ಚೆನ್ನೈ: ಲೋಕಸಭೆಯಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರುವ ಕೇಂದ್ರ ಸರ್ಕಾರದ ಆತುರದ ನಿರ್ಧಾರವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗುರುವಾರ ತೀವ್ರವಾಗಿ ಪ್ರಶ್ನಿಸಿದ್ದಾರೆ. “ಇದು ಸುಧಾರಣೆಯಲ್ಲ, ಬದಲಿಗೆ ಅಧಿಕಾರವನ್ನು ಮರುಹಂಚಿಕೆ ಮಾಡುವ ಹುನ್ನಾರ” ಎಂದು ಬಣ್ಣಿಸಿರುವ ಅವರು, ದಕ್ಷಿಣ ಭಾರತದ ಧ್ವನಿಯನ್ನು ಅಡಗಿಸಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ “ಇದು ಸುಧಾರಣೆಯಲ್ಲ, ಅಧಿಕಾರದ ಮರು-ರಚನೆ” ಎಂಬ ಶೀರ್ಷಿಕೆಯಡಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಸ್ಟಾಲಿನ್, ಮಹಿಳಾ ಮೀಸಲಾತಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ, ಇದನ್ನು ಜಾರಿಗೊಳಿಸುವ ನೆಪದಲ್ಲಿ ಲೋಕಸಭೆ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿ, ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ದಕ್ಷಿಣದ ರಾಜ್ಯಗಳಿಗೆ ಶಿಕ್ಷೆ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ಚೌಕಟ್ಟಿನಲ್ಲೇ ಇದನ್ನು ಜಾರಿಗೊಳಿಸಲು ಯಾವುದೇ ಅಡ್ಡಿಯಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆಯ (Delimitation) ಆಧಾರದ ಬಗ್ಗೆ ಕೇಂದ್ರವು ಸಂಪೂರ್ಣ ಗೌಪ್ಯತೆ ಕಾಯ್ದುಕೊಂಡಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಈ ಪ್ರಕ್ರಿಯೆಯು 1971ರ ಜನಸಂಖ್ಯೆ ಆಧಾರದ ಮೇಲೆ ನಡೆಯುತ್ತದೆಯೇ ಅಥವಾ 2021ರ ಜನಗಣತಿ ಆಧರಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಕ್ರಮವು ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಸೀಟುಗಳನ್ನು ನೀಡಿ, ದಕ್ಷಿಣ ಭಾರತದ ಪಾಲನ್ನು ಕೇವಲ ಶೇ. 24 ಕ್ಕೆ ಇಳಿಸಲಿದೆ. ಇದು ತಮಿಳುನಾಡು, ಕರ್ನಾಟಕ, ಕೇರಳ ಮತ್ತು ತೆಲಂಗಾಣದಂತಹ ರಾಜ್ಯಗಳಿಗೆ ಮಾಡುವ ದ್ರೋಹ ಎಂದು ಅವರು ಕಿಡಿಕಾರಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ದಕ್ಷಿಣದ ಇತರ ನಾಯಕರ ಕಳವಳವನ್ನು ಉಲ್ಲೇಖಿಸಿರುವ ಸ್ಟಾಲಿನ್, ಇದು ರಾಜಕೀಯ ಪ್ರೇರಿತ ಪುನರ್ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ. ಸಂಸತ್ತನ್ನು ಬಲಹೀನಗೊಳಿಸಿ, ಒಕ್ಕೂಟ ವ್ಯವಸ್ಥೆಯ ಮೇಲೆ ಆಕ್ರಮಣ ಮಾಡುವ ಮೂಲಕ ಬಿಜೆಪಿ ಪ್ರಾಬಲ್ಯವಿರುವ ಉತ್ತರ ಭಾರತಕ್ಕೆ ಹೆಚ್ಚಿನ ಅಧಿಕಾರ ನೀಡಲು ಮೋದಿ ಸರ್ಕಾರ ಮುಂದಾಗಿದೆ. ಸಂಸತ್ತಿನ ವಿಶೇಷ ಅಧಿವೇಶನ ಕರೆದಿರುವುದು ಕೇವಲ ಚುನಾವಣಾ ಲಾಭಕ್ಕಾಗಿ ಎಂಬುದು ಅವರ ವಾದವಾಗಿದೆ.
ಪ್ರಧಾನಿ ಮೋದಿ ಅವರು ಮಹಿಳಾ ಮೀಸಲಾತಿಯು ಕೋಟ್ಯಂತರ ಮಹಿಳೆಯರ ಆಕಾಂಕ್ಷೆಯ ಪ್ರತಿಬಿಂಬ ಎಂದು ಹೇಳಿದ್ದರೂ, ಸ್ಟಾಲಿನ್ ಮಾತ್ರ ಇದರ ಹಿಂದೆ ದಕ್ಷಿಣದ ರಾಜ್ಯಗಳ ರಾಜಕೀಯ ಅಸ್ತಿತ್ವವನ್ನು ಅಳಿಸುವ ಸಂಚು ಅಡಗಿದೆ ಎಂದು ಎಚ್ಚರಿಸಿದ್ದಾರೆ. ರಾಜ್ಯಗಳ ಧ್ವನಿಯನ್ನು ಕಡೆಗಣಿಸುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನದ ವಿಧಿ 1 ರ ಉಲ್ಲಂಘನೆಯಾಗಿದೆ ಎಂದು ಅವರು ಗುಡುಗಿದ್ದಾರೆ.
