದತ್ತಾತ್ರೇಯ ಭರಣೆ ಅವರಿಗೆ ವಹಿಸಲಾಗಿದೆ. ಕೋಕಾಟೆ ಅವರಿಗೆ ಕ್ರೀಡೆ ಮತ್ತು ಯುವಜನ ಕಲ್ಯಾಣ ಖಾತೆಯನ್ನು ನೀಡಲಾಗಿದೆ.
ಈ ಹಿಂದೆ ಈ ಖಾತೆಯನ್ನು ದತ್ತಾತ್ರೇಯ ಭರಣೆ ನಿರ್ವಹಿಸುತ್ತಿದ್ದರು. ವಿವಾದಾತ್ಮಕ ಕೃತ್ಯಗಳಲ್ಲಿ ತೊಡಗುವ ಸಚಿವರಿಗೆ ಗಂಭೀರ ಪರಿಣಾಮಗಳು ತಪ್ಪುವುದಿಲ್ಲ ಎಂಬ ಸಂದೇಶ ನೀಡಲು ಈ ಬದಲಾವಣೆ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಆದರೆ, ವಿಧಾನಸಭೆಯಲ್ಲಿ ರಮ್ಮಿ ಆಡಿದ ಸಚಿವನನ್ನು ಹುದ್ದೆಯಿಂದ ತೆಗೆದುಹಾಕದೆ ಕೇವಲ ಖಾತೆ ಬದಲಾಯಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. “ಇದು ಉತ್ತರದಾಯಿತ್ವವಲ್ಲ, ಕೇವಲ ಕಣ್ಣೊರೆಸುವ ತಂತ್ರ” ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ಕ್ರೀಡಾ ಖಾತೆ ನೀಡಿರುವುದು, ವಿಧಾನಸಭೆಯಲ್ಲಿ ರಮ್ಮಿ ಆಡಲು ಅಧಿಕೃತವಾಗಿ ಅನುಮತಿ ನೀಡಿದಂತೆಯೇ ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ಎನ್‌ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಅದರಲ್ಲಿ ಮಾಣಿಕ್ ರಾವ್ ಅವರು ವಿಧಾನಸಭೆಯಲ್ಲಿ ಕುಳಿತು ಫೋನ್‌ನಲ್ಲಿ ರಮ್ಮಿ ಆಡುತ್ತಿರುವುದು ಕಂಡುಬಂದಿತ್ತು. ಈ ವಿಡಿಯೋ ವೈರಲ್ ಆಗಿತ್ತು.
ರೈತರು ಮತ್ತು ಕೃಷಿ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತಿದ್ದಾಗ ಸಚಿವರು ಹೀಗೆ ವರ್ತಿಸಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಮಾಣಿಕ್ ರಾವ್, ತನಗೆ ರಮ್ಮಿ ಆಡುವುದಕ್ಕೆ ಬರುವುದಿಲ್ಲ ಎಂದಿದ್ದರು. ಈ ಆರೋಪಗಳಲ್ಲಿ ತಾನು ತಪ್ಪಿತಸ್ಥ ಎಂದು ಸಾಬೀತಾದರೆ ಮಾತ್ರ ರಾಜೀನಾಮೆ ನೀಡುವುದಾಗಿ ಅವರು ಸ್ಪಷ್ಟಪಡಿಸಿದ್ದರು.