ಕೋವಿಡ್ ಅನಂತರದ ಕಾಲಘಟ್ಟದಲ್ಲಿ ನಡೆದ ಹಠಾತ್ ಸಾವುಗಳ ಬಗ್ಗೆ ಅಧ್ಯಯನ ನಡೆಸಲು ತಜ್ಞರು ಹಾಗೂ ವಿಜ್ಞಾನಿಗಳನ್ನು ಒಳಗೊಂಡ ಸಮಿತಿ ರಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡಪರಿಣಾಮದಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಮುಂದೆ ಇಂತಹ ಸಾವುಗಳು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಸಮರ್ಪಕ ಸಂಶೋಧನೆ ನಡೆಸಲು ತಜ್ಞರು ಹಾಗೂ ವಿಜ್ಞಾನಿಗಳನ್ನು ಒಳಗೊಂಡ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಕೋವಿಡ್ ಕಾಲದ ಅನಂತರ ಎಳೆಯ ವಯಸ್ಸಿನವರು, ಯುವಜನರು ಸಹಿತ ಬದುಕಿ ಬಾಳಬೇಕಾದವರು ಇದ್ದಕ್ಕಿದ್ದಂತೆ ಇಲ್ಲವಾಗುತ್ತಿದ್ದಾರೆ, ಇವರನ್ನು ನಂಬಿದ ಕುಟುಂಬಗಳು ಬೀದಿಪಾಲಾಗುತ್ತಿವೆ. ಇದೊಂದು ಗಂಭೀರ ಸಮಸ್ಯೆ, ಆದಷ್ಟು ಶೀಘ್ರ ಈ ಸಮಸ್ಯೆಯ ಮೂಲ ಪತ್ತೆಮಾಡಿ, ಪರಿಹರಿಸಬೇಕು ಎನ್ನುವುದು ನನ್ನ ಯೋಚನೆಯೂ ಆಗಿತ್ತು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.